*ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ವೇಳಾಪಟ್ಟಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಚಾಲನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ತಾಅತ್ಕಾಲೈಕ ವೇಳಾಪಟ್ಟಿಯಲ್ಲಿ ಪ್ರಯಾಣದ ಅವಧಿ ಬಗ್ಗೆ ವಿವರಿಸಲಾಗಿದೆ.
ಬೆಂಗಳೂರು ಮತ್ತು ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ದಿನಾಂಕ ನಿಗದಿಯಾಗಿದ್ದು, ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದೇ ಚಾಲನೆ ದೊರೆಯಲಿದೆ.
’
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನ ಎಸ್ಎಂವಿಟಿ (SMVT) ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ವರೆಗೆ ಸಂಚರಿಸಲಿದೆ.
ನವೆಂಬರ್ 2ರಿಂದ ನಿಯಮಿತ ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ರೈಲು ಗುಂತಕಲ್ ಮಾರ್ಗವಾಗಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಿಂದ ಮುಂಬೈಗೆ 16 ಗಂಟೆ 5 ನಿಮಿಷ ಪ್ರಯಾಣದ ಅವಧಿ ಇರಲಿದೆ. ಈ ಬಗ್ಗೆ ರೈಲ್ವೆ ಮಂಡಳಿ ಅಧಿಕ್ಋತ ಆದೇಶ ಹಿರಡಿಸಬೇಕಿದೆ.
ತಾತ್ಕಾಲಿಕ ವೇಳಾಪಟ್ಟಿ:
ಸದ್ಯದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ರಾತ್ರಿ 7.50ಕ್ಕೆ ಹೊರಟು, ಮರುದಿನ ಬೆಳಗ್ಗೆ 11.55ಕ್ಕೆ ಮುಂಬೈನ ಸಿಎಸ್ಎಂಟಿ ನಿಲ್ದಾಣ ತಲುಪಲಿದೆ. ಈ ಪ್ರಯಾಣಕ್ಕೆ 16 ಗಂಟೆ 5 ನಿಮಿಷ ಬೇಕಾಗಲಿದೆ. ಮುಂಬೈನಿಂದ ವಾಪಸ್ ಬರುವ ರೈಲು ರಾತ್ರಿ 8.10ಕ್ಕೆ ಸಿಎಸ್ಎಂಟಿಯಿಂದ ಹೊರಟು, ಮರುದಿನ ಬೆಳಗ್ಗೆ 11.55ಕ್ಕೆ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣ ತಲುಪಲಿದೆ. ಈ ದಿಕ್ಕಿನ ಪ್ರಯಾಣಕ್ಕೆ 15 ಗಂಟೆ 45 ನಿಮಿಷ ಬೇಕಾಗಲಿದೆ.
ಗುಂತಕಲ್ ಮಾರ್ಗದಲ್ಲಿ ಸಂಚಾರ: ಏಳು ನಿಲುಗಡೆಗಳ ನಿರೀಕ್ಷೆ
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಗುಂತಕಲ್ ಮಾರ್ಗವಾಗಿ ಸಂಚರಿಸಲಿದೆ. ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಸಾಧ್ಯತೆಯಿದೆ. ಪ್ರಸ್ತುತ ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಪ್ರಯಾಣಕ್ಕೆ ಸಾಮಾನ್ಯವಾಗಿ 22ರಿಂದ 24 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾದರೆ ಈ ಎರಡು ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ಮಾರ್ಗದಲ್ಲಿ ಬಿಇಎಂಎಲ್ (BEML) ನಿರ್ಮಿಸಿರುವ ತಲಾ 16 ಬೋಗಿಗಳ ಎರಡು ರೈಲು ಸೆಟ್ಗಳನ್ನು ಬಳಸಲು ಉದ್ದೇಶಿಸಲಾಗಿದೆ. ಇತ್ತೀಚೆಗೆ ಮುಂಬೈ–ಪುಣೆ ನಡುವಿನ ಘಾಟ್ ವಿಭಾಗದಲ್ಲಿ ರೈಲಿನ ಪ್ರಾಯೋಗಿಕ ಸಂಚಾರವನ್ನೂ ರೈಲ್ವೆ ಇಲಾಖೆ ನಡೆಸಿದೆ. ಆದರೆ, ರೈಲನ್ನು ಬೆಂಗಳೂರಿನ ಪ್ರಮುಖ ನಿಲ್ದಾಣವಾದ ಕೆಎಸ್ಆರ್ ಬೆಂಗಳೂರು (KSR Bengaluru) ನಿಲ್ದಾಣದಿಂದಲೇ ಆರಂಭಿಸಿ ಅಲ್ಲಿಯೇ ಅಂತ್ಯಗೊಳಿಸಬೇಕು ಎಂಬುದು ರೈಲ್ವೆ ಅಭಿಮಾನಿಗಳ ಒತ್ತಾಯವಾಗಿದೆ. ಸದ್ಯದ ಯೋಜನೆಯ ಪ್ರಕಾರ, ರೈಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಸಂಚರಿಸಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


