*ಜಾರಕಿಹೊಳಿ ಬಾವನ ಅಕ್ರಮ ಲೈಸೆನ್ಸ್ ಜಾಲ ಪತ್ತೆ: ಇಡಿ ಬಳಿಕ ಲೋಕಾಯುಕ್ತರಿಂದ ಶಾಕ್*

ಪ್ರಗತಿವಾಹಿನಿ ಸುದ್ದಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವ ಹಾಗೂ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರಿಗೆ ಇಡಿ ತನಿಖೆ ಬಳಿಕ ಇದೀಗ ಲೋಕಾಯು ಪೊಲೀಸರ ತನಿಖೆಯ ಬಿಸಿ ತಟ್ಟಿದೆ.
ಈ ತನಿಖೆಯಲ್ಲಿ ರಾಜ್ಯ ಅಬಕಾರಿ ಇಲಾಖೆಯಲ್ಲಿನ ಲೈಸೆನ್ಸ್ ಜಾಲ ವೊಂದು ಈಗ ಬಯಲಾಗಿದ್ದು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವ ಹಾಗೂ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಲೋಕಾಯು ಪೊಲೀಸರ ತನಿಖಾ ಉರುಳಿಗೆ ಸಿಲುಕಿದ್ದಾರೆ.
ಮಂಜುನಾಥ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಟುಂಬ ಸದಸ್ಯರು, ಸೋದರ ಸಂಬಂಧಿಗಳು ಹಾಗೂ ಆಪ್ತರಿಗೆ ಸುಮಾರು 30ಕ್ಕೂ ಹೆಚ್ಚು ಮದ್ಯದಂಗಡಿಗಳ ಪರವಾನಗಿಗಳನ್ನು ಅಕ್ರಮವಾಗಿ ವಿತರಿಸಿರುವುದು ಲೋಕಾಯುಕ್ತ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಮಂಜುನಾಥ್ ಅವರ ಅಕ್ರಮದ ಲಿಂಕ್ ಸಿಗುತ್ತಿದ್ದಂತೆ ಅಲರ್ಟ್ ಆಗಿರುವ ಲೋಕಾಯುಕ್ತ ಪೊಲೀಸರು, ಇಡೀ ಅಬಕಾರಿ ಇಲಾಖೆಯಲ್ಲಿ 2020 ರಿಂದ 2025 ರವರೆಗೆ ನಡೆದಿರುವ 5 ವರ್ಷಗಳ ಅವಧಿಯ ಲೈಸೆನ್ಸ್ ಜಾಲದ ಶೋಧನೆಗೆ ಇಳಿದಿದ್ದಾರೆ.
ಇದರ ಭಾಗವಾಗಿಯೇ ಮೂರು ದಿನಗಳ ಹಿಂದೆ ಬೆಂಗಳೂರು ನಗರದ 8 ಹಾಗೂ ಗ್ರಾಮಾಂತರ ಜಿಲ್ಲೆಯ 1 ಸೇರಿದಂತೆ ಒಟ್ಟು 9 ಅಬಕಾರಿ ಉಪ ಆಯುಕ್ತರ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ, ನೂರಾರು ಕಡತಗಳನ್ನು ಜಪ್ತಿ ಮಾಡಿದ್ದಾರೆ. ಮದ್ಯದಂಗಡಿ ಪರವಾನಗಿಗೆ ಆನ್‌ಲೈನ್ ವ್ಯವಸ್ಥೆ ಇದ್ದರೂ, ಅರ್ಜಿ ಸಲ್ಲಿಸುವ ಮುನ್ನವೇ ತೆರೆಮರೆಯಲ್ಲಿ ದೊಡ್ಡ ಮಟ್ಟದ ‘ಡೀಲ್ ಕುದುರುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಐದು ವರ್ಷಕ್ಕೊಮ್ಮೆ ನಡೆಯುವ ಪರವಾನಗಿ ನವೀಕರಣದ ವೇಳೆಯೂ ಭಾರಿ ಪ್ರಮಾಣದ ‘ಭ್ರಷ್ಟಾಚಾರ’ ಆಗಿದೆ ಎಂಬ ಮಾಹಿತಿ ಮೇರೆಗೆ ಈ ದಾಳಿಗಳು ನಡೆದಿವೆ. ಸದ್ಯ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ವೈಮಂಜುನಾಥ್ ಸೇರಿದಂತೆ ಅಕ್ರಮವಾಗಿ ಲೈಸೆನ್ಸ್ ಪಡೆದ ಫಲಾನುಭವಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಬೆಂಗಳೂರು ನಗರ ಮತ್ತು ಗ್ರಾಮಾಂತರದ ಉಪ ಆಯುಕ್ತರಿಗೆ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಬುಲಾವ್ ನೀಡಿದೆ ಎನ್ನಲಾಗಿದೆ.
ಕಳೆದ ಜೂನ್ 24 ರಂದು ಬೆಳಗಾವಿ ವಲಯದ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಹಾಗೂ ಅವರ ಆಪ್ತರ ನಿವಾಸಗಳು ಸೇರಿದಂತೆ ರಾಜ್ಯದ 14 ಕಡೆ ಜಾರಿ ನಿರ್ದೇಶನಾಲಯ ಭರ್ಜರಿ ದಾಳಿ ನಡೆಸಿತ್ತು. ಈ ವೇಳೆ ಬರೋಬ್ಬರಿ 13.3 ಕೋಟಿ ರೂಪಾಯಿ ನಗದು ಪತ್ತೆಯಾಗಿ ಜಪ್ತಿಯಾಗಿತ್ತು. ಇ.ಡಿ. ದಾಳಿಯಿಂದ ಎಚ್ಚೆತ್ತ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆಯ ಲೈಸೆನ್ಸ್ ಹಂಚಿಕೆಯ ಆಳಕ್ಕೆ ಇಳಿದಾಗ ಈ 30 ಬಾರ್ ಲೈಸೆನ್ಸ್‌ಗಳ ಅಕ್ರಮ ಹಂಚಿಕೆ ಹಗರಣ ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವಾದ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ವಶಪಡಿಸಿಕೊಂಡಿದ್ದಾರೆ.




