Karnataka NewsLatestPolitics

*ಗೃಹಲಕ್ಷ್ಮಿ ಯೋಜನೆ ಬಗ್ಗೆ ಅಂಕಿ-ಅಂಶಗಳ ಸಮೇತ ಸ್ಪಷ್ಟೀಕರಣ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿಲೋಪವಾಗಿದೆ ಎಂದು ಸಿಎಜಿ ವರದಿ ಹೇಳಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ ಯಾವುದೇ ಲೋಪವಾಗಿಲ್ಲ ಎಂದು ಅಂಕಿ-ಅಂಶಗಳ ಸಮೇತ ಸ್ಪಷ್ಟ ಪಡಿಸಿದೆ.

ಗೃಹಲಕ್ಷ್ಮಿ ಯೋಜನೆಯ ಒಟ್ಟು 2,88,376 ಫಲಾನುಭವಿಗಳು ಸಾವನ್ನಪ್ಪಿದ್ದಾರೆ. ಆ ಪೈಕಿ 1,03,922 ಮೃತ ಫಲಾನುಭವಿಗಳ ಕುಟುಂಬದಲ್ಲಿ ಯಜಮಾನಿಯ ಹೆಸರು ಬದಲಾವಣೆ ಆಗಿ, ಮರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ 1,08,755 ಮೃತ ಫಲಾನುಭವಿಗಳ ಮರಣದ ವಿವರ ಸಕಾಲಕ್ಕೆ ಲಭ್ಯವಾಗಿಲ್ಲ. ಹೀಗಾಗಿ ಇಲ್ಲಿ ಯಾವುದೇ ತಾಂತ್ರಿಕ ದೋಷವಾಗಿಲ್ಲ. ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಮ್‌ನಲ್ಲಿ ಬ್ಯಾಂಕ್ ಖಾತೆ ವಿವರ ಲಭ್ಯವಾಗುತ್ತದೆ. ಮೃತ ಫಲಾನುಭವಿಗಳ ಅಕೌಂಟ್‌ಗೆ 115 ಕೋಟಿ ರೂ. ಪಾವತಿಯಾಗಿದ್ದು, ಈ ಪೈಕಿ 15.24 ಕೋಟಿ ರೂ. ರಿಕವರಿ ಮಾಡಿದ್ದೇವೆ. ಉಳಿದ ಹಣವನ್ನು ರಿಕವರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಫಲಾನುಭವಿಗಳು ಖಾತೆ ಹೊಂದಿರುವ ಬ್ಯಾಂಕ್‌ನ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರ ಕಡತದಲ್ಲಿ ಹಂಚಿಕೆಯಾಗಿರಬಹುದು. ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು.

ಜಂಟಿ ಖಾತೆ ಇರುವಂತಹ ಫಲಾನುಭವಿಗಳ ಅತ್ತೆ-ಸೊಸೆ, ಅಮ್ಮ-ಮಗಳ ಬ್ಯಾಂಕ್ ಖಾತೆಗೆ ದುಡ್ಡು ಪಾವತಿಯಾಗಿದೆ. ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರೋದ್ರಿಂದ ಎರಡೂ ಫಲಾನುಭವಿಗಳ ಮೊತ್ತ ಒಂದೇ ಖಾತೆಗೆ ಪಾವತಿ ಆಗಿರಬಹುದು ಎಂದು ಇಲಾಖೆ ಹೇಳಿದೆ.

Home add -Advt

ಇಇಲಾಖೆ ಸ್ಪಷ್ಟೀಕರಣದ ಪೂರ್ಣ ವಿವರ ಇಲ್ಲಿದೆ:

ಆಯುಕ್ತರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ.
ಇನ್‌ಫ್ಯಾಂಟ್ರಿ ರಸ್ತೆ, ಬೆಂಗಳೂರು.

ಮಾನ್ಯರೆ,

ವಿಷಯ : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಸ್ಪಷ್ಟೀಕರಣವನ್ನು ಸಲ್ಲಿಸುತ್ತಿರುವ ಬಗ್ಗೆ

ಉಲ್ಲೇಖ : ತಮ್ಮ ಕಚೇರಿಯಿಂದ ಸ್ವೀಕೃತವಾದ ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ತಮ್ಮ ಕಚೇರಿಯಿಂದ ಸ್ವೀಕೃತವಾದ ಗೃಹಲಕ್ಷ್ಮಿ ಯೋಜನೆಯ ಕುರಿತು ದಿನಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗೆ ಇಲಾಖೆಯ ಸ್ಪಷ್ಟೀಕರಣವನ್ನು ಈ ಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಲಾಗಿದೆ. ಸದರಿ ಸ್ಪಷ್ಟೀಕರಣವನ್ನು ಸಂಬಂಧಪಟ್ಟ ಪತ್ರಿಕೆಯಲ್ಲಿ ಪ್ರಕಟಗೊಳಿಸುವಂತೆ ಕೋರಿದೆ.

ತಮ್ಮ ವಿಶ್ವಾಸಿ,

ನಿರ್ದೇಶಕರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬೆಂಗಳೂರು

ಪ್ರತಿಯನ್ನು:

  1. ಸರ್ಕಾರದ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಇವರ ಮಾಹಿತಿಗಾಗಿ ಸಲ್ಲಿಸಿದೆ.

ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ವಿವಿಧ ದಿನಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಇಲಾಖೆಯ ಸ್ಪಷ್ಟೀಕರಣ

ವಿವಿಧ ದಿನ ಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳಲ್ಲಿ, ಗೃಹಲಕ್ಷ್ಮಿ ಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಹಾಗೂ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಧನಸಹಾಯ ಪಾವತಿಸುತ್ತಿರುವುದು ವರದಿಗಳು ಪುನರಾವರ್ತಿತಿವೆ. ಇದರೊಂದಿಗೆ ಮಹಾಲೇಖಪಾಲರ ಲೆಕ್ಕ ತಪಾಸಣೆ ವರದಿಯಲ್ಲಿ, ನೀಡಿರುವ ಆಕ್ಷೇಪಣೆಗಳ ಬಗ್ಗೆಯೂ ಸಹ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ ಕೆಳಕಂಡ ಸ್ಪಷ್ಟೀಕರಣಗಳನ್ನು ನೀಡಲಾಗಿದೆ:

  • ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸರ್ಕಾರವು ಕುಟುಂಬದ ಯಜಮಾನಿಗೆ (ಮಹಿಳೆ/ ಲಿಂಗತ್ವ ಅಲ್ಪಸಂಖ್ಯಾತರು) ಪ್ರತಿ ತಿಂಗಳು ರೂ.2000/- ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ದಿನಾಂಕ:06-06-2023ರ ಸರ್ಕಾರದ ಆದೇಶದಂತೆ ಹಾಗೂ ದಿನಾಂಕ: 17-07-2023ರ ಮಾರ್ಗಸೂಚಿಯಂತೆ ಜಾರಿಗೊಳಿಸಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ, ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದು, ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ, ಮತ್ತು ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ, ಅಂತಹ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
  • ಪ್ರಸ್ತುತ ಏಪ್ರಿಲ್-2026ರ ಅಂತ್ಯಕ್ಕೆ, 1,30,35,318 ಫಲಾನುಭವಿಗಳು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿರುತ್ತಾರೆ. ಈ ಪೈಕಿ ಇತರೆ 95,66,679 ಫಲಾನುಭವಿಗಳು, ಪರಿಶಿಷ್ಟ ಜಾತಿಯ 24,95,604 ಫಲಾನುಭವಿಗಳು ಹಾಗೂ ಪರಿಶಿಷ್ಟ ವರ್ಗದ 9,73,035 ಫಲಾನುಭವಿಗಳು ನೋಂದಣಿ ಮಾಡಿಕೊಂಡಿರುತ್ತಾರೆ.
  • ಗೃಹಲಕ್ಷ್ಮಿ ಯೋಜನೆಯನ್ನು ಇಡಾಲೆಖಿ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (EDCS), DBT ಕೋಶ ಹಾಗೂ ಖಜಾನೆ ಇಲಾಖೆಯ ಸಹಯೋಗದೊಂದಿಗೆ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ಬಿಡುಗಡೆಗೊಳಿಸುವ ಅನುದಾನದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ (DBT) ಧನಸಹಾಯ ಪಾವತಿಸಲಾಗುತ್ತಿದೆ.
  • ನೋಂದಣಿಯಾದ ಫಲಾನುಭವಿಗಳ ಪೈಕಿ ಈವರೆಗೆ ಆದಾಯ ತೆರಿಗೆ ಪಾವತಿದಾರರು ಮತ್ತು ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುತ್ತಿರುವ ಒಟ್ಟು 1,94,560 ಮಹಿಳೆಯರಿರುತ್ತಾರೆ.
  • ಪ್ರತಿ ಮಾಹೆ ನೋಂದಣಿಯಾದ ಫಲಾನುಭವಿಗಳಿಗೆ ಧನಸಹಾಯ ಪಾವತಿಗೂ ಮುನ್ನ ನೋಂದಣಿಯಾದ ಫಲಾನುಭವಿ ಹಾಗೂ ಅವರ ಪತಿ ಆದಾಯ ತೆರಿಗೆ ಪಾವತಿದಾರರೇ ಮತ್ತು ಜಿ.ಎಸ್.ಟಿ. ಪಾವತಿದಾರರೇ ಎಂಬ ಬಗ್ಗೆ, ಆದಾಯ ತೆರಿಗೆ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ API ಮೂಲಕ Kutumba ತಂತ್ರಾಂಶದಲ್ಲಿ ಲಭ್ಯವಾಗುವ ಮಾಹಿತಿಯನ್ನು ಆಧರಿಸಿ, ಅಂತಹ ಅನರ್ಹ ಫಲಾನುಭವಿಗಳಿಗೆ ಹೊರತುಪಡಿಸಿ, ಉಳಿದ ಅರ್ಹ ಫಲಾನುಭವಿಗಳಿಗೆ ಧನಸಹಾಯ ಪಾವತಿಗಾಗಿ EDCS ಕಂತಿನಿಂದ ಕಡತಗಳನ್ನು DBT ಕೋಶಕ್ಕೆ ಕಳುಹಿಸಲಾಗುತ್ತದೆ.
  • ಅದೇ ರೀತಿ ಫಲಾನುಭವಿಗಳ ಮರಣದ ಮಾಹಿತಿಯನ್ನು e-janma/ Kutumba ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯೊಂದಿಗೆ ಪರಿಶೀಲಿಸಿ, ಮರಣ ಹೊಂದಿದ ಫಲಾನುಭವಿಗಳನ್ನು ಹೊರತುಪಡಿಸಿ, ಉಳಿದ ಫಲಾನುಭವಿಗಳಿಗೆ ಧನಸಹಾಯ ಪಾವತಿಗಾಗಿ EDCS ಕಂತಿನಿಂದ ಕಡತಗಳನ್ನು DBT ಕೋಶಕ್ಕೆ ಕಳುಹಿಸಲಾಗುತ್ತದೆ.
  • ಮೃತ ಫಲಾನುಭವಿಗಳನ್ನು ತುರ್ತು ಗುರುತಿಸುವಿಕೆಗಾಗಿ ಇಲಾಖೆಯಿಂದ ಸುತ್ತೋಲೆ ಹೊರಡಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಗಳಿಗೆ ಗೃಹಲಕ್ಷ್ಮಿ ಫಲಾನುಭವಿಗಳ ಮರಣ ಹೊಂದಿದ ಕೂಡಲೇ ಮಾಹಿತಿಯನ್ನು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೀಡುವಂತೆ ನಿರ್ದೇಶನ ನೀಡಲಾಗಿದ್ದು, ಅದರಂತೆ, ಮೃತ ಫಲಾನುಭವಿಗಳ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅವರ ಲಾಗಿನ್‌ಲ್ಲಿ ನಮೂದಿಸಿ EDCSಗೆ ಸಲ್ಲಿಸುತ್ತಿದ್ದಾರೆ. ಸದರಿ ಮಾಹಿತಿಯಂತೆ EDCSನಿಂದ ಧನಸಹಾಯ ಪಾವತಿಗೂ ಮುನ್ನ ಮರಣ ಹೊಂದಿದ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡುವ ಪ್ರಕ್ರಿಯೆ ಪ್ರಸ್ತುತ ಜಾರಿಯಲ್ಲಿರುತ್ತದೆ.
  • ನೋಂದಣಿಯಾದ ಫಲಾನುಭವಿಗಳ ಪೈಕಿ ಈವರೆಗೆ ಒಟ್ಟು 2,88,376 ಮಹಿಳೆಯರು ಮರಣ ಹೊಂದಿರುತ್ತಾರೆ. ಇವರಲ್ಲಿ:
    • 1,03,922 ಫಲಾನುಭವಿಗಳು ಮೃತ ಕುಟುಂಬದ ಯಜಮಾನಿಯ ಹೆಸರನ್ನು ಬದಲಾಯಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪರಿಷ್ಕೃತ ಪಡಿತರ ಚೀಟಿಯನ್ನು ಪಡೆದು, ಮರು ನೋಂದಣಿ ಮಾಡಿಕೊಂಡಿರುತ್ತಾರೆ. ಧನಸಹಾಯ ಪಡೆಯುತ್ತಿದ್ದಾರೆ.
    • 1,08,755 ಮೃತ ಫಲಾನುಭವಿಗಳ ಮರಣದ ಮಾಹಿತಿಯು ಸಕಾಲದಲ್ಲಿ ಲಭ್ಯವಾಗದೇ ಇರುವುದರಿಂದ, ಮೃತ ಫಲಾನುಭವಿಗಳ ಖಾತೆಗೆ ರೂ.115 ಕೋಟಿಗಳಷ್ಟು ಧನಸಹಾಯ ಪಾವತಿಯಾಗಿರುತ್ತದೆ. ಸದರಿ ಧನಸಹಾಯ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಮರು ಭರಣ ಮಾಡಿಕೊಳ್ಳುವ ಕುರಿತು State Level Banking Committee (SLBC), ಅಂಚೆ ಕಛೇರಿ, ಸರ್ಕಾರದ ಬ್ಯಾಂಕ್, ಖಾಸಗಿ ಬ್ಯಾಂಕ್ ಗಳೊಂದಿಗೆ ಸಭೆಗಳನ್ನು ನಡೆಸಿ, ಕ್ರಮ ವಹಿಸಲಾಗಿದೆ. ಇಲ್ಲಿಯವರೆಗೆ ರೂ.15.24 ಕೋಟಿ ಮೊತ್ತ ಮರು ಭರಣವಾಗದ. ಉಳಿದ ಮೊತ್ತವನ್ನು ಮರು ಭರಣ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
    • ಉಳಿದ ಮೃತ ಫಲಾನುಭವಿಗಳ ಕುಟುಂಬದವರು ಪಡಿತರ ಚೀಟಿಯನ್ನು ಬದಲಾಯಿಸಿ, ಯೋಜನೆಯಡಿ ನೋಂದಾಯಿಸಿಕೊಂಡಿರುವುದಿಲ್ಲ.

ಮಹಾಲೇಖಪಾಲರ ಲೆಕ್ಕ ತಪಾಸಣೆ ವರದಿಯಲ್ಲಿ, ಹಲವಾರು ಫಲಾನುಭವಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಾಗಿ, ಒಂದೇ ಫಲಾನುಭವಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದಾಗಿ, ಬ್ಯಾಂಕ್ ಖಾತೆ ಹೊಂದಿದ ಫಲಾನುಭವಿಗಳಿಗೆ ಧನಸಹಾಯ ಪಾವತಿಯಾಗುತ್ತಿರುವುದನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಿರುತ್ತಾರೆ.

1. ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ಬಹು ಫಲಾನುಭವಿಗಳು (Multiple beneficiaries having the same bank account number)

ABPS (Aadhaar Based Payment System) ವ್ಯವಸ್ಥೆಯಲ್ಲಿ, ಆಧಾರ್ ಸಂಖ್ಯೆಯನ್ನು ಹುಡುಕಾಸಿನ ವಿಳಾಸವಾಗಿ ಬಳಸಲಾಗುತ್ತದೆ. ಪಾವತಿ ಕಡತದಲ್ಲಿರುವ ಆಧಾರ್ ಸಂಖ್ಯೆಯನ್ನು NPCI Mapper ನಲ್ಲಿ ಪರಿಶೀಲಿಸಿದ ನಂತರ ಸಂಬಂಧಿತ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ. ಸಂಬಂಧಿತ ಬ್ಯಾಂಕ್ ತನ್ನ CBS (Core Banking System) ವ್ಯವಸ್ಥೆಯಲ್ಲಿ, ಆಧಾರ್ ಜೋಡಣೆಯನ್ನು ಪರಿಶೀಲಿಸಿ, ಫಲಾನುಭವಿಯ ಖಾತೆಗೆ ಹಣವನ್ನು ಜಮಾ ಮಾಡಿ, ಪ್ರತಿಕ್ರಿಯಾ (Response) ಕಡತದ ಭಾಗವಾಗಿ ಬ್ಯಾಂಕ್ ಖಾತೆಗಳ ವಿವರಗಳನ್ನು ಹಂಚಿಕೊಳ್ಳುತ್ತದೆ.

ಒಂದೇ ಬ್ಯಾಂಕ್ ಖಾತೆ ಸಂಖ್ಯೆಯಡಿ ಬಹು ಫಲಾನುಭವಿಗಳು ಕಂಡುಬರುವುದಕ್ಕೆ, ಈ ಕೆಳಕಂಡ ಎರಡು ಕಾರಣಗಳಿರಬಹುದು.

ಅ) ಜಂಟಿ (Joint) ಬ್ಯಾಂಕ್ ಖಾತೆಯಿಂದಲ್ಲಿ, ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು.

ಆ) ಫಲಾನುಭವಿಯು ಖಾತೆ ಹೊಂದಿರುವ ಬ್ಯಾಂಕಿನ ತಾಂತ್ರಿಕ ದೋಷ (Narration error) ದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ (Response) ಕಡತದಲ್ಲಿ ಹಂಚಿಕೆಯಾಗಿರಬಹುದು. ಮೇಲ್ಕಂಡ ಎರಡು ಕಾರಣಗಳ ಬಗ್ಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ, ಇಂತಹ ಪ್ರಕರಣಗಳ ಕುರಿತು ಅಧಿಕಾರಿಗಳ ಮೂಲಕ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ, ಪರಿಶೀಲನೆ ನಡೆಸಲಾಗಿದ್ದು, ಜಂಟಿ ಖಾತೆ ಇರುವಂತಹ ಫಲಾನುಭವಿಗಳ (ಉದಾ: ಅತ್ತೆ-ಸೊಸೆ, ತಾಯಿ-ಮಗಳು) ಬ್ಯಾಂಕ್ ಖಾತೆಗೆ ಅನುದಾನ ಪಾವತಿಯಾಗಿರುವುದು ಕಂಡು ಬಂದಿರುತ್ತದೆ. ಸದರಿ ಫಲಾನುಭವಿಗಳು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುವುದರಿಂದ ಎರಡೂ ಫಲಾನುಭವಿಗಳ ಧನಸಹಾಯ ಮೊತ್ತವು ಒಂದೇ ಖಾತೆಗೆ ಪಾವತಿಯಾಗಿರುತ್ತದೆ.

2. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಫಲಾನುಭವಿಗಳು (Beneficiaries holding more than one bank account)

  • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸುವ ಜವಾಬ್ದಾರಿ ಸಂಪೂರ್ಣವಾಗಿ ಫಲಾನುಭವಿಯದ್ದಾಗಿದೆ. ಫಲಾನುಭವಿಯು ಸರ್ಕಾರಿ ಸೌಲಭ್ಯ ಪಡೆಯಲು ತಾನು ಬಯಸುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಅಗತ್ಯವಿದ್ದಲ್ಲಿ, ಲಿಖಿತ ಒಪ್ಪಿಗೆಯ ಮೂಲಕ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಬಹುದು. NPCI Mapper ನಲ್ಲಿ, ಈ ಬದಲಾವಣೆ ನಮೂದಿಸಿದ ನಂತರ ಸರ್ಕಾರಿ ಸೌಲಭ್ಯ ಹೊಂದಲಾಗಿ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬ್ಯಾಂಕ್‌ಗೆ ಮೇಲ್ಕಂಡ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಅನುಸರಿಸಿ ಈ ಬದಲಾವಣೆಯನ್ನು ಮಾಡುತ್ತದೆ. ಈ ಸಂದರ್ಭದಲ್ಲಿ, ಸರ್ಕಾರದ ಅಥವಾ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ. ಒಂದೇ ಫಲಾನುಭವಿಯು ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳ ಧನಸಹಾಯ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದು ತಿಂಗಳಲ್ಲಿ, ಒಂದೇ ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ.

3. ಬ್ಯಾಂಕ್ ಖಾತೆ ವಿವರಗಳಿಲ್ಲದ ಫಲಾನುಭವಿಗಳಿಗೆ ಪಾವತಿ (Payments made to beneficiaries having no bank account details)

ABPS (Aadhaar Based Payment System) ವ್ಯವಸ್ಥೆಯಲ್ಲಿ, ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ (Response) ಕಡತದ ಭಾಗವಾಗಿ ಲಭ್ಯವಾಗಬೇಕು. ಆದರೆ ಕೆಲವೊಮ್ಮೆ, ಫಲಾನುಭವಿಗಳ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂದ (Narration error) ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ (Response) ಕಳುಹಿಸಬಹುದು. ಈ ಕುರಿತು ಪರಿಶೀಲನೆಗಳನ್ನು ನಡೆಸಿದಾಗ, ನಂತರದ ತಿಂಗಳುಗಳಲ್ಲಿ, ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯಾ (Response) ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ (EDCS, DBT cell, ಖಜಾನೆಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪಡೆದಿರುವ ಮಾಹಿತಿಯಂತೆ,

  • ಗೃಹಲಕ್ಷ್ಮಿ ಯೋಜನೆಯಡಿ ಧನಸಹಾಯ ಪಾವತಿ ಪ್ರಕ್ರಿಯೆಯು ABPS (Aadhaar Based Payment System) ಆಗಿರುವುದರಿಂದ, ಫಲಾನುಭವಿಗಳಿಗೆ ಒಂದು ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಲ ಧನಸಹಾಯ ಪಾವತಿಯಾಗಿರುವುದಿಲ್ಲ.
  • ಆಧಾರ್ ಜೋಡಣೆಯನ್ನು ಮಾಡುವ ಆಯ್ಕೆಯು ಫಲಾನುಭವಿಗಳದ್ದಾಗಿರುವುದರಿಂದ, ಆಧಾರ್ ಜೋಡಣೆಯೊಂದಿಗೆ ಬ್ಯಾಂಕ್ ಖಾತೆಯನ್ನು ಬದಲಾಯಿಸಿಕೊಳ್ಳಲು ಅವಕಾಶವಿರುವುದರಿಂದ, ಒಂದೇ ಫಲಾನುಭವಿಯು ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳಲ್ಲಿ ಧನಸಹಾಯ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದು ತಿಂಗಳಲ್ಲಿ, ಒಂದೇ ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ.
  • ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂದ (Narration error) ಖಾತೆ ವಿವರಗಳಿಲ್ಲದ ಪ್ರತಿಕ್ರಿಯಾ (Response) ಲಭ್ಯವಾಗುವುದರಿಂದ, ಬ್ಯಾಂಕ್ ಖಾತೆ ತೋರಿಸುತ್ತಿರುವುದಿಲ್ಲ. ಆದರೆ ಸದರಿ ಖಾತೆಗಳಿಗೆ ಧನಸಹಾಯ ಜಮೆಯಾಗುತ್ತದೆ. ಪರಿಶೀಲನೆಗಳನ್ನು ನಡೆಸಿದಾಗ, ನಂತರದ ತಿಂಗಳುಗಳಲ್ಲಿ, ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯಾ (Response) ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡುಬಂದಿದೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಅನರ್ಹರನ್ನು ಹೊರತುಪಡಿಸಿ, ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಧನಸಹಾಯ ಪಾವತಿಯಾಗುತ್ತಿದೆ.

ನಿರ್ದೇಶಕರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
ಬೆಂಗಳೂರು.

Related Articles

Back to top button