
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅಕ್ಕಕೆಫೆಗಳ ವಿಸ್ತರಣೆ ;
ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಮೈಲಿಗಲ್ಲು
ಗ್ರಾಹಕರನ್ನು ಆಕರ್ಷಿಸುತ್ತಿರುವ ಅಕ್ಕ ಕೆಫೆ
ಸ್ವಸಹಾಯ ಸಂಘದ ಮಹಿಳೆಯರಿಗೆ ಆಸರೆಯಾದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರ ಮಾರ್ಗದರ್ಶನ ಹಾಗೂ ವಿಶೇಷ ಆಸಕ್ತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಜಿಲ್ಲೆಯಾದ್ಯಂತ ಮಹಿಳಾ ಸ್ವ-ಸಹಾಯ ಸಂಘಗಳ ಆರ್ಥಿಕ ಸಬಲೀಕರಣದ ಉದ್ದೇಶದಿಂದ “ಅಕ್ಕ ಕೆಫೆ” ಯೋಜನೆಯನ್ನು ಯಶಸ್ವಿಯಾಗಿ ವಿಸ್ತರಿಸಲಾಗುತ್ತಿದೆ.
ಪ್ರಸ್ತುತ ಜಿಲ್ಲಾ ಪಂಚಾಯತ ಬೆಳಗಾವಿ ಆವರಣದಲ್ಲಿನ ಅಕ್ಕ ಕೆಫೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುತ್ತಲಿನ ಸರ್ಕಾರಿ ಕಚೇರಿಗಳ ನೌಕರರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸ್ವಸಹಾಯ ಸಂಘದ ಮಹಿಳೆಯರಿಂದ ತಯಾರಾಗುವ ಆರೋಗ್ಯಕರ, ಸಾಂಪ್ರದಾಯಿಕ ಹಾಗೂ ಸಿರಿಧಾನ್ಯ ಆಧಾರಿತ ಆಹಾರಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.
ಜಿಲ್ಲಾ ಪಂಚಾಯತ ಸುತ್ತಮುತ್ತಲು ಕೋರ್ಟ್, ವಾರ್ತಾ ಇಲಾಖೆ, ಭೂದಾಖಲೆಗಳ ಇಲಾಖೆ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಕಚೇರಿಗಳು ಇವೆ. ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಚೇರಿಗಳಿಗೆ ವಿವಿಧ ಕಾರ್ಯದ ನಿಮಿತ್ತ ಆಗಮಿಸುವ ಸಾರ್ವಜನಿಕರು ಊಟ, ಉಪಹಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ ಕೆಫೆಗೆ ಭೇಟಿ ನೀಡುತ್ತಿದ್ದು, ಅಕ್ಕ ಕೆಫೆಯ ಶುಚಿ-ರುಚಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಬೆಳಗಿನ ಉಪಹಾರಕ್ಕೆ ರುಚಿಯ ಹಬ್ಬ
ಅಕ್ಕ ಕೆಫೆಯಲ್ಲಿ ಬೆಳಗಿನ ಜಾವದಿಂದಲೇ ಬಿಸಿಬಿಸಿ ಉಪಹಾರಗಳ ತಯಾರಿಕೆ ಆರಂಭವಾಗುತ್ತದೆ. ನವಣಕ್ಕಿ ಇಡ್ಲಿ, ರಾಗಿ ಇಡ್ಲಿ, ಇಡ್ಲಿ-ವಡೆ, ರಾಗಿ ದೋಸೆ, ಮಸಾಲೆ ದೋಸೆ, ನವಣಕ್ಕಿ ಉಪ್ಪಿಟ್ಟು, ಗೋಧಿ ಪೂರಿ, ಪೈನಾಪಲ್ ಶೀರಾ, ಶಾಬೂದಾಣಿ ಕಿಚಡಿ, ಗೋಧಿ ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು, ಪಲಾವ್ ಸೇರಿದಂತೆ ವಿವಿಧ ಬಗೆಯ ಆರೋಗ್ಯಕರ ಉಪಹಾರಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಮಧ್ಯಾಹ್ನದ ಊಟಕ್ಕೆ ಮನೆ ಅಡುಗೆಯ ಸವಿ
ಮಧ್ಯಾಹ್ನದ ವೇಳೆಯಲ್ಲಿ ರಾಗಿ ರೊಟ್ಟಿ ಊಟ, ಜೋಳದ ರೊಟ್ಟಿ ಊಟ, ನುಗ್ಗೆ ಸೊಪ್ಪಿನ ರೊಟ್ಟಿ, ಪಾಲಕ್ ರೊಟ್ಟಿ, ಬೀಟ್‌ರೂಟ್ ರೊಟ್ಟಿ, ಸಜ್ಜೆ ರೊಟ್ಟಿ, ಮೆಂತ್ಯ ರೊಟ್ಟಿ, ಅಗಸಿ ರೊಟ್ಟಿ ಹಾಗೂ ಕರಿಬೇವು ಸೊಪ್ಪಿನ ರೊಟ್ಟಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ರೊಟ್ಟಿಗಳು ಮತ್ತು ಕಾಯಿ ಪಲ್ಯ, ಕಾಳು ಪಲ್ಯ, ಮೊಸರು, ಶೇಂಗಾ ಚಟ್ನಿ, ಗುರಳ್ಳು ಚಟ್ನಿಗಳೊಂದಿಗೆ ಮನೆ ಅಡುಗೆಯ ಸವಿಯನ್ನು ನೀಡಲಾಗುತ್ತಿದೆ.
ಸಂಜೆಯ ಸ್ನ್ಯಾಕ್ಸ್‌ಗೂ ವಿಶೇಷ ಆಕರ್ಷಣೆ
ಸಂಜೆಯ ವೇಳೆಯಲ್ಲಿ ಭಡಂಗ, ಚುರುಮುರಿ, ಸೂಸಲಾ, ಕಾಂದಾ ಭಜಿ, ಹಾಗಲಕಾಯಿ ಭಜಿ, ಮಿರ್ಚಿ ಭಜಿ, ಸೌತೆಕಾಯಿ ಭಜಿ ಹಾಗೂ ಮೈಸೂರು ಭಜಿ ಸೇರಿದಂತೆ ಹಲವು ಬಗೆಯ ಖಾರದ ತಿನಿಸುಗಳು ಚಹಾದೊಂದಿಗೆ ಗ್ರಾಹಕರಿಗೆ ಸವಿಯಲು ಲಭ್ಯವಿವೆ.
35 ಕ್ಕೂ ಹೆಚ್ಚು ಬಗೆಯ ತಿನಿಸುಗಳು
ಅಕ್ಕ ಕೆಫೆಯಲ್ಲಿ ಇಡ್ಲಿ, ವಡೆ, ಸಾಂಬಾರ್, ಚಟ್ನಿ, ಉಪ್ಪಿಟ್ಟು, ಶೀರಾ ಸೇರಿದಂತೆ ಬೆಳಗಿನ ಉಪಹಾರದಿಂದ ಹಿಡಿದು ಮಧ್ಯಾಹ್ನದ ಊಟ ಹಾಗೂ ಸಂಜೆ ತಿಂಡಿವರೆಗೆ ಸುಮಾರು 35ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಗುಣಮಟ್ಟ ಮತ್ತು ಶುಚಿತ್ವದೊಂದಿಗೆ ತಯಾರಿಸುತ್ತಿದ್ದಾರೆ. ಜೊತೆಗೆ ಚಕ್ಕುಲಿ, ಕರೆಂಜಿ, ಲಾಡು, ಶಂಕರಪಾಳಿ, ಕೋಡಬಳೆ, ನಿಪ್ಪಟ್ಟು ಸೇರಿದಂತೆ ವಿವಿಧ ಮಿಠಾಯಿ ಹಾಗೂ ಖಾರದ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಗಣ್ಯರಿಂದ ಮೆಚ್ಚುಗೆ
ಅಕ್ಕ ಕೆಫೆಯ ಗುಣಮಟ್ಟದ ಆಹಾರ ಹಾಗೂ ಮಹಿಳೆಯರ ಸೇವೆಯನ್ನು ಈಗಾಗಲೇ ಅನೇಕ ಗಣ್ಯರು ಮೆಚ್ಚಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೇಟ್ ಹಾಗೂ ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅಕ್ಕ ಕೆಫೆಗೆ ಭೇಟಿ ನೀಡಿ ಆಹಾರವನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಬೆಳಗಾವಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಶಾಶ್ವತ ಆದಾಯದ ಮೂಲ ಕಲ್ಪಿಸುವುದು, ಸ್ಥಳೀಯ ಆಹಾರ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ, ಪೌಷ್ಟಿಕ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಅಕ್ಕ ಕೆಫೆ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಅಕ್ಕ ಕೆಫೆಗಳು ಮಹಿಳಾ ಉದ್ಯಮಶೀಲತೆ, ಸ್ವಾವಲಂಬನೆ ಹಾಗೂ ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹಕ್ಕೆ ಹೊಸ ಆಯಾಮ ನೀಡುತ್ತಿವೆ.
ಜಿಲ್ಲೆಯ ವಿವಿಧೆಡೆ ಅಕ್ಕ ಕೆಫೆ:
ಇದರ ಜೊತೆಗೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿರುವ ಅಕ್ಕ ಕೆಫೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಅಲ್ಲದೆ ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಹಾಗೂ ಪಂಚಾಯತರಾಜ್ ಇಂಜಿನಿಯರಿಂಗ್ ಕಚೇರಿ ಆವರಣದಲ್ಲಿ ಕೂಡ ಅಕ್ಕ ಕೆಫೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೈಲಹೊಂಗಲ, ಚಿಕ್ಕೋಡಿ, ಹುಕ್ಕೇರಿ, ಖಾನಾಪೂರ ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಅಕ್ಕ ಕೆಫೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳು ಕೂಡ ಆರಂಭವಾಗಲಿವೆ.
================================
“ಜಿಲ್ಲಾ ಪಂಚಾಯತ ಆವರಣದಲ್ಲಿರುವ ಅಕ್ಕ ಕೆಫೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟ ಹಾಗೂ ರುಚಿಕಟ್ಟಾದ ಊಟ, ಉಪಹಾರ ಗ್ರಾಹಕರನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಮತ್ತೆರಡು ಸ್ಥಳಗಳು ಹಾಗೂ ವಿವಿಧ ತಾಲೂಕುಗಳಲ್ಲಿ ಕೂಡ ಅಕ್ಕ ಕೆಫೆಗಳು ಕಾರ್ಯಾರಂಭಗೊಳ್ಳಲಿವೆ”.
== ಶ್ರೀ ರಾಹುಲ್ ಶಿಂಧೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ ಬೆಳಗಾವಿ.



