EducationKannada NewsKarnataka NewsLife StyleNationalPolitics

*ಸಂತರ ಸನ್ನಿಧಿಯಲ್ಲಿ ಭಾರತೀಯ ಸಂತ ಮಹಾಪರಿಷತ್ ಕಾರ್ಯಕರ್ತರ ಸಭೆ*

ಪ್ರಗತಿವಾಹಿನಿ ಸುದ್ದಿ, ಶಿರಸಿ: ಜಿಲ್ಲೆಯ ಎಲ್ಲ ತಾಲೂಕು ಮಟ್ಟದಲ್ಲಿಯೂ ಮಕ್ಕಳಿಗೆ ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ  ಮತ್ತು ಎಲ್ಲ ನಾಗರೀಕರಿಗೆ ಏಕರೂಪ ಆಚಾರಸಂಹಿತೆ ಇವುಗಳನ್ನು ನೀಡುವ ಉದ್ದೇಶದಿಂದ ಸಮಿತಿಗಳನ್ನು ರಚಿಸುವುದು ಹಾಗೂ ಕುಮಟಾದಲ್ಲಿ ಭಾರತೀಯ ಸಂತ ಮಹಾಪರಿಷತ್ ಆಶ್ರಯದಲ್ಲಿ ಮತ್ತೊಂದು ಕಾರ್ಯಕರ್ತರ ಸಮಾವೇಶವನ್ನು ಸಂತರ ಸಾನ್ನಿಧ್ಯದಲ್ಲಿ ಆಯೋಜಿಸುವ ಕುರಿತು ನಗರದ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆದ ರಾಜ್ಯ ಮಟ್ಟದ ಸಂತರ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ಕೈಗೊಳ್ಳಲಾಯಿತು.

ಹರಿಹರಪುರ ಮಠದ ಮಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳು, ಕೈಲಾಸಾಶ್ರಮದ ಶೀ ಜಯೇಂದ್ರ ಪುರಿ ಶ್ರೀಗಳು ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಹದಿನೈದಕ್ಕೂ ಅಧಿಕ ಸಂತರು ಭಾಗವಹಿಸಿದ್ದರು.

ಭಾರತೀಯ ಸಂಸ್ಕೃತಿಯ ಶಿಕ್ಷಣದಿಂದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯಲು ಸಮಾಜದ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಸಂತರು ಅಭಿಪ್ರಾಯಪಟ್ಟರು.

ಮಕ್ಕಳ ವ್ಯಕ್ತಿತ್ವ ಸಮಗ್ರವಾಗಿ ವಿಕಸನಗೊಳ್ಳಲು ಮೌಲ್ಯಯುತವಾದ ಶಿಕ್ಷಣವನ್ನು ನೀಡುವಂತಾಗಬೇಕು. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ನೀಡಬೇಕಾದ ಅನೇಕ ಜೀವನ ಮೌಲ್ಯಗಳನ್ನು ನೀಡಲು ನಾವು ಮರೆತಿದ್ದೇವೆ. ಈ ಕೊರತೆಯನ್ನು ನೀಗಿಸಲು ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ ಅಗತ್ಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Home add -Advt

ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯತೆಯಿದ್ದು, ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬಾಲ್ಯದಲ್ಲಿಯೇ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ತಿಳಿಸಲಾಯಿತು. 

ಈ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ದೇಶಭಕ್ತಿ, ಧಾರ್ಮಿಕ ಸಹಿಷ್ಣುತೆ, ಹಿರಿಯರಿಗೆ ಗೌರವ, ಕುಟುಂಬ ಮೌಲ್ಯಗಳು, ನೈತಿಕತೆ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿ ಸೇರಿದಂತೆ ಭಾರತೀಯ ಸಂಸ್ಕೃತಿಯ ಮೂಲಭೂತ ಅಂಶಗಳನ್ನು ಪರಿಚಯಿಸುವ ಮೂಲಕ ಉತ್ತಮ ನಾಗರಿಕರನ್ನು ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. 

ಈ ಸಂಸ್ಕಾರ ಶಿಕ್ಷಣ ಕಾರ್ಯಕ್ರಮವು ಎಂಟು ವರ್ಷಗಳ ಅವಧಿಯದ್ದಾಗಿದ್ದು, ಸಂತರ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿ ಪಡೆದ ಬೋಧಕರಿಂದ ಪಾಠ ಬೋಧನೆ ನಡೆಯಲಿದೆ. ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸಾಮಾನ್ಯ ಸಂಸ್ಕಾರ ಕೇಂದ್ರಗಳ ಮೂಲಕ ಕ್ರಮಬದ್ಧ ಶಿಕ್ಷಣ ನೀಡಲಾಗುತ್ತದೆ. ಯಾವುದೇ ಜಾತಿ, ಮತ, ಭಾಷೆ ಅಥವಾ ಸಾಮಾಜಿಕ ಬೇಧಭಾವವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ವೇದಿಕೆಯಲ್ಲಿ ಶಿಕ್ಷಣ ಕಲ್ಪಿಸಲಾಗುವುದು ಎಂದು ತಿಳಿಸಲಾಯಿತು.

ಈ ಶಿಕ್ಷಣದ ಅವಧಿಯನ್ನು ೨ರಿಂದ ೫ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಸಂಜೆ ೪ರಿಂದ ೫ ಗಂಟೆಯವರೆಗೆ ಹಾಗೂ ೬ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರ ಸಂಜೆ ೪ರಿಂದ ೫ ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಶಿಸ್ತು, ನೈತಿಕ ಮೌಲ್ಯಗಳು ಮತ್ತು ಸಮಾಜಮುಖಿ ಚಿಂತನೆಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಲಾಯಿತು.

ಸಮಾಜದ ವಿವಿಧ ವರ್ಗಗಳ ಜನರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ತೀರ್ಮಾನಿಸಲಾಯಿತು. ಭಾರತೀಯ ಸಂಸ್ಕೃತಿಯ ಉಳಿವು ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಕಾರ ಶಿಕ್ಷಣ ಅತ್ಯವಶ್ಯಕವಾಗಿದ್ದು, ಸಮಾಜದ ಎಲ್ಲ ವರ್ಗದ ಜನರು ಈ ಮಹತ್ವದ ಕಾರ್ಯದಲ್ಲಿ ಕೈಜೋಡಿಸಬೇಕು. 

ಆಯಾ ತಾಲೂಕಿನ ದೇವಸ್ಥಾನಗಳಲ್ಲಿ ಸಭೆಗಳನ್ನು ನಡೆಸಿ, ಈ ಬಗ್ಗೆ ಒಮ್ಮತ ಮೂಡಿಸುವ ಹಾಗೂ ಜನರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯ ನಡೆಯಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು.

ಸಭೆಯಲ್ಲಿ ಶ್ರೀ ಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮೀಜಿ, ಬೆಂಗಳೂರಿನ ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಬಣ್ಣದ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ, ಶೀಗೇಹಳ್ಳಿ ಮಠದ ಪ್ರಣವಾನಂದ ಸ್ವಾಮೀಜಿ, ಯಡೋದಾದ ಮಾತಾ ನಿರ್ಮಲಾನಂದಾದೇವಿ, ಹಳಿಯಾಳದ ಶ್ರೀ ಭವೇಶಾನಂದ ಶ್ರೀಗಳು, ಸಾಲಗಾಂವದ ವಿರೂಪಾಕ್ಷೇಶ್ವರ ಮಹಾರಾಜರು, ಮುಂಡಗೋಡದ ಬೌದ್ಧ ಲಾಮಾಗಳಾದ ಗುನಡುನ್ ಗ್ಯಾಸ್ಟೋ ಹಾಗೂ ಜಂಪಾ ಲೋಬಸಂಗ್, ತಡಸದ ಮಾತಾ ನಂದಾದೇವಿ, ಹನುಮಾಪುರದ ಡಾ. ಸೋಮಶೇಖರ ಶಿವಾಚಾರ್ಯ ಹಾಗೂ ಮುಂಡಗೋಡದ ರುದ್ರಮುನಿ ಸ್ವಾಮೀಜಿಗಳು ಸಾನ್ನಿಧ್ಯ ನೀಡಿದ್ದರು. 

ಮಾರಿಗುಡಿ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದರು. ಆಕಾಶ್ ವಿಶ್ವಾಮಿತ್ರ ನಿರ್ವಹಿಸಿದರು. ಸ್ವರ್ಣವಲ್ಲೀ ಮಠದ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಶ್ರೀಕಾಂತ ಅಗಸಾಲ ವಂದಿಸಿದರು.

ಮುಖ್ಯಾಶಂಗಳು

ಮಕ್ಕಳ ಪರಿಪೂರ್ಣ ಜೀವನಕ್ಕಾಗಿ ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ

ಪ್ರತಿ‌ ಶನಿವಾರ, ಭಾನುವಾರ ಒಂದು ಗಂಟೆಯ ತರಬೇತಿ

ಭಾರತೀಯ ನೆಲದ ಶಿಕ್ಷಣ, ಸಂಸ್ಕಾರ‌ ಕೊಡುವ ಪ್ರಯತ್ನ

ಪ್ರತಿಯೊಂದು‌ ಮಗುವಿನ ವಯಕ್ತಿಕ ಉನ್ನತಿ, ಕುಟುಂಬ ಕ್ಷೇಮ, ಸಮಾಜದ ಹಿತ, ದೇಶದ ಅಭಿವೃದ್ದಿ ವಿಶ್ವದ ಕಲ್ಯಾಣಕ್ಕೆ ಆದ್ಯತೆ

ಭಾರತೀಯ ಸಂಸ್ಕೃತಿಗೆ ಸೇರಿದ ಪ್ರತಿಯೊಬ್ಬರಿಗೆ ಏಕರೂಪ ಆಚಾರ ಸಂಹಿತೆಯ ಅಳವಡಿಕೆ. 

ಸಂಧ್ಯಾಪ್ರಾರ್ಥನೆ,  ಸ್ವಾಧ್ಯಾಯ ಸದಾಚಾರ, ಸಮೈಕ್ಯ(ಸಮಾನತೆ ಮತ್ತು ಏಕತೆಯ ಭಾವನೆ)  ಸಹಯೋಗ (ಒಟ್ಟಾಗಿ ಮಾಡುವ ಪ್ರಕೃತಿ ಮತ್ತು ಜೀವಸಂಕುಲಗಳ ರಕ್ಷಣೆ)

Related Articles

Back to top button