Belagavi NewsBelgaum NewsKannada NewsKarnataka NewsNationalPolitics

*ಸತೀಶ್ ಜಾರಕಿಹೊಳಿಗೆ ನಿರಾಸೆ: ಹರಿಪ್ರಸಾದಗೆ ಕೆಪಿಸಿಸಿ ಪಟ್ಟ*

ಪ್ರಗತಿವಾಹಿನಿ ಸುದ್ದಿ: ಇಂದು ರಾಜ್ಯದ ನೂತನ ಸಿಎಂ ಆಗಿ  ಡಿ.ಕೆ. ಶಿವಕುಮಾ‌ರ್ ಅವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.‌ ಇದರ ಬೆನ್ನಲ್ಲೇ ತೆರವಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎನ್ನಲಾಗಿದೆ.

ಈ ಮೂಲಕ ಮಂತ್ರಿ ಸ್ಥಾನದ ಜೊತೆ ಪಕ್ಷದ ಜವಾಬ್ದಾರಿ ಕೇಳಿದ್ದ ಸತೀಶ್ ಜಾರಕಿಹೊಳಿಗೆ ಭಾರಿ ನಿರಾಸೆಯಾಗಿದೆ. 

ರಾಜ್ಯದ ಇಡೀ ಕಾಂಗ್ರೆಸ್ ಸಂಘಟನೆಯ ಜವಾಬ್ದಾರಿಯನ್ನು ಹೊರಿಸುವ ಮೂಲಕ ದೆಹಲಿ ನಾಯಕರು ಅವರಿಗೆ ಅತ್ಯುನ್ನತ ಸ್ಥಾನಮಾನ ಕಲ್ಪಿಸಿದ್ದಾರೆ.

ಬಿ.ಕೆ. ಹರಿಪ್ರಸಾದ್ ಅವರ ಈ ದಿಢೀರ್ ನೇಮಕಾತಿಯ ಹಿಂದೆ ಹೈಕಮಾಂಡ್‌ನ ಅತ್ಯಂತ ಚಾಣಾಕ್ಷ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಸರ್ಕಾರವನ್ನು ಮುನ್ನಡೆಸಲು ಮುಂದಾಗಿರುವುದರಿಂದ ಪಕ್ಷದ ಸಂಘಟನೆಗೆ ಪೂರ್ಣ ಪ್ರಮಾಣದ ನಾಯಕರೊಬ್ಬರ ಅಗತ್ಯವಿತ್ತು. 

ನವದೆಹಲಿ ಮಟ್ಟದಲ್ಲಿ ಗಾಂಧಿ ಕುಟುಂಬ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಷ್ಟ್ರೀಯ ನಾಯಕರೊಂದಿಗೆ ದಶಕಗಳ ಕಾಲ ಅತ್ಯಂತ ನಿಕಟ ಮತ್ತು ಉತ್ತಮ ಬಾಂಧವ್ಯ ಹೊಂದಿರುವ ಬಿ.ಕೆ. ಹರಿಪ್ರಸಾದ್ ಅವರ ಹಿರಿತನವನ್ನು ಪರಿಗಣಿಸಿ ಈ ಜವಾಬ್ದಾರಿ ನೀಡಲಾಗಿದೆ. 

ಈ ಮೂಲಕ ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಹರಿಪ್ರಸಾದ್ ಅವರು ಇನ್ಮುಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿ ಉಭಯ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. 

ರಾಜ್ಯ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ಪ್ರಭಾವಿ ಧ್ವನಿಯಾಗಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಪಟ್ಟ ಸಿಕ್ಕಿರುವುದು ಸಚಿವಾಲಯ ಮತ್ತು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಹರಿಪ್ರಸಾದ್ ಎಂಬ ಅನುಭವಿ ನಾಯಕನನ್ನು ರಾಜ್ಯಕ್ಕೆ ಕಳುಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯದ ಬೆಳವಣಿಗೆ ಬಗ್ಗೆ ಸತೀಶ್​​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ತನಗೆ ಪಕ್ಷ ಯಾವ ಜವಾಬ್ದಾರಿ ಕೊಡುತ್ತೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಧಿಕೃತವಾಗಿ ಮಾಹಿತಿ ಬರುವವರೆಗೂ ಕಾಯೋಣ. ಹೈಕಮಾಂಡ್ ಹೇಳಿದ್ದನ್ನ ನಾನೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು. ನನ್ನ ಬಗ್ಗೆ ಅಪಪ್ರಚಾರ ಮಾಡಿದವರ ಬಗ್ಗೆ ಪೊಲೀಸ್ ತನಿಖೆ ಆಗ್ತಿದೆ. ನಿಜಾಂಶ ಹೊರ ಬರುತ್ತೆ ಎಂದಿದ್ದಾರೆ. ಅಲ್ಲದೆ ಡಾ.ಜಿ.ಪರಮೇಶ್ವರ್​​ ಅವರಿಗೆ ಡಿಸಿಎಂ ಸ್ಥಾನ ಸಿಕ್ಕರೆ ಒಳ್ಳೆಯದೆ. ಅವರು ಹಿರಿಯ ದಲಿತ ನಾಯಕರು ಎಂದೂ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button