Belagavi NewsBelgaum NewsKannada NewsKarnataka NewsPolitics

*ಜಾರಕಿಹೊಳಿ ಬಾಮೈದನ ಮೇಲಿನ ಇಡಿ ದಾಳಿಯಲ್ಲಿ ವಿದೇಶಿ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸತೀಶ್‌ ಜಾರಕಿಹೊಳಿ ಅವರ ಬಾಮೈದ ಹಾಗೂ ಬೆಳಗಾವಿ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಹಾಗೂ ಅವರ ಆಪ್ತರ ಮೇಲೆ ನಡೆದ ದಾಳಿ ಬಗ್ಗೆ ಇಡಿ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೋರಡಿಸಿದ್ದಾರೆ.

ಅಬಕಾರಿ ಜಂಟಿ ಆಯುಕ್ತ ವೈ.ಡಿ. ಮಂಜುನಾಥ್, ಅವರ ವೈಯಕ್ತಿಕ ಚಾಲಕ, ಕುಟುಂಬಸ್ಥರು ಹಾಗೂ ಮಧ್ಯವರ್ತಿಗಳ ಅಡಗುದಾಣಗಳಿಂದ ಇಡಿ ಅಧಿಕಾರಿಗಳು ಬರೋಬ್ಬರಿ 5.5 ಕೋಟಿ ರೂಪಾಯಿ ನಗದು ಹಣ, 7.8 ಕೋಟಿ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ 3.3 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿದ್ದಾರೆ. ಹೀಗೆ ಒಟ್ಟು 13.3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜೊತೆಗೆ ಹಲವು ಡಿಜಿಟಲ್ ಸಾಕ್ಷ್ಯಗಳು ಹಾಗೂ ಬೇನಾಮಿ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Home add -Advt

ಇಡಿ ನಡೆಸಿರುವ ತನಿಖೆಯಲ್ಲಿ ಅಬಕಾರಿ ಇಲಾಖೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಸಂಘಟಿತ ಲೂಟಿಯ ಜಾಲ ಬಯಲಾಗಿದೆ. ಇಲಾಖೆಯ ಅಧಿಕಾರಿಗಳು, ಅವರ ದಲ್ಲಾಳಿಗಳು ಮತ್ತು ಕೆಲವು ಪ್ರಭಾವಿ ಖಾಸಗಿ ವ್ಯಕ್ತಿಗಳು ಸೇರಿಕೊಂಡು ಈ ಭ್ರಷ್ಟಾಚಾರದ ನೆಟ್ವರ್ಕ್ ಮುನ್ನಡೆಸುತ್ತಿದ್ದರು.

ರಾಜ್ಯದ ಮೂಲೆ ಮೂಲೆಗಳಲ್ಲಿರುವ ವೈನ್ ಶಾಪ್ ಹಾಗೂ ಬಾರ್ ಮಾಲೀಕರಿಂದ ಪ್ರತಿ ತಿಂಗಳು ಕ್ಷೇತ್ರ ಮಟ್ಟದ ಅಧಿಕಾರಿಗಳ ಮೂಲಕ ಕಡ್ಡಾಯವಾಗಿ ಲಂಚದ ಹಣ ವಸೂಲಿ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ, ಮದ್ಯದಂಗಡಿಗಳ ಲೈಸೆನ್ಸ್‌ ನವೀಕರಣ ಜಾಗ ಬದಲಾವಣೆ ಹಾಗೂ ಹೊಸದಾಗಿ ಪರವಾನಗಿ ನೀಡುವ ಪ್ರತಿಯೊಂದು ಹಂತದಲ್ಲೂ ಕೋಟ್ಯಂತರ ರೂಪಾಯಿ ಹಣ ಕೈಬದಲಾಗುತ್ತಿತ್ತು ಎಂದು ಇಡಿ ತಿಳಿಸಿದೆ.

ಹಣವನ್ನು ಯಾರ್ಯಾರಿಗೆ ಎಷ್ಟೆಷ್ಟು ಹಂಚಿಕೆ ಮಾಡಬೇಕು ಎಂಬುದನ್ನು ನಿರ್ವಹಿಸಲು ಪ್ರತ್ಯೇಕ ‘ನಗದು ಪುಸ್ತಕ ಇಟ್ಟುಕೊಂಡಿದ್ದರು. ಸದ್ಯ  ಡೈರಿಯನ್ನು ಇಡಿ ವಶಪಡಿಸಿಕೊಂಡಿದ್ದು, ಇದರಲ್ಲಿ ಲಂಚದ ಪಾಲನ್ನು ಪಡೆದ ಪ್ರಭಾವಿಗಳ ವಿವರಗಳಿವೆ ಎನ್ನಲಾಗಿದೆ. 

ಈ ಕಪ್ಪು ಹಣವನ್ನು ಅಧಿಕಾರಿಗಳು ಐಷಾರಾಮಿ ಜೀವನ, ರಿಯಲ್ ಎಸ್ಟೇಟ್ ಮತ್ತು ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಹಲವಾರು ಅಬಕಾರಿ ಅಧಿಕಾರಿಗಳೇ ತಮ್ಮ ಹೆಂಡತಿ, ಮಕ್ಕಳ ಹೆಸರಿನಲ್ಲಿ ಮದ್ಯದ ಅಂಗಡಿಗಳ ಪರವಾನಗಿ ಪಡೆದು ಪರೋಕ್ಷವಾಗಿ ತಾವೇ ಲಿಕ್ಕರ್ ಬಿಸಿನೆಸ್‌ ನಡೆಸುತ್ತಿದ್ದರು ಎಂಬುದು ಸಾಬೀತಾಗಿದೆ.

ಅಬಕಾರಿ ಇಲಾಖೆಯ ಪ್ರಭಾವಿ ಅಧಿಕಾರಿಗಳಾದ ಜಗದೀಶ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ.ಡಿ. ಮಂಜುನಾಥ್ ಅವರನ್ನು ಗುರಿಯಾಗಿಸಿಕೊಂಡು ಇಡಿ ಈ ದಾಳಿ ಮಾಡಿತ್ತು. ಇವರ ಜೊತೆಗೆ ಇವರ ವ್ಯಾಪಾರ ಪಾಲುದಾರರು, ಕುಟುಂಬದ ಸದಸ್ಯರು ಮತ್ತು ಕಲೆಕ್ಷನ್ ದಂಧೆಯಲ್ಲಿ ತೊಡಗಿದ್ದ ಆಪ್ತ ಸಹಚರರ ನಿವಾಸ ಹಾಗೂ ಕಚೇರಿಗಳ ಮೇಲೆಯೂ ದಾಳಿ ನಡೆಸಿ ಮಹತ್ವದ ಡಿಜಿಟಲ್ ಹೆಜ್ಜೆಗುರುತುಗಳನ್ನು ಕಲೆಹಾಕಲಾಗಿದೆ. 

Related Articles

Back to top button