Belagavi NewsBelgaum NewsKarnataka NewsLatestPolitics

*ಇನ್ನೈದು ದಿನ ಮಳೆಯಾದರೆ ಬೆಳಗಾವಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಜಿಲ್ಲೆಯಲ್ಲಿ ಪ್ರಸ್ತುತ ಸಾಧಾರಣ ಮಳೆಯಾಗುತ್ತಿದ್ದು, ಇನ್ನು ಕೇವಲ ಐದು ದಿನ ಕಾಲ ಉತ್ತಮ ಮಳೆಯಾದರೆ ಸಾಕು, ಜಿಲ್ಲೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಉನ್ನತಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೆಲವು ಭಾಗಗಳಲ್ಲಿ ಸದ್ಯ ಮಳೆ ಕೊರತೆ ಇರುವುದು ನಿಜ. ಆದರೆ, ಹವಾಮಾನ ಮುನ್ಸೂಚನೆಯಂತೆ ಇನ್ನು ಐದು ದಿನಗಳ ಕಾಲ ಸತತವಾಗಿ ಮಳೆಯಾದರೆ ಜಲಮೂಲಗಳು ಭರ್ತಿಯಾಗಲಿದ್ದು, ನೀರಿನ ಆತಂಕ ದೂರಾಗಲಿದೆ ಎಂದು ತಿಳಿಸಿದರು.

ಸದ್ಯ ಜಿಲ್ಲೆಯ ಜಲಾಶಯಗಳಲ್ಲಿ ಮುಂದಿನ ಎರಡು ತಿಂಗಳವರೆಗೆ ಕುಡಿಯುವ ನೀರು ಪೂರೈಸಲು ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.ಕೆಲವು ಕಡೆ ತಾಂತ್ರಿಕ ಕಾರಣ ಹಾಗೂ 24/7 ನೀರು ಸರಬರಾಜು ಯೋಜನೆ ವಿಳಂಬದಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದನ್ನು ಸರಿಪಡಿಸಿ ಸಮರ್ಪಕವಾಗಿ ನೀರು ನಿರ್ವಹಣೆ ಮಾಡಲು ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

Home add -Advt

ಟ್ಯಾಂಕರ್ ಸೌಲಭ್ಯಕ್ಕೆ ಸಿದ್ಧತೆ: ಗ್ರಾಮೀಣ ಅಥವಾ ನಗರ ಭಾಗಗಳಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾದಲ್ಲಿ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಒದಗಿಸಲು ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಅನುದಾನ ಹಾಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸದ್ಯಕ್ಕೆ ಯಾವುದೇ ತತ್ವಾರವಿಲ್ಲ. ಅಧಿಕಾರಿಗಳ ನಿರ್ವಹಣಾ ಲೋಪದಿಂದ ಕೆಲವು ಕಡೆ ಸಮಸ್ಯೆಗಳಾಗುತ್ತಿದ್ದು, ಅದನ್ನು ಸರಿಪಡಿಸಲು ಸೂಚಿಸಿದ್ದೇನೆ. ವರುಣನ ಕೃಪೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣ ಸುಧಾರಿಸಲಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ಜೀವನಾಡಿಯಾಗಿರುವ ಹಿಡಕಲ್ ಮತ್ತು ರಕ್ಕಸಕೊಪ್ಪ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗುತ್ತಿದೆ. ಇದು ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದ್ದು, ಆತಂಕದ ವಾತಾವರಣ ದೂರಾಗುತ್ತಿದೆ. ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಬಿತ್ತನೆ ಪ್ರಮಾಣ ಕೂಡ ಉತ್ತಮ ಮಟ್ಟದಲ್ಲಿದೆ. ಜಿಲ್ಲೆಯ ರಾಮದುರ್ಗ ಸೇರಿದಂತೆ ಎರಡು-ಮೂರು ತಾಲ್ಲೂಕುಗಳಲ್ಲಿ ಸದ್ಯ ಮಳೆಯ ಪ್ರಮಾಣ ಕೊಂಚ ಕಡಿಮೆಯಿದೆ. ಮುಂಬರುವ ದಿನಗಳಲ್ಲಿ ಈ ಭಾಗಗಳಲ್ಲೂ ಮಳೆಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಒಂದು ವೇಳೆ ಮಳೆ ಕೈಕೊಟ್ಟು, ಬಿತ್ತಿದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾದರೆ ಸರ್ಕಾರ ರೈತರ ಕೈಬಿಡುವುದಿಲ್ಲ. ತಕ್ಷಣವೇ ಆಯಾ ಭಾಗಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮೋಡ ಬಿತ್ತನೆ ಮಾಡುವ ಪರಿಸ್ಥಿತಿ ನಮ್ಮಲಿಲ್ಲ: ಶಾಸಕ ಪ್ರಕಾಶ್ ಕೋಳಿವಾಡ ಅವರು ತಮ್ಮ ಭಾಗದ ರೈತರ ಹಿತದೃಷ್ಟಿಯಿಂದ ಹಾವೇರಿಯಲ್ಲಿ ಮೋಡ ಬಿತ್ತನೆ ಮಾಡಿಸುತ್ತಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕೆ ಆ ಮಟ್ಟದ ಭೀಕರ ಪರಿಸ್ಥಿತಿ ಇಲ್ಲ. ಇನ್ನು ಐದಾರು ದಿನಗಳಲ್ಲಿ ಮಳೆ ಇನ್ನು ಸುಧಾರಿಸಲಿದೆ. ಹಾಗೊಂದು ವೇಳೆ ಪರಿಸ್ಥಿತಿ ಕೈಮೀರಿದರೆ, ನಮ್ಮ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಿಸುತ್ತೇವೆ. ಈ ಹಿಂದೆ ಬೆಳಗಾವಿಯಲ್ಲಿ ನಾವು ಮೋಡ ಬಿತ್ತನೆ ಮಾಡಿಸಿದ್ದಾಗಿ ಇದೇ ವೇಳೆ ಸಚಿವರು ತಿಳಿಸಿದರು.

ನಗರದ ರಸ್ತೆ ಅತಿಕ್ರಮಣ ಹಾಗೂ ಸಂಚಾರ ದಟ್ಟಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬೀದಿ ಬದಿ ವ್ಯಾಪಾರಿಗಳು ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ ಮಾಡಿದ್ದರೆ ಅಂತಹ ಜಾಗಗಳನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ಪಾಲಿಸುವುದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಕರ್ತವ್ಯವಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಈ ಕಾರ್ಯಾಚರಣೆ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಅದೇ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಅತಿಕ್ರಮಣ ಜಾಗಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದ ಸಚಿವರು, ಎಲ್ ಅಂಡ್ ಟಿ ಕಂಪನಿಯು ನಗರದಾದ್ಯಂತ ಸಿಕ್ಕಸಿಕ್ಕಲ್ಲಿ ರಸ್ತೆಗಳನ್ನು ಅಗೆದು ಜನರಿಗೆ ತೀವ್ರ ತೊಂದರೆ ಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನಾನು ಸ್ವತಃ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ಚನ್ನರಾಜ ಹಟ್ಟಿಹೊಳಿ, ಆಸೀಫ್ ಸೇಠ್ ಮೊದಲಾದವರಿದ್ದರು

Related Articles

Back to top button