ಒಂದೂವರೆ ವರ್ಷ ನಾವು ಹುಲಿ ಬಾಯಿಗೆ ತಲೆ ಕೊಟ್ಟ ಪರಿಸ್ಥಿತಿ ಇತ್ತು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕ ಮಹೇಶ್​ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್​ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ ಎಂಬ ಸುದ್ದಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಹೇಶ್ ಕುಮಟಳ್ಳಿ ಸಿಎಂ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡುವುದಿಲ್ಲ ಎಂಬ ಭರವಸೆಯಿದೆ. ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಬಿಜೆಪಿ ವರಿಷ್ಠರು ಗೆದ್ದ 10 ಶಾಸಕರಿಗೆ ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮಾತನಾಡಿದ ಕುಮಟಳ್ಳಿ ನನಗೆ ಮಂತ್ರಿ ಸ್ಥಾನ ಕೊಟ್ಟೇ ಕೊಡುತ್ತಾರೆ. ಸಿಎಂ ಕೊಟ್ಟ ಮಾತನ್ನುತಪ್ಪುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಯಡಿಯೂರಪ್ಪ ಪ್ರಾಣ ಬೇಕಾದರೂ ಬಿಡುತ್ತಾರೆ, ಆದರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂಬ ಮಾತಿದೆ. ವಿರೋಧಿಗಳು ಕೂಡ ಯಡಿಯೂರಪ್ಪ ಬಗ್ಗೆ ಇದನ್ನೇ ಹೇಳುತ್ತಾರೆ. ಚುನಾವಣೆ ಪ್ರಚಾರದ ವೇಳೆ 35 ಸಾವಿರ ಜನರ ಮುಂದೆ ಯಡಿಯೂರಪ್ಪನವರು ನನಗೆ ಮತ್ತು ಶ್ರೀಮಂತ ಪಾಟೀಲ್​ಗೆ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಯಡಿಯೂರಪ್ಪ ಮಾತು ತಪ್ಪಿ ನಂಬಿಕೆ ದ್ರೋಹ ಮಾಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಮ್ಮಿಶ್ರ ಸರ್ಕಾರ ಇದ್ದಾಗ, ಚುನಾವಣೆಯ ಒಂದೂವರೆ ವರ್ಷ ನಾವು ಹುಲಿ ಬಾಯಿಗೆ ತಲೆ ಕೊಟ್ಟ ಪರಿಸ್ಥಿತಿ ಇತ್ತು. ಗರಗಸಕ್ಕೆ ಸಿಕ್ಕವರಂತೆ ಆಗಿದ್ವಿ. ಆಮೇಲೆ ನಾವು ಗೆದ್ದೆವು, ಯಡಿಯೂರಪ್ಪ ಸಿಎಂ ಆದ್ರು. ಇಷ್ಟೆಲ್ಲ ಅವಮಾನ ಆದ ಮೇಲೂ ನಮಗೆ ದ್ರೋಹ ಮಾಡೊಲ್ಲ ಅನ್ನೊ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button