Kannada NewsKarnataka NewsLatest

*ವಾಹನ ಮಾಲೀಕರೇ ಎಚ್ಚರ: ರಸ್ತೆಬದಿ ಅನಾಥವಾಗಿ ವಾಹನ ನಿಲ್ಲಿಸಿದ್ದರೆ ಇಂದೇ ಸ್ಥಳಾಂತರಿಸಿ: ಗಡುವು ನೀಡಿದರೂ ತೆರವುಗೊಳಿಸದಿದ್ದರೆ ವಾಹನ ಜಪ್ತಿ ಮಾಡಿ ಹರಾಜು*

ಪ್ರಗತಿವಾಹಿನಿ ಸುದ್ದಿ: ರಸ್ತೆಗಳು, ಫುಟ್​ಪಾತ್​ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಮತ್ತು ಬೆಂಗಳೂರು ಸಂಚಾರಿ ಪೊಲೀಸರು (BTP) ಜಂಟಿಯಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಿವೆ.

ಬೆಂಗಳೂರು ನಗರದ ಸೌಂದರ್ಯೀಕರಣ, ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಈ ಕಠಿಣ ಕ್ರಮ ಜರುಗಿಸಲಾಗುತ್ತಿದೆ.

ಈ ಕಾರ್ಯಾಚರಣೆಯು ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಕಾಯ್ದೆ 2024′ ರ ಸೆಕ್ಷನ್ 324 ರ ಅಡಿಯಲ್ಲಿ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಹೂತುಹೋಗಿರುವ ಅಥವಾ ಧೂಳು ಹಿಡಿದು ಬಿದ್ದಿರುವ ವಾಹನಗಳನ್ನು ಅಧಿಕಾರಿಗಳು ಮೊದಲು ಗುರುತಿಸಲಿದ್ದಾರೆ. ಬಳಿಕ ಆ ವಾಹನಗಳ ಮೇಲೆ ಅಧಿಕೃತ ಎಚ್ಚರಿಕೆ ಸ್ಟಿಕ್ಕರ್ (ನೋಟಿಸ್) ಅಂಟಿಸಿ, ಚಕ್ರಗಳಿಗೆ ವೀಲ್ ಕ್ಲಾಂಪ್ ಹಾಕಲಾಗುತ್ತದೆ. ವಾಹನದ ಮಾಲೀಕರಿಗೆ ತಮ್ಮ ವಾಹನವನ್ನು ಅಲ್ಲಿಂದ ತೆರವುಗೊಳಿಸಲು 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಮಾಲೀಕರು ಸಂಬಂಧಪಟ್ಟ ಪಾಲಿಕೆ ಅಥವಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ವಾಹನವನ್ನು ಸ್ವಂತ ಜಾಗಕ್ಕೆ ಸ್ಥಳಾಂತರಿಸಬೇಕು.

Home add -Advt

ಒಂದು ವೇಳೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನವನ್ನು ತೆರವುಗೊಳಿಸದಿದ್ದರೆ, ಜಂಟಿ ಕಾರ್ಯಾಚರಣೆ ತಂಡವು ಆ ವಾಹನವನ್ನು ಟೋಯಿಂಗ್ ಮಾಡಿ ಜಪ್ತಿ ಮಾಡಿಕೊಳ್ಳಲಿದೆ. ಜಪ್ತಿಯಾದ ನಂತರವೂ ಯಾರೂ ಹಕ್ಕು ಸಾಧಿಸದ ವಾಹನಗಳನ್ನು ಕಾನೂನುಬದ್ಧವಾಗಿ ಬಹಿರಂಗ ಹರಾಜು ಪ್ರಕ್ರಿಯೆಯ ಮೂಲಕ ವಿಲೇವಾರಿ ಮಾಡಲಾಗುತ್ತದೆ. ಒಮ್ಮೆ ಹರಾಜಾದ ನಂತರ ಯಾವುದೇ ಹಕ್ಕುಸ್ವಾಮ್ಯದ ಕ್ಲೈಮ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.

ನಗರದ ನಿವಾಸಿಗಳು ತಮ್ಮ ಗಲ್ಲಿಗಳಲ್ಲಿ, ರಸ್ತೆ ಬದಿಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳ ಆಸುಪಾಸಿನಲ್ಲಿ ದೀರ್ಘಕಾಲದಿಂದ ಬಿದ್ದಿರುವ ಅನಾಥ ವಾಹನಗಳ ಬಗ್ಗೆ ನಿಗಾ ವಹಿಸಲು ಜಿಬಿಎ ಕೋರಿದೆ. ಸಾರ್ವಜನಿಕರು ಇಂತಹ ವಾಹನಗಳನ್ನು ಕಂಡರೆ ನೇರವಾಗಿ ‘Public Eye'(ಪಬ್ಲಿಕ್ ಐ) ಮೊಬೈಲ್ ಆ್ಯಪ್ ಮೂಲಕ ಫೋಟೋ ಅಪ್ಲೋಡ್ ಮಾಡಿ ದೂರು ದಾಖಲಿಸಬಹುದಾಗಿದೆ.

ಈಗಾಗಲೇ ಸಂಚಾರಿ ಪೊಲೀಸರು ನಗರದಾದ್ಯಂತ ಇಂತಹ ಸುಮಾರು 1,518 ಅನಾಥ ವಾಹನಗಳನ್ನು ಪ್ರಾಥಮಿಕವಾಗಿ ಗುರುತಿಸಿದ್ದು, ಈ ಪೈಕಿ ಬೆಂಗಳೂರು ಸೆಂಟ್ರಲ್ ವಲಯದಲ್ಲೇ ಅತಿ ಹೆಚ್ಚು (403) ವಾಹನಗಳು ಪತ್ತೆಯಾಗಿವೆ. ಜಿಬಿಎ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರು ಸಾರ್ವಜನಿಕರು ತಮ್ಮ ಹಳೆಯ ಅಥವಾ ಕೆಟ್ಟುಹೋದ ವಾಹನಗಳನ್ನು ತಕ್ಷಣವೇ ರಸ್ತೆ ಬದಿಯಿಂದ ಸ್ವಂತ ಆವರಣಕ್ಕೆ ಶೀಘ್ರವಾಗಿ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.

Related Articles

Back to top button