
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರಗಾಲದ ಪರಿಸ್ಥಿತಿ ಎದುರಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಕತ್ತೆಗಳ ಮದುವೆ ಮಾಡಿಸುವುದು ಸಹಜ, ಆದರೆ ಇಲ್ಲೊಬ್ಬ ಕತ್ತೆಗಳ ಮದುವೆ ಮಾಡಿಸುತ್ತಿದ್ದೇವೆ ಎಲ್ಲರೂ ಬನ್ನಿ ಎಂದು ಲಗ್ನ ಪತ್ರಿಕೆ ಮೂಲಕ ಜನರನ್ನು ಆಹ್ವಾನಿಸಿ ಗಮನ ಸೇಳೆದಿದ್ದಾನೆ.
ಜನರು ಮಳೆಯಾಗಲೆಂದು ಅನೇಕ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯಂತೂ ಮುಂಗಾರು ಮುನಿಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಳೆಯಾಗಲಿ ಎಂದು ಪ್ರಾರ್ಥಿಸಿಕೊಂಡ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಲು ಮುಂದಾಗಿದ್ದಾರೆ.
ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಅನೇಕ ಕಡೆಗಳಲ್ಲಿದೆ. ಹೀಗಾಗಿ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಕತ್ತೆಗಳ ಮದುವೆ ಮಾಡಲು ನಿರ್ಧರಿಸಿದ್ದು ಈಗಾಗಲೇ ಮದುವೆಗೆ ಸಂಬಂಧಪಟ್ಟಂತೆ ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಗಂಡು ಕತ್ತೆಗೆ ಕಾಂತೇಶ ಎಂದೂ, ಹೆಣ್ಣು ಕತ್ತೆಗೆ ಕಸ್ತೂರಿ ಎಂದು ನಾಮಕರಣ ಮಾಡಲಾಗಿತ್ತು. ಗ್ರಾಮದಲ್ಲಿ ಎರಡು ಪಂಗಡಗಳನ್ನು ಮಾಡಿ, ಒಂದು ಪಂಗಡ ವರನ ಕಡೆಯೂ ಮತ್ತೊಂದು ಪಂಗಡ ವಧುವಿನ ಕಡೆಗೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಪತ್ರಿಕೆ ಎಲ್ಲಡೆ ವೈರಲ್ ಆಗುತ್ತಿದೆ.



