*ಬೆಳಗಾವಿಯಲ್ಲಿ ನಡೆದ ಆರ್ಎಸ್ಎಸ್ ಸಭೆಯಲ್ಲಿ ರಾಮ ಮಂದಿರದಲ್ಲಿ ನಡೆದ ಅಕ್ರಮಗಳ ಚರ್ಚೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾರ್ಷಿಕ ಬೈಠಕ್ ನಡೆಯುತ್ತಿರುವ ಶಾಲೆಯ ಆವರಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಒಟ್ಟು 226 ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೋಟಿಗಟ್ಟಲೆ ಭಕ್ತರ ದಶಕಗಳ ಕನಸಾದ ರಾಮಮಂದಿರವು ನಂಬಿಕೆ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ಹೀಗಿರುವಾಗ, ಭಕ್ತರ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಸಣ್ಣ ಪ್ರಮಾದಗಳೂ ಮುಂದಿನ ದಿನಗಳಲ್ಲಿ ನಡೆಯದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಟ್ಟೆಚ್ಚರ ವಹಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ. ಅಲ್ಲದೆ, ಪ್ರಸ್ತುತ ಹುಂಡಿ ಅಕ್ರಮದ ಕುರಿತು ನಡೆಯುತ್ತಿರುವ ಎಸ್ಐಟಿ ಹಾಗೂ ಪೊಲೀಸ್ ತನಿಖೆಯು ಶೀಘ್ರದಲ್ಲೇ ಒಂದು ತಾರ್ಕಿಕ ಅಂತ್ಯ ಕಾಣಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ದೇಶದ ಆಂತರಿಕ ಭದ್ರತೆ ಮತ್ತು ಸಾಮಾಜಿಕ ಸ್ವಾಸ್ಥದ ಕುರಿತಾಗಿಯೂ ಸುದೀರ್ಘ ಚರ್ಚೆ ನಡೆದಿದೆ. ಮುಂಬರುವ ಜನಗಣತಿ ಹಾಗೂ ದೇಶದಲ್ಲಿ ಉಂಟಾಗುತ್ತಿರುವ ಜನಸಂಖ್ಯಾ ಅಸಮತೋಲನದಿಂದ ಎದುರಾಗಬಹುದಾದ ಭವಿಷ್ಯದ ಸವಾಲುಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು.ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ ಮಾದಕವಸ್ತು ಜಾಲದ ಹೆಚ್ಚಳದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಲಾಗಿದೆ.
ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಬಾಕಿ ಉಳಿದಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಹಾಗೂ ಶಾಖಾ ಮಟ್ಟದಲ್ಲಿ ಕಾರ್ಯಯೋಜನೆಗಳ ಅನುಷ್ಠಾನದ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಯಿತು. ಸಂತ ಶಿರೋಮಣಿ ರವಿದಾಸ ಮಹಾರಾಜರ 650ನೇ ಜಯಂತಿ ವರ್ಷಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳ ಆಯೋಜನೆ. ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ 2026-27ನೇ ಸಾಲಿನ ಪ್ರವಾಸದ ರೂಪುರೇಷೆಗಳ ಸಿದ್ಧತೆ ಕುರಿತಾಗಿ ಚರ್ಚೆ ನಡೆಸಲಾಯಿತು.
2026ರ ಮಾರ್ಚ್ ಬಳಿಕ ದೇಶಾದ್ಯಂತ ಸಂಘದ ವಿವಿಧ ಹಂತಗಳಲ್ಲಿ ನಡೆದ ತರಬೇತಿ ಶಿಬಿರಗಳ ವಿಮರ್ಶೆಯನ್ನು ಸಭೆಯಲ್ಲಿ ನಡೆಸಲಾಯಿತು. ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಾ ವರ್ಗಗಳು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳು ಯಶಸ್ವಿಯಾಗಿ ನಡೆದಿವೆ. ಈ ಶಿಬಿರಗಳ ಮೂಲಕ ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದುಕೊಂಡಿದ್ದಾರೆ.


