Belagavi NewsBelgaum NewsKannada NewsKarnataka NewsPolitics

*ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಿ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆ ಬಾರದಂತೆ ಕ್ರಮ ವಹಿಸಲು ಮೀಸಲು ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಪ್ರಕೃತಿ ನಿರ್ವಹಣಾ ಮೇಲುಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜು.04) ನಡೆದ ಜಿಲ್ಲಾ ಪ್ರಕೃತಿ ನಿರ್ವಹಣಾ ಮೇಲುಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಕೊಠಡಿಗಳು ಸೋರುತ್ತಿದ್ದರೆ, ದುರಸ್ತಿಗೊಳಪಟ್ಟಿದ್ದರೆ ಅಂತಹ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚಿನೆ ನೀಡಿದರು. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಮಳೆಯಿಂದಾಗಿ ಜನ, ಜಾನುವಾರುಗಳ ಪ್ರಾಣ ಹಾನಿಯಾದಲ್ಲಿ ತ್ವರಿತವಾಗಿ ಪರಿಹಾರ ಮೊತ್ತವನ್ನು ವಿತರಿಸಬೇಕು ಎಂದರು.

ಮಳೆಗಾಲದ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಂಭವವಿದ್ದು ಈ ಕುರಿತು ಆರೋಗ್ಯ ಇಲಾಖೆಯಿಂದ ಅಗತ್ಯದ ಸಿದ್ಧತೆ ಮಾಡಿಕೊಳ್ಳಬೆಕು. ಜೊತೆಗೆ ಸಾಂಕ್ರಾಮಿಕ ರೋಗಗಳು ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. 

Home add -Advt

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ನಿಗಾವಹಿಸಬೇಕು. 

ನದಿ ಪಾತ್ರಗಳಲ್ಲಿ ಕ್ರಮೇಣ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ಅಧಿಕಾರಿಗಳು ಜಾಗೃತರಾಗಿರಬೇಕು. ಮಳೆಯಿಂದಾಗಿ ಹಾನಿ ಸಂಭವಿಸಿದಲ್ಲಿ ಸಂಬAಧಿಸಿದ ಅಧಿಕಾರಿಗಳು ಕೂಡಲೆ ಸ್ಪಂಧಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸೂಚಿಸಿದರು.

ಶಾಸಕರಾದ ರಾಜು(ಆಸೀಫ್) ಸೇಠ ಅವರು ಮಾತನಾಡಿ, ನಗರ ಪ್ರದೇಶಕ್ಕೆ ನೀರು ಸರಬರಾಜು ಮಾಡುವಂತಹ ಸ್ಥಳಗಳಲ್ಲಿ ವಿದ್ಯುತ ವ್ಯತಯ ಮಾಡುವ ಸಂದರ್ಭದಲ್ಲಿ ಮುಂಚಿತವಾಗಿ ಸಂಬAಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನೀರು ಸರಬರಾಜು ಕಂಪನಿ, ಮಹಾನಗರ ಪಾಲಿಕೆ ಪರಸ್ಪರ ಸಮನ್ವಯದೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಜರುಗಿಸಲು ತಿಳಿಸಿದರು. 

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಸ್ತುತ ವಾಡಿಕೆಗಿಂತ ಪ್ರತಿಶತ 26 ರಷ್ಟು ಮಳೆಯ ಕೊರತೆ ಇರುತ್ತದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಜಿಲ್ಲೆಯ 7 ತಾಲೂಕುಗಳಲ್ಲಿ 32 ಗ್ರಾಮಗಳು ನೀರಿನ ಬಿಕ್ಕಟ್ಟು ಎದುರಿಸುತ್ತಿವೆ. 15 ಗ್ರಾಮಗಳಿಗೆ ಟ್ಯಾಂಕರುಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, 23 ಗ್ರಾಮಗಳಲ್ಲಿ ಖಾಸಗಿ ಬೋರವೆಲ್ ಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಹಿಡಕಲ್ ಹಾಗೂ ರಕ್ಕಸಕೊಪ್ಪ ಜಲಾಶಯಗಳಿಂದ ನೀರು ಸರಬರಾಜು ಆಗುತ್ತಿವೆ. ಎಲ್.ಎನ್.ಟಿ ವತಿಯಿಂದ 33 ವಲಯಗಳನ್ನು ಗುರುತಿಸಲಾಗಿದ್ದು, 6 ವಲಯಗಳನ್ನಾಗಿ ವಿಂಗಡಿಸಿ ವಲಯಗಳಲ್ಲಿ 6 ದಿನಗಳಲ್ಲಿ 1 ಬಾರಿ ಮತ್ತು 3 ದಿನಗಳಲ್ಲಿ 1 ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ

ಎಂದು ವಿವರಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜುವಿಗಾಗಿ ಅಗತ್ಯ ಬಿದ್ದಲ್ಲಿ 35 ಟ್ಯಾಂಕರಗಳನ್ನು ಬಳಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಸಹ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು. ನೀರು ಪೂರೈಕೆಗಾಗಿ ಬಳಸಿಕೊಳ್ಳಲಾಗುವ ಟ್ಯಾಂಕರ್ ಗಳಿಗೆ ಜಿ.ಪಿ.ಎಸ್. ಅಳವಡಿಸಿ ನಿಯಮಿತವಾಗಿ ಟ್ಯಾಂಕರಗಳ ಮೇಲೆ ನಿಗಾವಹಿಸಬೇಕು ಎಂದು ಸೂಚಿಸಿದರು.

ಎಸ್.ಆಯ್.ಆರ್ ಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಜೂನ್ 30 ರಿಂದ ಇಲ್ಲಿಯವರೆಗೆ 41,07,000 ಎನ್ಯೂಮರೇಶನ್ ಅರ್ಜಿಗಳ ಪೈಕಿ 11,99,757 ಅರ್ಜಿಗಳನ್ನು ವಿತರಿಸಲಾಗಿದೆ. ಶೇ.29.21 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೆಶಕ ಎಚ್.ಡಿ.ಕೋಳೆಕರ ಅವರು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 6,01,688 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಪ್ರತಿಶತ 80 ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲೆಯಾದ್ಯಂತ 35 ರೈತ ಸಂಪರ್ಕ ಕೇಂದ್ರ ಹಾಗೂ 139 ಪಿ.ಕೆ.ಪಿ.ಎಸ್. ಒಟ್ಟು 174 ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ರಸಗೊಬ್ಬರ ದಾಸ್ತಾನು ಸಮರ್ಪಕವಾಗಿದ್ದು ಕೊರತೆ ಆಗಿರುವುದಿಲ್ಲ. ಜಿಲ್ಲೆಯಲ್ಲಿ ಸಧ್ಯದ ಮಟ್ಟಿಗೆ ರಸಗೊಬ್ಬರದ ಸಮಸ್ಯೆ ಇರುವುದಿಲ್ಲ, ಮುಂಗಾರು ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಹಂತ ಹಂತವಾಗಿ ಪೂರೈಕೆಯಾಗುತ್ತಿದ್ದು ಪ್ರಸ್ತುತ 1,21,889 ಮೆ.ಟನ್ ವಿವಿಧ ರಸಗೊಬ್ಬರ ದಾಸ್ತಾನು ಲಭ್ಯವಿರುತ್ತದೆ.

ಬೆಳೆ ವಿಮೆಗೆ ಚಾಲನೆ ನೀಡಲಾಗಿದ್ದು. ಹೆಸರು ಹಾಗೂ ಉದ್ದು ಬೆಳೆ ವಿಮಾ ಮೊತ್ತ ಪಾವತಿಸಲು ಜುಲೈ 15 ಹಾಗೂ ಉಳಿದ ಬೆಳೆಗಳಿಗೆ ವಿಮಾ ಮೊತ್ತ ಪಾವತಿಸಲು ಜು.30 ಕೊನೆಯ ದಿನವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ18,486 ಹೆಕ್ಟೆರ ಪ್ರದೇಶ ಬಿತ್ತನೆ ಗುರಿ ನಿಗದಿ ಪಡಿಸಲಾಗಿದ್ದು ಆ ಪೈಕಿ 13,709 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತೆನೆಯಾಗಿದ್ದು ಪ್ರತಿಶತ 74 ರಷ್ಟು ಗುರಿ ಸಾಧನೆಯಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೆಶಕ ಮಹಾಂತೇಶ ಮುರಗೋಡ ಅವರು ತಿಳಿಸಿದರು.

ಪಶು ಸಂಗೋಪನಾ ಇಲಾಖೆ ಜಂಟಿ ನಿರ್ದೇಶಕರು ಮಾತನಾಡಿ, ಜಿಲ್ಲೆಯಲ್ಲಿ 19 ಲಕ್ಷ ಟನ್ ಮೇವಿನ ದಾಸ್ತಾನು ಇದ್ದು ಮುಂದಿನ 34 ವಾರುಗಳ ಅವಧಿಗೆ ಸಾಕಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರತಿ ಶಾಲೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ, ಶಿಕ್ಷಣಕ್ಕೆ ಯೋಗ್ಯವಲ್ಲದ ಶಾಲೆಗಳನ್ನು ಗುರುತಿಸಲಾಗಿದೆ. ಅದೇ ರೀತಿಯಲ್ಲಿ ಶಾಲಾ ಆವರಣದಲ್ಲಿ ಮರದ ಕೊಂಬೆಗಳು, ಕಂಪೌಂಡ್ ದುರಸ್ತಿ ಸೇರಿದಂತೆ ಅವುಗಳನ್ನು ಪಟ್ಟಿ ಮಾಡಿ ದುರಸ್ತಿ ಕಾರ್ಯ ಕೈಗೊಳ್ಳುತ್ತಿದೆ. ಪಾಠ ಮಾಡಲು ಯೋಗ್ಯವಲ್ಲದ ಶಾಲಾ ಕೊಠಡಿಗಳನ್ನು ಬಂದ ಮಾಡಿ ಬೇರೆ ಕೊಠಡಿಗಳಿಗೆ ಮಕ್ಕಳನ್ನು ಸ್ಥಳಾಂತರಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಅಗತ್ಯವಿರುವ ಸ್ಥಳಗಳಲ್ಲಿ ನಿರ್ಮಿತಿ ಕೇಂದ್ರದ ಅನುದಾನದಡಿ ಶಾಲಾ ಕೊಠಡಿ ದುರಸ್ಥಿ ಕಾರ್ಯ ಮಾಡಲಾಗುತ್ತಿದೆ ಎಂದು ಡಿಡಿಪಿಐ ಲೀಲಾವತಿ ಹಿರೇಮಠ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಗಡಾದಿ ಅವರು, ಮಳೆಗಾಲದಲ್ಲಿ ಉದ್ಭವಿಸಬಹುದಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಹಾಗೂ ಜನ ಜಾಗೃತಿಗೆ ಕ್ರಮ ವಹಿಸಲಾಗುತ್ತಿದೆ. ಖಾನಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ಸಂಚಾರ ವ್ಯತಯ ಉಂಟಾಗುವ ಹಿನ್ನಲೆಯಲ್ಲಿ ಹದಿನೈದು ಗ್ರಾಮಗಳಲ್ಲಿ ತುರ್ತು ವೈದ್ಯಕೀಯ ವ್ಯವಸ್ಥೆಗಾಗಿ ಅಂಬ್ಯುಲೆನ್ಸ್ ಗಳನ್ನು ನಿಯೋಜಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಪೋಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Related Articles

Back to top button