*ಆ.13 ರಂದು ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ: ವಾಟಾಳ್ ನಾಗರಾಜ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾವೇರಿ ನದಿ ನೀರು ಬಿಡುವ ವಿಚಾರದಲ್ಲಿ ಸರ್ವ ಪಕ್ಷಗಳ ಸಭೆ ಕರೆದಾಗ, ವಿರೋಧ ಪಕ್ಷದ ನಾಯಕರಿಗೆ ಸಿಎಂ ಡಿ.ಕೆ.ಶಿವಕುಮಾರ ಮ್ಯಾಜಿಕ್ ಮಾಡಿ, ಅವರ ತಲೆಗೆ ಟೋಪಿ ಹಾಕಿದ್ದಾರೆ. ಅದೇರೀತಿ ನಮಗೂ ಟೋಪಿ ಹಾಕಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ತಯಾರಿಲ್ಲ. ಆಗಸ್ಟ್ 13ರಂದು ಅಖಂಡ ಕರ್ನಾಟಕ ಬಂದ್ ಮಾಡಿಯೇ ತೀರುತ್ತೇವೆ ಎಂದು ಹೋರಾಟಗಾರ ವಾಟಾಳ್ ನಾಗರಾಜ ಎಚ್ಚರಿಕೆ ನೀಡಿದರು.
ಇಂದು ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ಮುಖ್ಯಮಂತ್ರಿ ಡಿಕೆಶಿ ಮ್ಯಾಜಿಜ್ ಮಾಡಿ ಬಹಳ ಬುದ್ಧಿವಂತಿಕೆಯಿಂದ ಮಳೆ ಬಂತು, ನೀರು ಹರಿತು ಎಂದ ತಕ್ಷಣ ಪರಸ್ಪರ ಒಬ್ಬರಿಗೊಬ್ಬರು ತಬ್ಬಿಕೊಂಡರು. ಎಷ್ಟು ಬೇಗ ಮ್ಯಾಜಿಕ್ ಮಾಡಿದರು.
ಕಬಿನಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ. ವಿವಾದ ಇರೋದು ಕಾವೇರಿ ನದಿ ವಿಚಾರದಲ್ಲಿ. ಸುಮ್ಮನೇ ಬುರುಡೆ ಬಿಡುತ್ತಿದ್ದಾರೆ. ನಮಗೆ ಡಿಕೆಶಿ ಮಾತಿನಲ್ಲಿ ನಂಬಿಕೆ ಇಲ್ಲ. ತಮಿಳುನಾಡಿನಲ್ಲಿ ಎಐಡಿಎಂಕೆ, ಡಿಎಂಕೆ ಸೇರಿ ಅಲ್ಲಿನ ರೈತರು ನಮಗೆ ಅನ್ಯಾಯ ಆಗಿದೆ ಅಂತಾ ತೀವ್ರತರವಾಗಿ ಹೋರಾಟ ಮಾಡುತ್ತಿದ್ದಾರೆ. ನಮಗೇ ನೀರಿಲ್ಲ, ಆದ್ದರಿಂದ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದು ಇದೇ ಡಿ.ಕೆ.ಶಿವಕುಮಾರ ಅಲ್ಲವೇ..? ಈಗ ಕಾಮಗಾರಿ ಆರಂಭಿಸಲು ಯಾವುದೇ ಅನುಮತಿ ಬೇಕಿಲ್ಲ ಎಂದು ಸಂಸತ್ತಿನಲ್ಲಿ ಹೇಳಲಾಗಿದೆ. ಆದರೆ, ಆ ನಿಟ್ಟಿನಲ್ಲಿ ನೀವು ಏನು ಮಾಡುತ್ತಿದ್ದಿರಿ ಅಂತಾ ಪ್ರಶ್ನಿಸಿದರು.
ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದು. ಎಂಇಎಸ್ ನಿಷೇಧ ಮಾಡಬೇಕು. ಗಡಿ ಭಾಗವನ್ನು ಅಭಿವೃದ್ಧಿ ಮಾಡಬೇಕು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕೊಡಬೇಕು. ಹೀಗೆ ಹತ್ತು ಹಲವು ವಿಚಾರಗಳನ್ನು ಇಟ್ಟುಕೊಂಡು ಬಂದ್ ಗೆ ಕರೆ ನೀಡಿದ್ದೇವೆ. ವಿರೋಧ ಪಕ್ಷ ಬೆಂಬಲ ಕೊಡಲಿ, ಬಿಡಲಿ ರಾಜ್ಯಾದ್ಯಂತ ಅದ್ಭುತವಾದ ಬಂದ್ ಆಗಲಿದೆ. ಬಂದ್ ಕೈ ಬಿಡಲು ಸರ್ಕಾರ ಹೇಳುತ್ತಿದೆ. ಆದರೆ,ಕರ್ನಾಟಕ ಬಂದ್ ಆಗಿಯೇ ಆಗಲಿದೇ ಎಂದು ವಾಟಾಳ್ ನಾಗರಾಜ ಪುನರುಚ್ಚರಿಸಿದರು.
ರಾಜಕಾರಣಿಗಳಿಗೆ ಬೆಳಗಾವಿ, ಗಡಿ ನಾಡು ಸಮಸ್ಯೆಗಳು ಯಾವುದೇ ಪಕ್ಷದವರಿಗೆ ಬೇಕಾಗಿಲ್ಲ. ಬೆಳಗಾವಿಯಲ್ಲಿ ಕನ್ನಡ ಉಳಿದಿದ್ದರೆ ಕನ್ನಡ ಪರ ಸಂಘಟನೆಗಳಿಂದ. ಗಡಿ ವಿಚಾರದಲ್ಲಿ ಒಬ್ಬ ಶಾಸಕ, ಸಂಸದ, ಎಂಎಲ್ ಸಿಗಳು ಬೀದಿಗಿಳಿದು ಹೋರಾಟ ಮಾಡಲಿಲ್ಲ. ಗಟ್ಟಿಯಾಗಿ ಬೆಳಗಾವಿ ವಿಚಾರದಲ್ಲಿ ಮಾತನಾಡಲಿಲ್ಲ. ಬೆಳಗಾವಿಯಲ್ಲಿ ಕಾಟಾಚಾರಕ್ಕೆ ವರ್ಷಕ್ಕೊಮ್ಮೆ ಅಧಿವೇಶನ ನಡೆಸಿ, ಕಥೆ ಹೇಳಿ ಹೋಗುತ್ತಾರೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಉತ್ತರಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ಮಾಡುವುದಿಲ್ಲ. ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಏನು ಅಭಿವೃದ್ಧಿ ಮಾಡಿದ್ದಿರಿ ಎಂಬ ಬಗ್ಗೆ ಶ್ವೇತ ಪತ್ರವನ್ನ ಬಿಡುಗಡೆ ಮಾಡಲಿ ಎಂದು ವಾಟಾಳ್ ನಾಗರಾಜ ಸವಾಲು ಹಾಕಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸುತ್ತಿಲ್ಲ. ಮಹಾನಗರ ಪಾಲಿಕೆಯಲ್ಲಿ ಬದ್ಧತೆ ಪ್ರದರ್ಶನ ಮಾಡುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರವೂ ಮಾಡಲಿಲ್ಲ. ಈ ಸರ್ಕಾರವು ಮಾಡುತ್ತಿಲ್ಲ ಈಗ ಸಿದ್ದರಾಮಯ್ಯ ಮಗನೇ ನಗರಾಭಿವೃದ್ಧಿ ಮಂತ್ರಿ ಆಗಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಪರ ಗೊತ್ತುವಳಿ ತೆಗೆದುಕೊಳ್ಳುವಂತೆ ಒತ್ತಾಯವಿದೆ. 15ದಿನದೊಳಗೆ ಗೊತ್ತುವಳಿ ಸ್ವೀಕರಿಸದಿದ್ದರೆ, ನಾನೇ ಬೆಳಗಾವಿ ಪಾಲಿಕೆಯನ್ನ ಸೂಪರ್ ಸೀಡ್ ಮಾಡುವಂತೆ ಸಚಿವ ಯತೀಂದ್ರಗೆ ಹೇಳುತ್ತೇನೆ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು.
ಮಹದಾಯಿ, ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ಸರ್ಕಾರಗಳಿಗೆ ಯಾವುದೇ ಶಕ್ತಿಯೇ ಇಲ್ಲ. ಚಿಕ್ಕ ಗೋವಾ ರಾಜ್ಯವನ್ನ ಎದುರಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವ್ಹಿ.ಸೋಮಣ್ಣ, ಕುಮಾರಸ್ವಾಮಿ ಕೇಂದ್ರ ಮಂತ್ರಿಗಳಿದ್ದಾರೆ. ಈ ನಾಲ್ಕು ಮಂತ್ರಿಗಳು ರಾಜ್ಯಕ್ಕೆ ದಂಡವಾಗಿದ್ದಾರೆ. ಬರೀ ಬುರುಡೆ ಬಿಡುತ್ತಾರೆ. ಬುಡುಬುಡುಕೆಯವರನ್ನು ಇವರು ಮೀರಿಸುತ್ತಾರೆ. ಇವರೆಲ್ಲಾ ಉಪಯೋಗ ಇಲ್ಲದವರು. ಒಂದು ದಿನವೂ ನಾವು ರಾಜೀನಾಮೆ ನೀಡುತ್ತೇವೆ ಅಂತಾ ಧೈರ್ಯ ತೋರಿಸಿಲ್ಲ. ಇದು ನಮ್ಮ ರಾಜ್ಯದ ದುರ್ದೈವ. ನಮ್ಮ ರಾಜ್ಯದಿಂದ ಒಂದು ಕಾಲದಲ್ಲಿ ಅದ್ಭುತ ವ್ಯಕ್ತಿಗಳು ಕೇಂದ್ರಕ್ಕೆ ಆಯ್ಕೆ ಆಗಿ ಹೋಗುತ್ತಿದ್ದರು. ಈಗ ಒಂದೇ ಕುಟುಂಬಕ್ಕೆ ಸೇರಿದವರು ಆಯ್ಕೆ ಆಗುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದರು.
ನಮ್ಮದು ಕನ್ನಡ ಜಾತಿ. ನಮಗೆ ಬೇರೆ ಜಾತಿ ಇಲ್ಲ. ಜಾತಿಗೊಬ್ಬ ಮಂತ್ರಿ. ಈ ರಾಜ್ಯ ನಿರ್ಮಾಣ ಆಗಿರುವುದು ಭಾಷಾವಾರು. ಭಾಷಾವಾರು ಪ್ರಾಂತ ರಚನೆ ಆಗಿದೆ. ಆದರೆ, ಈಗಿನ ರಾಜಕಾರಣಿಗಳು ಇದನ್ನು ಜಾತಿವಾರು ಪ್ರಾಂತ ಮಾಡಿಬಿಟ್ಟಿದ್ದಾರೆ ಎಂದು ವಾಟಾಳ್ ನಾಗರಾಜ ಕಿಡಿಕಾರಿದರು.




