*ಬಸ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಯುಪಿ ಮೂಲದ 11 ಕಳ್ಳರ ಬಂಧನ: 225 ಗ್ರಾಂ ಚಿನ್ನ ವಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸ್‌ಗಳಲ್ಲಿ ಕೃತಕ ರಶ್ ಸೃಷ್ಟಿಸಿ ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ 11 ಖದೀಮರನ್ನು ಅಥಣಿ ವಿಭಾಗದ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನಡೆಸಿದ ಬೆಳಗಾವಿ ಎಸ್.ಪಿ, ಕೆ. ರಾಮರಾಜನ್ ಅವರು, ಅಥಣಿ ಉಪಠಾಣೆಯ ವಿವಿಧದ ವ್ಯಾಪ್ತಿಯ ಬಸ್‌ಗಳಲ್ಲಿ ಕೃತಕವಾಗಿ ರಶ್ ಸೃಷ್ಟಿಸಿ, ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಜಾಲವನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.
ಸಿಸಿಟಿವಿಯಲ್ಲಿ ಸಿಕ್ಕ ಪ್ರಮುಖ ಸುಳಿವು ಹಾಗೂ ಮಾಹಿತಿ ಆಧಾರದ ಮೇಲೆ ಕಾಗವಾಡ ಮತ್ತು ಅಥಣಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ, ಈ ಗ್ಯಾಂಗ್‌ನಿಂದಾಗಿ ಕಾಗವಾಡದಲ್ಲಿ ನಾಲ್ಕು, ಚಿಕ್ಕೋಡಿಯಲ್ಲಿ ಒಂದು ಮತ್ತು ಅಥಣಿಯಲ್ಲಿ ಒಂದು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು ತೀವ್ರ ನಿಗಾ ವಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಕಳ್ಳರು ಬಸ್‌ಗಳಲ್ಲಿ ಪ್ರಯಾಣಿಸುವಾಗ ವಿಶೇಷವಾಗಿ ಬೆಲೆಬಾಳುವ ಉಡುಪು ಧರಿಸಿದವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಕಾಗವಾಡ, ಅಥಣಿ ಮತ್ತು ಚಿಕ್ಕೋಡಿ ಭಾಗಗಳಲ್ಲಿ ಬ್ಯಾಗ್‌ಗಳಲ್ಲಿದ್ದ ಬಂಗಾರವನ್ನು ಲೂಟಿ ಮಾಡುತ್ತಿದ್ದ ಈ ಗ್ಯಾಂಗ್‌ನಿಂದ ಸದ್ಯಕ್ಕೆ ಒಟ್ಟು 225 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಹುಪಾಲು ಚಿನ್ನವನ್ನು ರಿಕವರಿ ಮಾಡಲಾಗಿದೆ.
ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕಲು ಮುಂದಿನ ದಿನಗಳಲ್ಲಿ ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಪೊಲೀಸ್ ಸಿಬ್ಬಂದಿ ಮಪ್ತಿಯಲ್ಲಿ ಸಾರ್ವಜನಿಕರ ರಕ್ಷಣೆಗೆ ಹದ್ದಿನಕಣ್ಣಿಡಲಿದ್ದಾರೆ ಎಂದು ಎಸ್ ಪಿ ಅವರು ಭರವಸೆ ನೀಡಿದ್ದಾರೆ.




