Kannada NewsKarnataka NewsLatest

*ಚಿಲ್ಲರೆ ಕೊಡದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್ !*

ಬಿಎಂಟಿಸಿಯಲ್ಲಿ ಸಂಚರಿಸಿ ಬೈರತಿ ಸುರೇಶ್ ರಿಯಾಲಿಟಿ ಚೆಕ್

·         2 ಗಂಟೆಯಲ್ಲಿ ಸುಮಾರು 10 ಬಸ್ ಗಳಲ್ಲಿ ಪ್ರಯಾಣ

·         ಮಾಸ್ಕ್ ಧರಿಸಿ ಬಸ್ ಸಂಚಾರ ವ್ಯವಸ್ಥೆಯ ಅವಲೋಕನ

·         ಪ್ರಯಾಣಿಕರು ಕೈ ಮಾಡಿದರೂ ನಿಲ್ಲಿಸದ ಬಸ್ ಕಂಡಕ್ಟರ್, ಡ್ರೈವರ್ ಅಮಾನತಿಗೆ ಸೂಚನೆ

Home add -Advt

·         ಚಿಲ್ಲರೆ ಕೊಡದಿದ್ದಕ್ಕೆ ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್ !

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಬಿಎಂಟಿಸಿ ಬಸ್ ಗಳಲ್ಲಿ ದಿಢೀರ್ ಪ್ರಯಾಣಿಸಿ ರಿಯಾಲಿಟಿ ಚೆಕ್ ನಡೆಸಿದರು.

ರಾತ್ರಿ 7.10 ಯಿಂದ 9.10 ರವರೆಗೆ ಜಯಮಹಲ್ ನಿಂದ ಟಿವಿ ಟವರ್, ಟಿವಿ ಟವರ್ ನಿಂದ ಆರ್ ಟಿ ನಗರ, ಆರ್ ಟಿ ನಗರದಿಂದ ಸಿಬಿಐ ರಸ್ತೆ, ಸಿಬಿಐ ಜಂಕ್ಷನ್ ನಿಂದ ಮುಂದಿನ ನಿಲ್ದಾಣ, ಸಿಬಿಐ ಸ್ಟಾಪ್ ನಿಂದ ಮಸೀದಿ ಸ್ಟಾಪ್ ನಿಂದ ಬಳ್ಳಾರಿ ಮುಖ್ಯರಸ್ತೆ, ಅಲ್ಲಿಂದ ಆಟೋದಲ್ಲಿ ಹೆಬ್ಬಾಳಕ್ಕೆ, ಹೆಬ್ಬಾಳದಿಂದ ಭೂಪಸಂದ್ರ, ಹೆಬ್ಬಾಳ ರಿಂಗ್ ರಸ್ತೆಯಿಂದ ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ನಾಗವಾರದಿಂದ ಹೆಣ್ಣೂರು, ಹೆಣ್ಣೂರಿನಿಂದ ಹೆಣ್ಣೂರು ಬಂಡೆ, ಬಂಡೆಯಿಂದ ಬೈರತಿ ಬಂಡೆ, ಬೈರತಿ ಬಂಡೆಯಿಂದ ಗೆದ್ಲಹಳ್ಳಿವರೆಗೆ 10 ಕ್ಕೂ ಹೆಚ್ಚು ಬಸ್ ಗಳಲ್ಲಿ ಪ್ರಯಾಣ ಮಾಡಿ, ಬಿಎಂಟಿಸಿ ವ್ಯವಸ್ಥೆಯನ್ನು ಕಣ್ಣಾರೆ ಕಂಡು ಪರಿಶೀಲಿಸಿದರು.

ಮಾಸ್ಕ್ ಹಾಕಿ ಪ್ರಯಾಣ ಮಾಡಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡಕ್ಟರ್ ಗೆ ಆಗಲೀ ಇವರು ಸಚಿವರು ಎಂಬುದು ಗಮನಕ್ಕೆ ಬರಲಿಲ್ಲ.

ಪ್ರತಿಯೊಂದು ಬಸ್ ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕರೊಂದಿಗೆ ಬಸ್ ಸಂಚಾರದ ಬಗ್ಗೆ ವಿಚಾರಿಸಿದರು.

ಚಾಲಕ, ಕಂಡಕ್ಟರ್ ಅಮಾನತಿಗೆ ಸೂಚನೆ

ಜಯಮಹಲ್ ನಿಂದ ಸಾಗುತ್ತಿದ್ದ ಕೆಎ 57 ಎಫ್ 3372 ಸಂಖ್ಯೆಯ ಬಸ್ ಫನ್ ವರ್ಲ್ಡ್ ನಲ್ಲಿ ಸ್ಟಾಪ್ ನಲ್ಲಿ ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ನಿಲುಗಡೆ ಮಾಡಲಿಲ್ಲ. ಹಿಂದಿನ ಬಸ್ ನಲ್ಲಿದ್ದ ಸಚಿವ ಬೈರತಿ ಸುರೇಶ್ ಅವರು, ಸದರಿ ಬಸ್ ನ ಕಂಡಕ್ಟರ್ ದಯಾನಂದ್ ಮತ್ತು ಚಾಲಕ ಮುಸ್ತಾಕ್ ಅವರನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

30 ರೂಪಾಯಿ ಬದಲು 36 ಕೇಳಿದ ಆಟೋ ಚಾಲಕ

ನಾಗಶೆಟ್ಟಿಯಲ್ಲಿ ಆಟೋ ಏರಿದ ಸಚಿವರು ಸುಮಾರು ಒಂದು ಕಿಲೋಮೀಟರ್ ಪ್ರಯಾಣಿಸಿ ಇಳಿದುಕೊಂಡರು. ಈ ಸಂದರ್ಭದಲ್ಲಿ ಆಟೋ ಮೀಟರ್ ನಲ್ಲಿ 30 ರೂಪಾಯಿ ತೋರಿಸಿದರೂ ಚಾಲಕ 36 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟ. ಯಾಕೆ ಹೆಚ್ಚು ಎಂದು ಸಚಿವರು ಪ್ರಶ್ನಿಸಿದ್ದಕ್ಕೆ, ಮೀಟರ್ ಅನ್ನು ಸರಿಪಡಿಸುವುದಾಗಿ ತಿಳಿಸಿದ. ಕಡೆಗೆ 40 ರೂಪಾಯಿಗಳನ್ನು ನೀಡಿ ಸಚಿವರು ಕೆಳಗಿಳಿದರು.

ಸಚಿವರನ್ನೇ ಕೆಳಗಿಳಿಸಿದ ಕಂಡಕ್ಟರ್

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವ ಬೈರತಿ ಸುರೇಶ್ ಅವರು ಬಸ್ ಸಂಚಾರ ಮಾಡುವಾಗ ಎರಡು ಟಿಕೆಟ್ ನೀಡುವಂತೆ ಕೇಳಿ, 100 ರೂಪಾಯಿ ನೋಟನ್ನು ನೀಡಿದರು. ಆಗ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಯಾಗಿ ಸಚಿವರು ಚಿಲ್ಲರೆ ಇಲ್ಲ ಎಂದಿದ್ದಕ್ಕೆ, ತನ್ನ ಬಳಿ ಚಿಲ್ಲರೆ ಇಲ್ಲದಿರುವುದನ್ನು ಬ್ಯಾಗ್ ತೋರಿಸಿ ಹೇಳಿದ ಕಂಡಕ್ಟರ್, ಚಿಲ್ಲರೆ ಇಲ್ಲದಿದ್ದರೆ ಕೆಳಗೆ ಇಳಿಯುವಂತೆ ಸಚಿವರಿಗೆ ಸೂಚಿಸಿದ.

ಇದಕ್ಕೆ ಮರುಮಾತಾನಾಡದೇ ಸಚಿವರು ಕೆಳಗಿಳಿದರು.

Related Articles

Back to top button