Karnataka NewsLatestPolitics

*ಘನತ್ಯಾಜ್ಯದಿಂದ “ಹಸಿರು ಇದ್ದಿಲು” ಉತ್ಪಾದನಾ ಘಟಕ ಹುಬ್ಬಳ್ಳಿಯಲ್ಲಿ ಶೀಘ್ರ ಆರಂಭ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ; ಘನ ತ್ಯಾಜ್ಯದಿಂದ “ಹಸಿರು ಇದ್ದಿಲು” ಉತ್ಪಾದಿಸುವ ದೇಶದ ಎರಡನೇ ಘಟಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ₹78 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಘಟಕವನ್ನು ಅತಿ ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ವಾರಣಾಸಿ ಬಿಟ್ಟರೆ ಹುಬ್ಬಳ್ಳಿಯಲ್ಲೇ ಘನ ತ್ಯಾಜ್ಯ ಸಂಸ್ಕರಣ “ಹಸಿರು ಇದ್ದಿಲು” ಉತ್ಪಾದಿಸುವ ಅತ್ಯಾಧುನಿಕ ಉತ್ಪಾದನಾ ಘಟಕ ಸ್ಥಾಪಿಸಿದೆ. ಇದರಿಂದ ಮಹಾನಗರದ ಕಸಕ್ಕೆ ಮುಕ್ತಿ ದೊರೆಯಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಹಸಿರು ಇದ್ದಿಲು ಉತ್ಪಾದನಾ ಘಟಕವಿರುವ ಪ್ರದೇಶಕ್ಕೆ ತೆರಳಲು ₹3 ಕೋಟಿ ವೆಚ್ಚದಲ್ಲಿ ರಸ್ತೆ ಸಹ ನಿರ್ಮಿಸಲಾಗುತ್ತಿದೆ. ಇದನ್ನು ಸಹ ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

Home add -Advt

ಇಡೀ ವೇಳೆ, ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸುತ್ತಿರುವ ಬೃಹತ್ ಕ್ರೀಡಾ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾ ಸಂಕೀರ್ಣ ಈಜುಕೋಳ, ಶೂಟಿಂಗ್ ಕೇಂದ್ರ, ಬಾಸ್ಕೇಟ್ ಬಾಲ್, ಬ್ಯಾಡ್ಮಿಂಟನ್ ಕೋಟ್ ವೀಕ್ಷಿಸಿದರು. ಈ ವೇಳೆ ಕಾಮಗಾರಿ ಯಾವ ಹಂತದಲ್ಲಿದೆ? ಇನ್ನೆಷ್ಟು ಬಾಕಿ ಉಳಿದಿದೆ? ಮತ್ತು ಅನುದಾನ ಬಳಕೆ ಬಗ್ಗೆ ಮಾಹಿತಿ ಪಡೆದು, ತಕ್ಷಣ ಉಳಿದ ಕಾಮಗಾರಿ ತಕ್ಷಣ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ₹ 175 ಕೋಟಿ ವೆಚ್ಚದಲ್ಲಿ ಬೃಹತ್ ಕ್ರೀಡಾ ಸಂಕೀರ್ಣದ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದೆ. ಸಣ್ಣ ಪುಟ್ಟ ಕೆಲಸ ಬಾಕಿಯಿದ್ದು, ಈಗಾಗಲೇ ಶೇ.91ರಷ್ಟು ಅನುದಾನ ಸಹ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಇದರ ಉದ್ಘಾಟನೆ ಸಹ ನೆರವೇರಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಮಟ್ಟದಲ್ಲಿ ನಿರ್ವಹಣೆ: ಈ ಬೃಹತ್ ಕ್ರೀಡಾ ಸಂಕೀರ್ಣಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಿದೆ. ಇದರ ನಿರ್ವಹಣೆ, ಇನ್ನಿತರ ಕಾರ್ಯಗಳು ರಾಜ್ಯ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಕ್ರೀಡಾ ಸಚಿವ ಜಿ.ಪರಮೇಶ್ವರ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ. ಕೇಂದ್ರದಿಂದ ಏನೇ ಸಹಕಾರ ಬೇಕಿದ್ದರೂ ನೀಡುತ್ತೇವೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಧ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ತ್ವರಿತವಾಗಿ ಮುಗಿಯಲಿದೆ. ಭೂಸ್ವಾದಿನ ಸೇರಿದಂತೆ ಅನೇಕ ತಾಂತ್ರಿಕ ಸಮಸ್ಯೆಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಆಗಿಲ್ಲ. ಸದ್ಯ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದರು.

ಧಾರವಾಡದಲ್ಲಿ ವಿಧಿ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ರೈಲು ಮಾರ್ಗ ಬದಲು; ಇಲ್ಲ ತೊಂದರೆ:
“ಮೈಸೂರು-ಪಂಢರಾಪುರ ಗೋಲ್ ಗುಂಬಜ್ ರೈಲು ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದಿಂದ ಸಂಚರಿಸಲಿದ್ದು, ಹುಬ್ಬಳ್ಳಿಯವರಿಗೆ ಏನೂ ತೊಂದರೆಯಿಲ್ಲ” ಎಂದು ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ವಿಜಯಪುರ, ಬಾಗಲಕೋಟೆ ಸಂಸದರ ಬಹುದಿನದ ಬೇಡಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಈಗ ಸಾಕಷ್ಟು ರೈಲುಗಳಿವೆ. ಹಾಗಾಗಿ ಆ ಭಾಗದವರಿಗೂ ಅನುಕೂಲವಾಗಲೆಂದು ಈ ರೈಲು ಮಾರ್ಗ ಬದಲಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೊಷ ಚವ್ಹಾಣ, ಸದಸ್ಯ ತಿಪ್ಪಣ್ಣ ಮಜ್ಜಗಿ, ಆಯುಕ್ತ ಡಾ.ರುದ್ರೇಶ ಘಾಳಿ, ಪ್ರಭು ನವಲಗುಂದಮಠ, ಅನುಪ ಬಿಜವಾಡ ಇತರರಿದ್ದರು.

Related Articles

Back to top button