*BREAKING: ಖಾತೆ ಹಂಚಿಕೆಯಾದ 24 ಗಂಟೆಯಲ್ಲೇ ಸಚಿವ ಸ್ಥಾನಕ್ಕೆರಾಜೀನಾಮೆ ನೀಡಿದ ರಾಮಲಿಂಗಾರೆಡ್ಡಿ*

ಪ್ರಗತಿವಾಹಿನಿ ಸುದ್ದಿ: ನೂತನ ಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಖಾತೆ ಹಂಚಿಕೆಯಾದ ಕೇವಲ 24 ಗಂಟೆಯಲ್ಲೇ ಸಚಿವರೊಬ್ಬರು ಪದತ್ಯಾಗ ಮಾಡಿದ್ದಾರೆ. ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ಅಸಮಾಧಾನಗೊಂಡು ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಮಲಿಂಗಾ ರೆಡ್ಡಿ ಅವರಿಗೆ ನೂತನ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಹಂಚಿಕೆಯಾಗಿತ್ತು. ಆದರೆ ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವಂತೆ ಕೇಳಿದ್ದರು. ನಗರಾಭಿವೃದ್ಧಿ ಖಾತೆ ಕೃಷ್ಣಭೈರೇಗೌಡ ಅವರಿಗೆ ಹಂಚಿಕೆಯಾಗಿದೆ.
ಇದರಿಂದ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ನಗರಾಭಿವೃದ್ಧಿ ಖಾತೆ ನೀಡುವಂತೆ ಒತ್ತಾಯಿಸಿದ್ದರು. ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಮನವೊಲಿಕೆಗೆ ಮಾಡಿದ ಯತ್ನವೂ ವಿಫಲವಾಗಿದೆ. ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದಾರೆ.
ಕೋರಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಮೊದಲು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದರು. ಬಳಿಕ ನನಗೆ ನಗರಾಭಿವೃದ್ಧಿ ಖಾತೆ ನೀಡುವುದಾಗಿ ಡಿ.ಕೆ.ಶಿವಕುಮಾರ್ 2023ರಲ್ಲಿಯೇ ಪ್ರಾಮಿಸ್ ಮಾಡಿದ್ದರು. ಮುಂದೆ ನಾನು ಸಿಎಂ ಆದಾಗ ನಿಮಗೆ ನಗರಾಭಿವೃದ್ಧಿ ಖಾತೆ ಖಚಿತ ಎಂದು ನಮ್ಮ ಮನೆಗೆ ಬಂದಾಗಲೂ ಹೇಳಿದ್ದರು. ಆದರೆ ಈಗ ಅವರೇ ಮಾತಿಗೆ ತಪ್ಪಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಅಲ್ಲದೇ ಜಲಸಂಪನ್ಮೂಲ ಖಾತೆ ಅರ್ಥ ಮಾಡಿಕೊಳ್ಳಲು ನನಗೆ ಆರು ತಿಂಗಳು ಬೇಕು. ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಇದರಿಂದ ಬೇಸರವಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಾಜೀನಾಮೆ ಪತ್ರವನ್ನು ರವಾನಿಸಿದ್ದೇನೆ. ಕಾಂಗ್ರೆಸ್ ಶಾಸಕನಾಗಿ ಮುಂದುವರೆಯುತ್ತೇನೆ. ಕಾಂಗ್ರೆಸ್ ಪಕ್ಷ ತೊರೆಯಲ್ಲ. ಶಾಸಕನಾಗಿ, ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಮಂತ್ರಿ ಆಗುವುದಿಲ್ಲ. ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಧನ್ಯವಾದಗಳು. ಬೇರೆ ಏನೂ ಮಾತನಾಡಲು ಹೋಗಲ್ಲ ಎಂದು ತಿಳಿಸಿದ್ದಾರೆ.



