Belagavi NewsBelgaum NewsKannada NewsKarnataka News

*ಎಸ್ಐಆರ್ ಯಶಸ್ವಿಗೆ ನಗರ ಸೇವಕರ ಸಹಕಾರ ಅಗತ್ಯ: ಪಾಲಿಕೆ ಆಯುಕ್ತ ಕಾರ್ತಿಕ್ ಎಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣಾ ಆಯೋಗದ ಆದೇಶದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ  ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಆರಂಭವಾಗಲಿದ್ದು, ಯಶಸ್ವಿಗೆ ನಗರ ಸೇವಕರ ಸಹಕಾರ ಅಗತ್ಯವಾಗಿ ಬೇಕೆಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಕೋರಿದರು.

ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ  ಗುರುವಾರ  ನಗರಸೇವಕರಿಗಾಗಿ ಆಯೋಜಿಸಲಾಗಿದ್ದ ಎಸ್ಐಆರ್ ಕುರಿತ ಮಾಹಿತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಉತ್ತರ ದಕ್ಷಿಣ ಎರಡು ವಿಭಾಗಗಳಿದ್ದು, ದಕ್ಷಿಣಕ್ಕೆ ಚುನಾವಣಾ ಅಧಿಕಾರಿಯಾಗಿ ನಾನು, ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಂದಾಯ ವಿಭಾಗದ ಉಪ ಆಯುಕ್ತ  ಡಾ. ಸಿದ್ದು ಹುಲ್ಲೋಳಿ ಹಾಗೂ ಉತ್ತರ ಭಾಗದ ಚುನಾವಣಾ ಅಧಿಕಾರಿಯಾಗಿ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ  ಉದಯಕುಮಾರ ತಳವಾರ, ಸಹ ಚುನಾವಣಾ ಅಧಿಕಾರಿಯಾಗಿ ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಲಕ್ಷ್ಮೀ ನಿಪ್ಪಾಣಿಕರ್ ನೇಮಕಗೊಂಡಿದ್ದಾರೆ .

40 ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಉತ್ತರ ದಕ್ಷಿಣ ಸೇರಿ ಒಟ್ಟು 514 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುವರು. ಈಗಾಗಲೇ ಉತ್ತರ, ದಕ್ಷಿಣ ದಲ್ಲಿ ಶೇ.75. 90 ರಷ್ಟು ಮ್ಯಾಪಿಂಗ್ ಕಾರ್ಯ ಮುಗಿದಿದ್ದು, ಶೇ.90ರ ಗುರಿ ಹೊಂದಲಾಗಿದೆ.  ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೂ. 30 ರಿಂದ ಜು 29 ರವರಿಗೆ ಕಾರ್ಯ ನಡೆಯಲಿದೆ. ನಿಯೋಜಿಸಲಾಗಿರುವ ಆಯಾ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ಆರಂಭ ಮಾಡಲಿದ್ದಾರೆ. ಇದೊಂದು ಚುನಾವಣಾ ಸಿಬ್ಬಂದಿಯನ್ನು ಒಳಗೊಂಡ ಪಾರದರ್ಶಕ ಪ್ರಕ್ರಿಯೆಯಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳ ವಿತರಣೆ ಮತ್ತು ಸಂಗ್ರಹಕ್ಕಾಗಿ ಮನೆಗಳಿಗೆ ಭೇಟಿ ನೀಡಲಿದ್ದಾರೆ. 

Home add -Advt

ಸಿಬ್ಬಂದಿಗೆ ಮತ್ತು ಮತದಾರರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ನಗರಸೇವಕರು ತಮ್ಮ ತಮ್ಮ ವಾರ್ಡಗಳ ಮತದಾರರಲ್ಲಿ ಜಾಗೃತಿಯನ್ನು ಉಂಟು ಮಾಡಬೇಕು ಅಲ್ಲದೆ ಈ ಕುರಿತ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಸಿಬ್ಬಂದಿ ಅಧಿಕಾರಿ ಗಮನಕ್ಕೆ ತರಬೇಕು. 

ಈ ಕುರಿತು ತಮ್ಮೆಲ್ಲರ ಸಲಹೆ ಸೂಚನೆಗಳನ್ನು  ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿರುವ ಮತದಾರರು ತಮ್ಮ ನಾಗರಿಕತ್ವ ಮತ್ತು ಮತದಾನದ ಹಕ್ಕನ್ನು ಖಾತರಿಪಡಿಸಿಕೊಳ್ಳಲು. ಈ ಮಹತ್ವದ ಪ್ರಕ್ರಿಯೆ ನಡೆಯುತ್ತಿದ್ದು,

ಅರ್ಹ ಮತದಾರರನ್ನು ಗುರುತಿಸಲು ಅನುವು ಮಾಡಿಕೊಡುವ ರಾಷ್ಟ್ರದ ಮಹತ್ವದ ಕಾರ್ಯಕ್ಕೆ ನಗರಸೇವಕರೆಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಕಂದಾಯ ವಿಭಾಗದ ಉಪ ಆಯುಕ್ತ, ದಕ್ಷಿಣ ವಿಭಾಗದ ಸ.ಚುನಾವಣಾ ಅಧಿಕಾರಿ ಡಾ. ಸಿದ್ದು ಹುಲ್ಲೋಳಿ ಅವರು ಎಸ್ಐಆರ್ ಕುರಿತು ಪ್ರಾತ್ಯಕ್ಷಿಕೆ ಸಹಿತ ಸಮಗ್ರ ಮಾಹಿತಿ ನೀಡಿದರಲ್ಲದೇ ನಗರಸೇವಕರ ಅನೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.

ಮೇಯರ್ ಪ್ರೀತಿ ಕಾಮಕರ, ಉಪ ಮಹಾಪೌರ ಹಣಮಂತ ಕೊಂಗಾಲಿ, ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್, ವಿರೋಧ ಪಕ್ಷದ ನಾಯಕ ಮೊಹಮ್ಮದ ಸೋಹೈಲ್ ಸಂಗೊಳ್ಳಿ ಹಾಗೂ ನಗರಸೇವಕರು, ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ, ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ. ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button