Belagavi NewsBelgaum NewsCrimeKannada NewsLatestNational

*ಹಿಂಡಾಲ್ಕೋ ಕಂಪನಿಯ ಕಾರ್ಮಿಕ ಆತ್ಮಹತ್ಯೆಗೆ ಶರಣು: ಕಂಪನಿಯ ಕಚೇರಿ ಮೇಲೆ ಕಲ್ಲೆಸೆತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ  ಹಿಂಡಾಲ್ಕೋ ಕಂಪನಿಯ ಆವರಣದಲ್ಲೇ ಕಾರ್ಮಿಕನೊಬ್ಬನೇಣು ವಾಟ್ಸಾಪ್ ಡೆತ್‌ನೋಟ್ ನಲ್ಲಿ ಡೆತ್ ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮಸ್ಥರು ಕಂಪನಿಯ ಕಚೇರಿ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ.

ಮುತ್ಯಾನಟ್ಟಿ ಗ್ರಾಮದ ನಿವಾಸಿಯಾದ ಶಂಕರ ತಳವಾರ ಆತ್ಮಹತ್ಯೆಗೆ ಶರಣಾದ ದುರ್ದೈವಿ ಯುವಕ. ಕಳೆದ ಆರು ವರ್ಷಗಳಿಂದ ಇದೇ ಕಂಪನಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದ ಶಂಕರ, ಮ್ಯಾನೇಜ್‌ಮೆಂಟ್ ಹಾಗೂ ಕಾಂಟ್ರಾಕ್ಟ್ ಸಂಸ್ಥೆಯ ಕಿರುಕುಳಕ್ಕೆ ಬೇಸತ್ತು ಕಂಪನಿಯ ಒಳಗಡೆಯೇ ಪ್ರಾಣ ತೆಗೆದುಕೊಂಡಿದ್ದಾನೆ ಎಂದು ಮುತ್ಯಾನಟ್ಟಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಪೈಯಾಲ್ ನಂದಿ ಕಾಂಟ್ರಾಕ್ಟ್ ಸಂಸ್ಥೆಯವರು ನಮ್ಮ ಊರಿನವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಕೇವಲ ತಮ್ಮ ಸ್ವಂತ ಸಂಬಂಧಿಕರನ್ನಷ್ಟೇ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಹತ್ತನೇ ತರಗತಿ ಹಾಗೂ ಐಟಿಐ ಮುಗಿಸಿದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದವರು, ಈಗ ದಿಢೀರನೆ ಡಿಪ್ಲೋಮಾ ಶಿಕ್ಷಣ ಕೇಳುತ್ತಿದ್ದಾರೆ. ನಾವು ಹತ್ತನೇ ತರಗತಿ ಮತ್ತು ಐಟಿಐ ಮಾಡಿದವರು ಈಗ ಎಲ್ಲಿಗೆ ಹೋಗಬೇಕು. ಹಿಂಡಾಲ್ಕೊ ಕಂಪನಿಗಾಗಿ ನಮ್ಮ ಊರಿನವರ ಜಾಗವೇ ಹೆಚ್ಚಾಗಿ ಹೋಗಿದೆ, ಹೀಗಿದ್ದರೂ ಸ್ಥಳೀಯರಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ. ಇನ್ನು ಮುಂದಾದರೂ ಐಟಿಐ ಮಾಡಿದ ಸ್ಥಳೀಯ ಯುವಕರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ವಿನಂತಿಸಿರುವ ಶಂಕರ, ನಮ್ಮ ಊರಿನ ಅಭಿವೃದ್ಧಿ ಸಮಿತಿ ಕೂಡ ಸರಿಯಾಗಿಲ್ಲ ಎಂದು ಆಪಾದಿಸಿದ್ದಾನೆ. 

ರಾಮಾಚಾರಿ ಎಂಬಾತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನಿಂದ 5 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ, ಈಗ ಆ ದುಡ್ಡನ್ನು ವಾಪಸ್ ಕೇಳಿದರೆ ಕೊಡುತ್ತಿಲ್ಲ ಎಂದು ಬರೆದುಕೊಂಡಿರುವ ಶಂಕರ, ಕೊನೆಯದಾಗಿ ತನ್ನ ಹೆತ್ತ ತಾಯಿ ಹಾಗೂ ತಂದೆಗೆ ಕ್ಷಮೆ ಕೇಳಿ ಪ್ರಾಣ ಬಿಟ್ಟಿದ್ದಾನೆ.

Home add -Advt

ಕಂಪನಿಯ ಆವರಣದಲ್ಲಿ ಸ್ಥಳೀಯರು ಹಾಗೂ ಕಾರ್ಮಿಕರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. 

ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೊರಸೆ ಅವರು ಖುದ್ದಾಗಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸುತ್ತಿದ್ದಾರೆ. 

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಾಲ್ಕು ಕೆಎಸ್‌ಆರ್‌ಪಿ ಪೊಲೀಸ್ ತುಕಡಿಗಳು ಸೇರಿದಂತೆ ನೂರಾರು ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ. 

ಸದ್ಯ ಪೊಲೀಸರು ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಮುಂದಾಗಿದ್ದು, ವಾಟ್ಸಾಪ್ ಡೆತ್‌ನೋಟ್ ಆಧರಿಸಿ ಕಿರುಕುಳ ನೀಡಿದ ಕಂಪನಿಯ ಅಧಿಕಾರಿಗಳು ಹಾಗೂ ವಂಚಿಸಿದ ವ್ಯಕ್ತಿಯ ವಿರುದ್ಧ ಕಾನೂನು ತನಿಖೆಯನ್ನು ಆರಂಭ ಮಾಡಿದ್ದಾರೆ.

Related Articles

Back to top button