*ಇಡಿ ದಾಳಿ: ಜಾರಕಿಹೊಳಿ ಭಾಮೈದ ಮಂಜುನಾಥ್ ನಿವಾಸದಲ್ಲಿ 24 ಗಂಟೆಗೂ ಅಧಿಕ ಕಾಲ ಶೋಧ ನಡೆಸಿದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಇಡಿ ಅಧಿಕಾರಿಗಳು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಮೈದ ಮತ್ತು ಬೆಳಗಾವಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಉಪ ಆಯುಕ್ತ ಮಂಜುನಾಥ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ 24 ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ 5:30ಕ್ಕೆ ಪ್ರಾರಂಭವಾದ ಈ ದಾಳಿ ಇವತ್ತು ಬೆಳಗ್ಗೆ 6 ಗಂಟೆಯವರೆಗೆ ನಡೆದಿದೆ. ದಾಅಳಿ ವೇಳೆ ಅಪಾರ ಪ್ರಮಾಣದ ದಾಖಲೆಗಳು, ಹಣ, ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ತಿಲಿದಿಬಂದಿದೆ.
ಬೆಳಗಾವಿಯ ಟಿವಿ ಸೆಂಟರ್ನಲ್ಲಿರುವ ಮಂಜುನಾಥ್ ಮನೆ ಸೇರಿದಂತೆ ರಾಜ್ಯದ ಒಟ್ಟು 10 ಸ್ಥಳಗಳಲ್ಲಿ ಈ ಏಕಕಾಲಿಕ ಕಾರ್ಯಾಚರಣೆ ನಡೆದಿದೆ. ಈ ಸ್ಥಳಗಳಲ್ಲಿ ಬೆಳಗಾವಿಯಲ್ಲಿ ಆರು, ದಾವಣಗೆರೆ ಮತ್ತು ಮೈಸೂರಿನಂತಹ ನಗರಗಳೂ ಸೇರಿವೆ. ದಾಳಿಯ ವೇಳೆ, ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು, ಬೇನಾಮಿ ಬಾರ್ ಪರವಾನಗಿಗಳು, ಅಕ್ರಮ ಆಸ್ತಿ ಪತ್ರಗಳು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಮಂಜುನಾಥ್ ಅವರ ಪತ್ನಿಯನ್ನೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಮತ್ತು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ.
ಇಂದು ಬೆಳಿಗ್ಗೆ ಇಡಿ ದಾಳಿ ಮುಗಿಯುತ್ತಿದ್ದಂತೆ ವೈ.ಮಂಜುನಾಥ್ ಬೆಂಗಳೂರಿನಿಂದ ಬೆಳಗಾವಿಯ ಸ್ವಗೃಹಕ್ಕೆ ಆಗಮಿಸಿದ್ದಾರೆ.



