
ಪ್ರಗತಿವಾಹಿನಿ ಸುದ್ದಿ: ಮದುವೆಗೆ ಒಪ್ಪದೇ ಅವಾಯ್ಡ್ ಮಾಡುತ್ತಿದ್ದ ಪ್ರೇಯಸಿಯನ್ನು, ಊಟಕ್ಕೆಂದು ಹೋಟೆಲ್ ಗೆ ಕರೆದ ಪ್ರಿಯಕರ ಬಳಿಕ ಆಕೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ. ಅಂಜಲಿ (23) ಕೊಲೆಯಾದ ಯುವತಿ. ರಾಜೀವ್ ಪ್ರೇಯಸಿಯನ್ನ ಕೊಂದ ಪ್ರಿಯಕರ.
ಅಂಜಲಿ ಮತ್ತು ರಾಜೀವ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಿಂದೆ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಪರಿಚಯವಾಗಿ, ಬಳಿಕ ಪ್ರೇಮಾಂಕುರವಾಗಿತ್ತು. ಈ ವಿಚಾರ ಎರಡೂ ಮನೆಯವರಿಗೆ ತಿಳಿದಿತ್ತು. ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ, ಅಂಜಲಿ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ.
ಹಲವು ಬಾರಿ ಮದುವೆಗೆ ಒಪ್ಪಿಸಲು ಆಗದೇ ರಾಜೀವ್ ರೋಸಿಹೋಗಿದ್ದ. ಇತ್ತೀಚೆಗೆ ಅಂಜಲಿ ಕೂಡ ಪೋಷಕರ ಒತ್ತಾಯಕ್ಕೆ ಮಣಿದಿದ್ದಳು, ಜೊತೆಗೆ ರಾಜೀವ್‌ನನ್ನ ಅವಾಯ್ಡ್ ಮಾಡೋದಕ್ಕೂ ಶುರು ಮಾಡಿದ್ದಳು. ಇದರಿಂದ ನೊಂದಿದ್ದ ರಾಜೀವ್, ಭಾನುವಾರ ಸಂಜೆ ಪ್ರೇಯಸಿ ಅಂಜಲಿಯನ್ನ ಊಟಕ್ಕೆ ಕರೆದುಕೊಂಡು ಬಂದಿದ್ದ. ಈ ವೇಳೆ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ಶುರುವಾಗಿದೆ. ಕೊನೆಗೆ ಕೋಪಗೊಂಡ ರಾಜೀವ್, ಪೈಪ್ ಲೈನ್ ರಸ್ತೆಗೆ ಕರೆದುಕೊಂಡು ಬಂದು ಅಂಜಲಿಯ ಕತ್ತುಕೊಯ್ದು ಕೊಲೆ ಮಾಡಿದ್ದಾನೆ.
ನೆರವಿಗೆ ಧಾವಿಸಿದ ಸ್ಥಳೀಯರು ತಕ್ಷಣ ಅಂಜಲಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೇ ಅಂಜಲಿ ಸಾವನ್ನಪ್ಪಿದ್ದಾಳೆ. ವಿಚಾರ ಗೊತ್ತಾದ ಬಳಿಕ ಘಟನಾ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.’




