*ರಾಮ ಮಂದಿರದ ಹುಂಡಿ ಕಳ್ಳತನ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು: ವಿಹೆಚ್ ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದಜಿ ಪರಾಂಡೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿಯ ಹಣವನ್ನು ಕಳ್ಳತನ ಮಾಡಿದ್ದು ದೊಡ್ಡ ದುರಂತ. ಇದರಿಂದ ದೊಡ್ಡ ಆಘಾತವಾಗಿದೆ ಎಂದು ಅಖಿಲ ಭಾರತ ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಿಲಿಂದಜಿ ಪರಾಂಡೆ ಹೇಳಿದರು.
ಸೋಮವಾರ ಬೆಳಗಾವಿ ನಗರದ ಲಕ್ಷ್ಮೀ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠ ಸಂಸ್ಥಾನದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಶ್ರೀ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಹುಂಡಿ ಕಳ್ಳತನ ಮಾಡಿರುವ ಕುರಿತು ಉತ್ತರ ಪ್ರದೇಶ ಸರಕಾರ ಎಸ್ಐಟಿ ರಚನೆ ಮಾಡಿ 8 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ರಾಮ ಮಂದಿರದ ಹುಂಡಿ ಕಳ್ಳತನ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಅಯೋಧ್ಯಯಲ್ಲಿ ನಡೆದ ಘಟನೆಯನ್ನು ವಿರೋಧಿಗಳು ಹಿಂದುಗಳ ಮೇಲೆ ಷಡ್ಯಂತ್ರ ನಡೆಸಿದ್ದಾರೆ. ಕೆಲ ವಿರೋಧಿಗಳು ರಾಮ ಮಂದಿರದ ಪ್ರತಿಷ್ಠಾಪನೆಗೆ ಆಹ್ವಾನ ಕೊಟ್ಟರೂ ಬಾರದವರು ಈಗ ರಾಮ ಮಂದಿರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಂಗಾರ, ಬೆಳ್ಳಿಯ ಮೂರ್ತಿ ಕಳ್ಳತನವಾಗಿದೆ ಎಂದು 2,800 ಮಾತುಗಳು ರಾಮ ಮಂದಿರದ ಮೇಲೆ ಆರೋಪಿಸಿದ್ದಾರೆ. ರಾಮ ಮಂದಿರದ ಟ್ರಸ್ಟ್ ನವರು ಇದನ್ನು ಅಲ್ಲಗಳೆದಿದ್ದಾರೆ. ಮಾಧ್ಯಮದ ಮುಂದೆ ವಿರೋಧ ಮಾಡುವವರು ದೇವಸ್ಥಾನಕ್ಕೆ ಬಂದು ನೋಡಿ ಎಂದರು ಬರುತ್ತಿಲ್ಲ. ರಾಮ ಮಂದಿರದ ಟ್ರಸ್ಟಿಗಳು ಈಗ ರಾಜೀನಾಮೆ ನೀಡಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇದರಿಂದ ಅಲ್ಲಿ ಹಿಂದುಗಳ ಭಾವನೆ ಮೇಲೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಪರಿವಾರದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಇಲ್ಲ. ಇದನ್ನು ಹೆಚ್ಚಳ ಮಾಡಬೇಕು. ಸಂಬಂಧ ಬೆಳೆಸಬೇಕು. ಪ್ರತಿ ಹಿಂದು ಪರಿವಾರದಲ್ಲಿ ಮೂವರು ಮಕ್ಕಳು ಕಡ್ಡಾಯವಾಗಿರಬೇಕು. ಭಾರತೀಯ ಸೇನೆಯಲ್ಲಿ 13,000 ಸಾವಿರ ಹುದ್ದೆ ಖಾಲಿಯಾಗಲಿವೆ. ಒಂದೇ ಮಗು ಇದ್ದರೇ ದೇಶ ಕಾಯುವುದು ಯಾರು ಎಂದು ಪ್ರಶ್ನಿಸಿದರು.
ಡ್ರಗ್ಸ್ ಹಾಗೂ ಮದ್ಯ ಸೇವನೆಯಿಂದ ಯುವಕರು ಹಾಳಾಗುತ್ತಿದ್ದಾರೆ. ಮುಂದೆ ಜಾತಿ ಗಣತಿ ಬಂದಾಗ ಎಲ್ಲರೂ ಹಿಂದು ಎಂದು ಬರೆಸಬೇಕು ಎಂದು ಇದರ ಬಗ್ಗೆಯೂ ಸಮಾಜಕ್ಕೆ ಸಂತರು, ಸ್ವಾಮೀಜಿ ತಿಳಿ ಹೇಳಿ ಅದನ್ನು ಹೊಗಲಾಡಿಸುವ ಕೆಲಸ ಮಾಡಬೇಕು ಎಂದರು.
ಎಲ್ಲ ಸಂತರು ನನಗೆ ಆಶೀರ್ವಾದ ಮಾಡಿದ್ದಾರೆ. ವಿಶ್ವ ಹಿಂದು ಪರಿಷತ್ ಕೆಲಸ, ಕಾರ್ಯ ಸಾಧು, ಸಂತರ ಪರವಾಗಿಯೇ ಇದೆ. ಇದನ್ನು ವಿರೋಧ ಮಾಡುವವರು ತಿಳಿಯವುದಿಲ್ಲ. ಬೆಳಗಾವಿ ಸಂತರು ನನಗೆ ಆಶೀರ್ವಾದ ಮಾಡಿದ್ದು ತುಂಬಾ ಅಭಾರಿಯಾಗಿದ್ದೇನೆ ಎಂದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಶ್ರೀ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವ ಹಿಂದು ಪರಿಷತ್, ಆರ್ ಎಸ್ ಎಸ್ ದೇಶಕ್ಕಾಗಿ ನಿಂತ ಸಂಸ್ಥೆಗಳು. ವಿಶ್ವ ಹಿಂದು ಪರಿಷತ್ ಚುಕ್ಕಾಣಿ ಹಿಡಿದು ಮಿಲಿಂದ್ ಪರಾಂಡೆ ಅವರು, ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
ಆರ್ ಎಸ್ ಎಸ್, ವಿಶ್ವ ಹಿಂದು ಪರಿಷತ್ ಯಾವ ಪಕ್ಷಕ್ಕೂ ಸಮೀತವಾಗಿಲ್ಲ. ಇಲ್ಲಿ ನಡೆಯುವ ಸಭೆಗಳಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಿರುತ್ತಾರೆ. ಇದರ ಉದ್ದೇಶ ಎರಡು ದೇಶ ಕಟ್ಟುವ ಕೆಲಸ ಮಾಡುತ್ತಿವೆ ಎಂದರು.
ಹಿಂದು ಎಂದರೆ ಎಲ್ಲರನ್ನೂ ಕೂಡಿಸುವುದು. ಅಯೋಧ್ಯೆಗೆ ಈಗ ಅಂಟಿದ ಕಳಂಕ ಹೋಗುತ್ತದೆ. ಬೇರೆ ಬೇರೆ ದೇವಸ್ಥಾನದಲ್ಲಿ ಸ್ವಾಮೀಜಿಯರನ್ನು ಸೇರಿಸಬೇಕು. ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ರಾಮನ ಹೆಸರನಲ್ಲಿ ಅನ್ಯಾಯ ಮಾಡಿದ್ದಾರೆ. ಅದನ್ನು ಸರಿಪಡಿಸಬೇಕು ಎನ್ನುವುದು ಎಲ್ಲ ಸ್ವಾಮೀಜಿಗಳ ಆಶಯವಾಗಿದೆ ಎಂದರು.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ವಿಶ್ವ ಹಿಂದು ಪರಿಷತ್ ಹಿಂದುಗಳ ಸಂಘಟನೆಯನ್ನು ಮಾಡಿಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ಹಿಂದುಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಅಯೋಧ್ಯೆಯಲ್ಲಿ ನಡೆದ ಘಟನೆಯ ಬಗ್ಗೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ರಾಮ ಮಂದಿರದ ಹೆಸರಿನಲ್ಲಿ ಹಿಂದು ವಿರೋಧಿಗಳು ಅಪ್ರಚಾರ ನಡೆಸಿದ್ದಾರೆ. ಇದನ್ನು ತಡೆಯಲು ವಿಶ್ವ ಹಿಂದು ಪರಿಷತ್ ಇದನ್ನು ತಡೆಯುವ ಕೆಲಸ ಮಾಡಬೇಕು ಎಂದರು.
ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಲ್ಲ ಹಿಂದುಗಳನ್ನು ಜಾತಿ, ಬೇದ, ಭಾವ ಮರೆತು ಸಂತರ ಜೊತೆಗೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ನೂಲ ಸುರಗೀಶ್ವರ ಮಠದ ಗುರು ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ,ಕೊಲ್ಲೂರು ಮರಡಿ ಮಠದ ಡಾ. ಪವಾಡೇಶ್ವರ ಶಿವಾಚಾರ್ಯ ಸ್ವಾಮಿಗಳು ಬಾಘೋಜಿಕೊಪ್ಪ ಹಿರೇಮಠದ ಶ್ರೀ ಡಾ. ಶಿವಲಿಂಗ ಮುರುಗರಾಜೇಂದ್ರ ಸ್ವಾಮಿಗಳು ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಉಪಮೇಯರ್ ಹಣಮಂತ ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


