Belagavi NewsBelgaum NewsKannada NewsKarnataka News

*ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರ ವಿರುದ್ಧ ಕ್ರಮಕ್ಕೆ ಗಡಾದ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರ ವಿರುದ್ಧ ಭ್ರಷ್ಟಾಚಾರ ಹಾಗೂ ನಿಯಮ ಉಲ್ಲಂಘನೆ ಆರೋಪಗಳು ಕೇಳಿ ಬಂದಿದ್ದು, ಅವರ ವಿರುದ್ಧ ಕ್ರಮ ಆಗದಿದ್ದರೆ. ಕಾನೂನು ಹೋರಾಟ ನಡೆಸಲಾಗುವುದು ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ತಿಳಿಸಿದರು.

ಸೋಮವಾರ ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸಾಮಾಜಿಕ ಹೋರಾಟಗಾರರು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರು ರಾಜ್ಯ ಮಾಹಿತಿ ಆಯೋಗದ ಆಯುಕ್ತರ ವಿರುದ್ಧ ವಿವಿಧ ರೀತಿಯ ಗಂಭೀರ ಸ್ವರೂಪದ ದೂರುಗಳನ್ನು ದಾಖಲೆ ಸಮೇತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿದ್ದರು. ಸರ್ಕಾರವು ಅಗತ್ಯ ಕ್ರಮಕ್ಕಾಗಿ ಈ ದೂರುಗಳನ್ನು ರಾಜಭವನಕ್ಕೆ ಕಳುಹಿಸಿ ಸುಮಾರು 5 ತಿಂಗಳುಗಳು ಕಳೆದರೂ ರಾಜ್ಯಪಾಲರು ಇದುವರೆಗೂ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ. 

ಈ ಹಿನ್ನೆಲೆಯಲ್ಲಿ ರಾಜಭವನದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಆಡಳಿತದ ಹಿತದೃಷ್ಟಿಯಿಂದ ಸಂವಿಧಾನದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಈ ಭ್ರಷ್ಟಾಚಾರದ ವಿರುದ್ಧ ತಕ್ಷಣವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದ್ದು, ಈ ಕುರಿತು ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಒಬ್ಬ ವ್ಯಕ್ತಿಯು ೨೫ ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಅದನ್ನು ಕಾಯ್ದೆಯ ದುರ್ಬಳಕೆ ಎಂದು ಬಿಂಬಿಸಲಾಗುತ್ತಿದೆ ಮತ್ತು ನಿಯಮಾವಳಿಗಳಲ್ಲಿ ಅವಕಾಶವಿಲ್ಲದಿದ್ದರೂ 22 ಜನ ಆ‌ರ್.ಟಿ.ಐ ಕಾರ್ಯಕರ್ತರನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಆಯುಕ್ತರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. 

Home add -Advt

ಸರ್ಕಾರಿ ನೌಕರರ ವೈಯಕ್ತಿಕ ಮಾಹಿತಿಯನ್ನು ನೀಡಲು ನಿರಾಕರಿಸುವ ಮೂಲಕ ಇಡೀ ಮಾಹಿತಿ ಹಕ್ಕು ಕಾಯ್ದೆಯನ್ನೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆಯುಕ್ತರ ಮೇಲೆ ತಕ್ಷಣವೇ ಕಾನೂನು ಕ್ರಮ ಜರುಗಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ  ಅವರು ಎಚ್ಚರಿಸಿದ್ದಾರೆ.

Related Articles

Back to top button