Kannada NewsKarnataka NewsLatestNational

*ಪಂಡರಪುರದಲ್ಲಿ ಭೀಕರ ದುರಂತ: ಬಾವಿಗೆ ವಾಹನ ಬಿದ್ದು 14 ಜನ ಸಾವು*

ಪ್ರಗತಿವಾಹಿನಿ ಸುದ್ದಿ : ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪಂಢರಪುರದಲ್ಲಿ ಭೀಕರ ದುರಂತ ಸಂಭವಿಸಿದೆ. ವಿಠಲನ ದರ್ಶನ ಮುಗಿಸಿ ಭಕ್ತರನ್ನು ಹೊತ್ತು ಸಾಗುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಬಾವಿಗೆ ಉರುಳಿ ಬಿದ್ದು, 14 ಭಕ್ತರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Home add -Advt

 ಪಂಢರಪುರ ವಿಠಲನ ದರ್ಶನ ಪಡೆದು ಹಿಂದಿರುಗುತ್ತಿದ್ದ ಯಾತ್ರಿಕರ ಗುಂಪು ಈ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿತ್ತು. ಚಲಿಸುತ್ತಿದ್ದ ವೇಳೆ ಚಾಲಕನಿಗೆ ಇದ್ದಕ್ಕಿದ್ದಂತೆ ವಾಹನದ ಮೇಲಿನ ನಿಯಂತ್ರಣ ತಪ್ಪಿದೆ. ವೇಗವಾಗಿದ್ದ ವಾಹನ ರಸ್ತೆಯಿಂದ ಪಕ್ಕಕ್ಕೆ ಸರಿದು, ನೇರವಾಗಿ ದೊಡ್ಡದಾದ ಬಾವಿಗೆ ಬಿದ್ದಿದೆ. ವಾಹನವು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದರಿಂದ, ಅದರ ಒಳಗಿದ್ದ ಪ್ರಯಾಣಿಕರು ಹೊರಬರಲಾರದೆ ನೀರಿನಲ್ಲೇ ಸಿಲುಕಿಕೊಂಡರು ಎನ್ನಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು, ವಿಪತ್ತು ನಿರ್ವಹಣಾ ತಂಡಗಳು ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. 

ಬಾವಿಯ ನೀರಿನಿಂದ ಇದುವರೆಗೆ ಕನಿಷ್ಠ 14 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಕೆಲವು ಪ್ರಯಾಣಿಕರನ್ನು ರಕ್ಷಣಾ ಸಿಬ್ಬಂದಿ ಸಕಾಲದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. 

ಗಾಯಗೊಂಡಿರುವ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ದೇವರ ದರ್ಶನ ಮುಗಿಸಿ ಮನೆಗೆ ಮರಳುವ ಮುನ್ನವೇ ಭಕ್ತರು ಸಾವಿನ ಮನೆ ಸೇರಿದ ಈ ಭೀಕರ ದುರಂತ ಇಡೀ ಪಂಢರಪುರ ನಗರವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

Related Articles

Back to top button