CrimeKarnataka NewsLatest

*ಅಶ್ಲೀಲ ಮೆಸೇಜ್: ರೇಣುಕಾಸ್ವಾಮಿ ಹತ್ಯೆ ಮಾದರಿಯಲ್ಲಿಯೇ ಯುವಕನ ಬರ್ಬರ ಕೊಲೆ*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲೇ ಬಳ್ಳಾರಿಯಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಸನಗೌಡ ಕೊಲೆಯಾದ ಯುವಕ. ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸನಗೌಡನನ್ನು ಬಳ್ಳಾರಿ ತಾಲ್ಲೂಕಿನ ಮೋಕಾ ಸಮೀಪ ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿತ್ತು. ಮರುದಿನ ಬೆಳಗ್ಗೆ ಮೋಕಾ ಬಳಿಯ ಎಲ್‌ಎಲ್‌ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

Home add -Advt

ಪ್ರಕರಣದ ತನಿಖೆ ನಡೆಸಿದ ಮೋಕಾ ಠಾಣೆ ಪೊಲೀಸರು, ಇದು ಪೂರ್ವಯೋಜಿತ ಕೊಲೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಬಸನಗೌಡನ ಅಣ್ಣನಿಗೆ ಮಹಿಳೆಯ ತಂಗಿಯನ್ನ ಮದುವೆ ಮಾಡಿಕೊಡಲಾಗಿತ್ತು. ಸಂಬಂಧದಲ್ಲಿ ಅತ್ತಿಗೆಯಾಗಬೇಕಿದ್ದ ಮಹಿಳೆಗೆ ಬಸನಗೌಡ ಕಳೆದ ಎರಡು ವರ್ಷಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದ. ಮದುವೆ ಸಮಾರಂಭವೊಂದರಲ್ಲಿ ಪರಿಚಯವಾದ ಬಳಿಕ ಬಸನಗೌಡ, ಮಹಿಳೆಗೆ ಕೆಟ್ಟ ಮೆಸೇಜ್‌ಗಳು ಹಾಗೂ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ. ಒಂದು ವರ್ಷದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಈ ವಿಷಯವನ್ನು ತನ್ನ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್‌ಗೆ ತಿಳಿಸಿದ್ದಾಳೆ.

ಇದಾದ ಬಳಿಕ ಮೂವರು ಸೇರಿ ಬಸನಗೌಡನ ಕೊಲೆಗೆ ಸಂಚು ರೂಪಿಸಿದ್ದಾರೆ. ಮಹಿಳೆಯಿಂದ ಪೋನ್ ಮಾಡಿಸಿ ಬಸನಗೌಡನನ್ನು ಕರೆಸಿಕೊಂಡಿದ್ದಾರೆ. ಆಕೆಯ ಗಂಡ ಮತ್ತು ಸಹೋದರ ಸೇರಿ ಬಸನಗೌಡನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಸುಮಾರು 10 ಕಿಲೋಮೀಟರ್ ದೂರದ ಕಾಲುವೆ ಸಮೀಪದ ನಿರ್ಜನ ಪ್ರದೇಶಕ್ಕೆ ಮೃತದೇಹವನ್ನು ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಪ್ರಕರಣ ಸಂಬಂಧ ಮಹಿಳೆ, ಆಕೆಯ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Back to top button