*ನೂತನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಸ್ತಿತ್ವಕ್ಕೆ; ನೂತನ ಪದಾಧಿಕಾರಿಗಳ ನೇಮಕ*

ರಾಜ್ಯಾಧ್ಯಕ್ಷರಾಗಿ ಸುಮತಿ.ಜಿ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಸಲಗರ ನೇಮಕ.
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪರ್ಯಾಯವಾಗಿ ನೂತನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು,ನೂತನ ಪದಾಧಿಕಾರಿಗಳನ್ನು ಇಂದು ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಸರ್ವಾನುತದಿಂದ ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಾಗಿ ಜಿ.ಸುಮತಿ,ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಸಲಗರ, ಗೌರವ ಅಧ್ಯಕ್ಷರಾಗಿ ಸುರೇಶ ಶೆಡಶ್ಯಾಳ,ರಾಜ್ಯ ಕಾರ್ಯಾಧ್ಯಕ್ಷರಾಗಿ
ಎಸ್ ಡಿ ರಂಗಣ್ಣನವರ್, ದಿನಕರ್ ಶೆಟ್ಟಿ,ರಾಜ್ಯ ಖಜಾಂಚಿಯಾಗಿ ಆಸಿಪ್ ಅತ್ತರ್,ಉಪಾಧ್ಯಕ್ಷರಾಗಿ ನಾಗನಗೌಡ ಎಂ.ಎ. ನೀಲಾ ಇಂಗಳಗಿ,ರಾಜ್ಯ ಸಹ ಕಾರ್ಯದರ್ಶಿಯಾಗಿ ಮಂಜುನಾಥ ಕೊಡಗು, ರಾಧಮ್ಮ,ಸಂಘಟನಾ ಕಾರ್ಯದರ್ಶಿಯಾಗಿ ಮಹದೇವ, ದ್ರಾಕ್ಷಾಯಿಣಿ,ಗೌರವ ಸಲಹೆಗಾರರಾಗಿ ಅರುಣ ಪ್ರತಾಪ ರೆಡ್ಡಿ, ಬಿ. ಟಿ. ಗೌಡರ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ರಾಜ್ಯಾಧ್ಯಕ್ಷೆ ಸುಮತಿ ಜಿ, ಕರ್ನಾಟಕ ಶಾಲಾ ಶಿಕ್ಷಕರ ಅಧಿಕೃತ ಸಂಘ ನಮ್ಮದೇ ಆಗಿದೆ. ಇನ್ಯಾವುದೇ ಅಸ್ತಿತ್ವದಲ್ಲಿರುವ ಸಂಘಗಳು ಅನಧಿಕೃತವಾಗಿವೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನಬದ್ಧವಾಗಿ ಇಂದು ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಹಿನ್ನಲೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಇನ್ನು 30 ದಿನಗಳಲ್ಲಿ ಎಲ್ಲಾ ಜಿಲ್ಲೆಗಳ ಹಾಗೂ ತಾಲೂಕುಗಳ ಸಂಘಗಳು ಅಸ್ತಿತ್ವಕ್ಕೆ ಬರಲಿವೆ ಎಂದರು.
ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ನಮ್ಮ ಸಂಘ ಕಿವಿಯಾಗಲಿದೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಡಿ ಕಾರ್ಯಕಾರಿ ಸಮಿತಿ ಕಾರ್ಯನಿರ್ವಹಿಸಲಿದೆ. ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಶಿಕ್ಷಕರ ನಡುವಿನ ಕೊಂಡಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲಿದೆ. ನೂತನ ಸಂಗವು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಸುರೇಶ್ ಶಡಶ್ಯಾಳ ಮಾತನಾಡಿ, ಈಗ ಅಸ್ತಿತ್ವದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಯಾವುದೇ ಚುನಾವಣಾ ನಿಯಮಗಳನ್ನು ಪಾಲಿಸದೆ ಗೆಲುವನ್ನು ಘೋಷಿಸಿಕೊಂಡಿದ್ದಾರೆ. ಇದಕ್ಕೆ ರಾಜ್ಯದ ಎಲ್ಲಾ ಶಿಕ್ಷಕರು ಬೇಸರವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಹಿಂದೆ ಶಿಕ್ಷಕರು ಸಂಘದಲ್ಲಿ ಕಾರ್ಯನಿರ್ವಹಿಸಿದ್ದ ಪದಾಧಿಕಾರಿಗಳು ಸೇರಿದಂತೆ ಸಮಾನ ಮನಸ್ಕರು ಹೊಸ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದೇವೆ ಎಂದು ನುಡಿದರು.



