*ಮತ ಕೊಟ್ಟರೆ ಕಿಸೆಗೆ ₹50 ಕೋಟಿ; ಕ್ಷೇತ್ರಕ್ಕೆ ₹100 ಕೋಟಿ ಅನುದಾನದು ಆಮಿಷವೊಡ್ಡಲಾಅಗಿದೆ: ಹೆಚ್.ಡಿ.ಕೆ ಗಂಭೀರ ಆರೋಪ*

ಬೇರೆಡೆ ಅನುಕೂಲ ಇದ್ದರೆ ಹೋಗಬಹುದು ಎಂದು ಶಾಸಕರಿಗೆ ಹೇಳಿದ್ದೇನೆ ಎಂದ ಕುಮಾರಸ್ವಾಮಿ
ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಉಂಟಾಗುವುದಿಲ್ಲ. ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯೂ ಅಲ್ಲ ಹಾಗೂ ನಮ್ಮ ನಡುವೆ ಬಿಕ್ಕಟ್ಟು ಸೃಷ್ಟಿಸಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ನಾನು ನಮ್ಮ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕೆ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್. ಅಶೋಕ್ ಅವರೊಂದಿಗೆ ಚರ್ಚೆ ನಡೆಸಿ ಅವರೆಲ್ಲರ ಸಹಮತದಿಂದ ಅಭ್ಯರ್ಥಿಯನ್ನು ಹಾಕಲಾಯಿತು. ಹೀಗಾಗಿ ನಮ್ಮ ಮೈತ್ರಿಯಲ್ಲಿ ಬಿರುಕು ಬರುವ ಪ್ರಶ್ನೆ ಇಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ನಮ್ಮ ಶಾಸಕರಿಗೆ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸಗಳು ಆಗಿಲ್ಲ. ಕಾರ್ಯಕರ್ತರು ಹಾಗೂ ಸಾರ್ವಜನಿಕರ ಒತ್ತಡದ ಕಾರಣಕ್ಕೆ ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಇದು ನಮ್ಮ ಪಕ್ಷದ ಶಾಸಕರ ಪರಿಸ್ಥಿತಿ ಅಷ್ಟೇ ಅಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಪರಿಸ್ಥಿತಿಯೂ ಇದೇ ಆಗಿದೆ. ಆ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ ಎಂದು ಹೇಳಬಹುದು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟರೆ ನಿಮಗೆ (ಕಿಸೆಗೆ) ₹50 ಕೋಟಿ ಕೊಡುತ್ತೇವೆ, ಅದರ ಜೊತೆಗೆ ₹100 ಕೋಟಿ ಅನುದಾನ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಆ ಆಮಿಷಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಪಕ್ಷದ ನೇತೃತ್ವ ವಹಿಸಿ ಸಂಘಟನೆ ಮಾಡುತ್ತಿದ್ದೇನೆ. ಈ ಎಲೆಕ್ಷನ್ ಏನಾಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲವೇ? ಸುಖಾಸುಮ್ಮನೆ ಅಭ್ಯರ್ಥಿಯನ್ನು ಹಾಕಲಿಕ್ಕೆ ನಾನೇನು ಮೂರ್ಖನಲ್ಲ. ಏಕೆಂದರೆ, ನಮಗೆ ಇದ್ದಿದ್ದು ಕೇವಲ 18 ಸೀಟು. ಅದರಲ್ಲಿ ಒಬ್ಬರು ಈಗಾಗಲೇ ಕಾಲು ಹೊರಗೆ ಇಟ್ಟಿದ್ದಾರೆ. ಹೀಗಾಗಿ ನಮ್ಮಲ್ಲಿ ಉಳಿದಿದ್ದು 17 ಶಾಸಕರು ಮಾತ್ರ ಹಾಗೂ ಬಿಜೆಪಿಯ ಹೆಚ್ಚುವರಿ 6 ಮತಗಳು ಬರಬಹುದು ಎನ್ನುವುದು ನಮಗಷ್ಟೇ ಅಲ್ಲ, ಎಲ್ಲರ ನಿರೀಕ್ಷೆಯು ಆಗಿತ್ತು. ಹೀಗೆಯೇ ಎಲ್ಲಾ ಸೇರಿ ಒಟ್ಟಾರೆ ನಮ್ಮ ಅಭ್ಯರ್ಥಿಗೆ 24 ಮತಗಳು ಬರಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದೆವು. ಆದರೆ, ಕೆಲ ಶಾಸಕರು ಪಕ್ಷದ ಜೊತೆ ಗಟ್ಟಿಯಾಗಿ ನಿಲ್ಲಲಿಲ್ಲ. ಅನುದಾನಕ್ಕಾಗಿ ಚಂಚಲರಾಗಿದ್ದಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಕೇವಲ ಈ ನೆಪ ಇಟ್ಟುಕೊಂಡು ನಮ್ಮ ನಡುವೆ ಬಿಕ್ಕಟು ಸೃಷ್ಟಿಸಬಹುದು ಎಂದು ಕಾಂಗ್ರೆಸ್ ಪಕ್ಷ ನಂಬಿದ್ದರೆ ಅವರಿಗೆ ನಿರಾಶೆ ಆಗುವುದು ಖಚಿತ. ಅವರ ಆಸೆ ಖಂಡಿತಾ ಕೈಗೂಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.
ಪರಿಷತ್ ಚುನಾವಣೆ ಮುಂದಿನ ವಿಧಾನಸಭೆಗೆ ದಿಕ್ಸೂಚಿ ಅಲ್ಲ ಎಂಬ ಮಾತನ್ನು ನಾನು ಒತ್ತಿ ಒತ್ತಿ ಹೇಳಬಯಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಮಿತ್ರಪಕ್ಷಗಳು ಒಟ್ಟಾಗಿ ಜನರ ಮುಂದೆ ಹೋಗುತ್ತೇವೆ. ನಮ್ಮ ನಡುವೆ ಯಾವುದೇ ರೀತಿಯ ಹೊಂದಾಣಿಕೆಯ ಕೊರತೆಯಾಗಲಿ, ವಿಶ್ವಾಸದ ಕೊರತೆಯಾಗಲಿ ಇಲ್ಲ. ನಮಗೆ ಜನಾದೇಶ ಸಿಗುತ್ತದೆ. ಈ ಜನವಿರೋಧಿ ಸರ್ಕಾರವನ್ನು ತೊಲಗಿಸುತ್ತೇವೆ. ಅಡ್ಡ ಮತದಾನ ಮಾಡಿದಾಕ್ಷಣ ಪಕ್ಷ ಮುಳುಗಿ ಹೋಗುವುದಿಲ್ಲ. 2017ರಲ್ಲಿ ರಾಜ್ಯಸಭೆ ಚುನಾವಣೆ ನಡೆದಾಗ ನಮ್ಮ ಪಕ್ಷದ ಆರೇಳು ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಆನಂತರ ಆ ಪಕ್ಷವನ್ನೇ ಸೇರಿದರು. ನಂತರ ನಡೆದ ಚುನಾವಣೆಯಲ್ಲಿ ಬಹುತೇಕ ಎಲ್ಲರೂ ಸೋತರು. ಆ ಪಕ್ಷವೂ ಸೋತು ಸುಣ್ಣವಾಯಿತು ಎಂದು ಸಚಿವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ಕೊಡುತ್ತೇನೆ:
ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಮಾಜಿ ಮಂತ್ರಿಗಳಾದ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಬಿಜೆಪಿ ಮೂವರ ತಂಡ ರಚನೆ ಮಾಡಿದೆ. ನಾನು ದೆಹಲಿಗೆ ಹೋದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ನನಗೆ ಇರುವ ಮಾಹಿತಿ ಎಲ್ಲವನ್ನೂ ತಿಳಿಸುತ್ತೇನೆ ಎಂದ ಸಚಿವರು; ನಮ್ಮ ಶಾಸಕರು ಎಲ್ಲರೂ ಸೇರಿ ಅಂತಿಮ ನಿರ್ಣಯ ಮಾಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಇದರ ಬಗ್ಗೆ ನನಗೆ ಪೂರ್ಣ ಮಾಹಿತಿ ಇದೆ. ಇದನ್ನು ಇನ್ನೂ ಮುಂದಕ್ಕೆ ಎಳೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಗುರಿ 2028, ಆ ಚುನಾವಣೆಯಲ್ಲಿ ನಮ್ಮ ಮೈತ್ರಿ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿಯಬೇಕು. ರಾಜ್ಯದಲ್ಲಿ ನಿಜವಾದ ಜನಪರ, ಜನತೆಯ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವಂತಹ ಸರ್ಕಾರ ಬರಬೇಕು. ಅದಕ್ಕಾಗಿ ನನ್ನ ಶ್ರಮ ಮೀಸಲು, ಅದು ಬಿಟ್ಟು ಮುಖ್ಯಮಂತ್ರಿ ಸ್ಥಾನದ ವಿಷಯ ಮುಖ್ಯವಲ್ಲ. ಮೊದಲು ಈ ಕೆಟ್ಟ ಸರ್ಕಾರ ಹೋಗಬೇಕು ಎಂದು ಅವರು ಹೇಳಿದರು.
ಅಡ್ಡ ಮತದಾನಕ್ಕೆ ಹಣ ಕೊಟ್ಟ ಬಗ್ಗೆ ಯಾರಿಗೆ ಫೋನ್ ಮಾಡಿ ಹೇಳಬೇಕು?:
ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಯಾರಾದರೂ ಹತ್ತು ರೂಪಾಯಿ ಕೇಳಿದರೆ ಈ ನಂಬರ್ ಗೆ ಕಾಲ್ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಕೋಟಿ ಕೋಟಿ ಕೈ ಬದಲಾಗಿದೆ. ಇಲ್ಲಿ ಯಾರಿಗೆ ದೂರು ಕೊಡಬೇಕು? ಇಲ್ಲಿ ಹಣ ಕೊಟ್ಟವರನ್ನು, ಹಣ ಪಡೆದುಕೊಂಡವರನ್ನು ಈ ನಂಬರ್ ನಿಂದ ಹೊರಗೆ ಇಟ್ಟಿದ್ದಾರೆಯೇ? ಅದಕ್ಕೆ ಪ್ರತ್ಯೇಕ ನಿಯಮ ಎಂದರೂ ಮಾಡಿದ್ದಾರಾ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.
ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕ್ರಮ ಜರುಗಿಸದೆ ಬಿಡುವುದಿಲ್ಲ. ಸಮಯ, ಸಂದರ್ಭ ನೋಡಿಕೊಂಡು ಮಾಡುತ್ತೇವೆ. 2028ರ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಠಿಣ ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ಅಂತಹ ನಿರ್ಧಾರಗಳನ್ನು ನಾವು ಮಾಡಿಯೇ ಮಾಡುತ್ತೇವೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಬೇರೆ ಕಡೆ ಅನುಕೂಲ ಇದ್ದರೆ ಹೋಗಬಹುದು ಎಂದು ಶಾಸಕರಿಗೆ ಹೇಳಿದ್ದೇನೆ:
ಶಾಸಕರ ಸಭೆಯಲ್ಲಿ ಕೆಲವು ವಿಷಯಗಳನ್ನು ನಾನು ಮುಕ್ತವಾಗಿ ಮಾತನಾಡಿದ್ದೇನೆ. ಅವರ ಭವಿಷ್ಯಕ್ಕೆ ತೊಂದರೆ ಕೊಡಲು ನಾನು ಬಯಸುವುದಿಲ್ಲ. ಬೇರೆ ಕಡೆ ಅನುಕೂಲವಾಗುತ್ತದೆ, ಹೋಗುತ್ತೇವೆ ಎಂದರೆ ನಾನು ತಡೆಯುವುದಕ್ಕೆ ಹೋಗುವುದಿಲ್ಲ. ಹೋಗಬೇಕು ಅಂದರೆ ಧೈರ್ಯವಾಗಿ ನನಗೆ ಹೇಳಿಯೇ ಹೋಗಿ ಅಂತ ಹೇಳಿದ್ದೇನೆ. ಅದನ್ನು ಬಿಟ್ಟು ಇಂತಹ ಕೆಲಸಗಳನ್ನು ಮಾಡಿ ಪಕ್ಷಕ್ಕೆ ಧಕ್ಕೆ ತರಬೇಡಿ ಎಂದು ಹೇಳಿದ್ದೇನೆ. ಶಾಸಕರ ಸಭೆಯಲ್ಲಿ ಒಬ್ಬರು ಬಿಟ್ಟರೆ ಉಳಿದ 17 ಮಂದಿ ಹಾಜರಿದ್ದರು. ಅವರೊಂದಿಗೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಎಂಬುದಾಗಿ ಸಚಿವರು ಮಾಧ್ಯಮಗಳಿಗೆ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಆದರೆ, ನಮ್ಮ ಶಾಸಕರು ಎಷ್ಟು ಗಟ್ಟಿಯಾಗಿ, ದೃಢವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಪರೀಕ್ಷೆ ಮಾಡಲು ನಾನು ಅಭ್ಯರ್ಥಿಯನ್ನು ಹಾಕಬೇಕಾಯಿತು. ಅಭ್ಯರ್ಥಿಯನ್ನು ಹಾಕುವುದಕ್ಕೆ ಎಲ್ಲಾ ಶಾಸಕರು ನನ್ನ ಮೇಲೆ ಒತ್ತಡ ಹಾಕಿದರು. ಗೆಲುವಿಗಿಂತ ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ನಾವು ಕಣಕ್ಕೆ ಇಳಿಯಲೇಬೇಕು ಎಂದು ಒತ್ತಡ ಹೇರಿದ್ದಕ್ಕೆ ನಾನು ಈ ನಿರ್ಧಾರ ಕೈಗೊಳ್ಳಬೇಕಾಯಿತು. ಅದೇ ರೀತಿ ಶಾಸಕರ ಗಟ್ಟಿತನದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇತ್ತು ಎಂದು ಅವರು ತಿಳಿಸಿದರು.
ಬಿಡದಿ ಟೌನ್ ಶಿಪ್ ಬಗ್ಗೆ ಸದನದಲ್ಲಿ ಹಿಂದೆಯೇ ಚರ್ಚೆ ಆಗಿತ್ತು:
ಬಿಡದಿ ಟೌನ್ ಶಿಪ್ ಬಗ್ಗೆ ವಿಧಾನಸಭೆಯಲ್ಲಿ ಈ ಹಿಂದೆಯೇ ಚರ್ಚೆ ಆಗಿತ್ತು. ನನ್ನ ಕಾಲದಲ್ಲಿ ಐದು ಟೌನ್‌ಶಿಪ್ ಮಾಡುವ ವಿಚಾರದ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸತ್ಯಶೋದನಾ ಸಮಿತಿ ಬೇರೆ ರಚಿಸಿತ್ತು. ಆ ಬಗ್ಗೆ ನಾನು ಅಂದಿನ ಮುಖ್ಯಮಂತ್ರಿ ಆಗಿ ಏನು ಹೇಳಿದ್ದೇನೆ ಎಂಬುದು ದಾಖಲೆಯಲ್ಲಿದೆ. ರೈತರ ಒಂದಿಂಚೂ ಫಲತ್ತಾದ ಭೂಮಿ ಸ್ವಾಧೀನ ಮಾಡುವ ವಿಚಾರ ಇಲ್ಲ ಎಂದಿದ್ದೇನೆ. ನಾಡಿದ್ದು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ. ಆಗ ನನ್ನ ಜತೆ ಇದ್ದು, ಈ ಯೋಜನೆಯನ್ನು ವಿರೋಧಿಸಿದವರು ಇವತ್ತು ಬೇರೆ ಪಕ್ಷದಲ್ಲಿದ್ದು ಮಾತು ಬದಲಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.
ಭೂ ಮಾಲೀಕರಿಗೆ ಶಾಸಕ ಪರಿಹಾರದ ಚೆಕ್ ಕೊಟ್ಟ ಬಗ್ಗೆ ಲೇವಡಿ ಮಾಡಿದ ಕೇಂದ್ರ ಸಚಿವರು; ಭೂ ಸ್ವಾಧೀನ ಅಧಿಕಾರಿ ಎಂಬ ವ್ಯಕ್ತಿ ಇರುತಾನೆ. ಅಥವಾ ಆ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳು ಇರುತ್ತಾರೆ, ಅವರು ಪರಿಹಾರದ ಚೆಕ್ ಕೊಡಬೇಕಾಗುತ್ತದೆ. ಕೆಲವರು ಚೆಕ್ ತೆಗೆದುಕೊಂಡಿದ್ದಾರೆ. ಆ ಹಣ ಎಷ್ಟು ದಿನ ಇರುತ್ತದೆ? 2 ಕೋಟಿ 30 ಲಕ್ಷದ ಚೆಕ್ ಕೊಟ್ಟು ರೈತರಿಗೆ ಆಸೆ ಹುಟ್ಟಿಸಿದ್ದಾರೆ. 20 ವರ್ಷಕ್ಕೆ 2 ಕೋಟಿ ಹಣವನ್ನು ಎಫ್‌ಡಿ ಇಟ್ಟರೆ ಹೆಚ್ಚೂ ಎಂದರೆ 40 ಲಕ್ಷ ಬಡ್ಡಿ ಸಿಗಬಹುದು. ಆದರೆ ಜಮೀನನ್ನ ಹಾಗೆ ಇಟ್ಟುಕೊಂಡರೆ 20 ಕೋಟಿ ಬೆಲೆ ಬಾಳುತ್ತದೆ ಎಂದು ಸಚಿವರು ಹೇಳಿದರು.




