*ತನ್ನ ಅಂಗಡಿ ತಾನೇ ಕದ್ದ ಬಂಗಾರ ಅಂಗಡಿ ಮಾಲೀಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತನ್ನ ಬಂಗಾರದ ಅಂಗಡಿಯಲ್ಲಿ ತಾನೇ ಕದ್ದು ಅಂಗಡಿ ಕಳ್ಳತನವಾದ ಬಗ್ಗೆ ದೂರು ದಾಖಲಿಸಿದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿ ಒಟ್ಟು 65,95,000 ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಜುಲೈ 17 ರಂದು ಕೃಷ್ಣಾನಂದ ವಿಶ್ವನಾಥ ವೇರ್ಣೆಕರ ಎಂಬುವರು ತಮ್ಮ ರಾಮದೇವಗಲ್ಲಿಯಲ್ಲಿರುವ ವಿ. ಪಿ. ವೇರ್ಣೇಕರ & ಸನ್ಸ್ ಎಂಬ ಬಂಗಾರದ ಅಂಗಡಿಯ ಬಾಗಿಲನ್ನು ಮುರಿದು ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ಖಡೇಬಜಾರ ಪೊಲೀಸ್ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ಪೊಲೀಸರು ದೂರು ನೀಡಿ ಕೃಷ್ಣಾನಂದ ವಿಶ್ವನಾಥ ವೇರ್ಣಿಕರ ತಮ್ಮ ಅಂಗಡಿಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಹಣವನ್ನು ಕದ್ದಿರುವುದು ಬೆಳಕಿಗೆ ಬಂದಿದೆ.
ಆರೋಪಿಯಿಂದ ರೂ.45,000, ಮೌಲ್ಯದ ಸ್ಕೂಟಿ, ರೂ.62,60,990 ಮೌಲ್ಯದ 519.8 ಗ್ರಾಂ, ಬಂಗಾರದ ಆಭರಣಗಳು, ರೂ.6,000 ಮೌಲ್ಯದ 31 ಗ್ರಾಂ, ಬೆಳ್ಳಿಯ ಆಭರಣಗಳು ಹಾಗೂ 2,83,010 ರೂ ನಗದು ಹಣ, ಹೀಗೆ ಆತನಿಂದ ಒಟ್ಟು 65,95,000 ರೂ ಸ್ವತ್ತನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಖಡೇಬಜಾರ ಠಾಣೆಯ ಪಿಐ ಎಮ್, ಕೆ, ಧಾಮನ್ನವರ, ಎಸ್. ಆರ್, ಮುತ್ತತ್ತಿ, ಪಿಎಸ್ಐ ಸಿಬ್ಬಂದಿ ಜನರಾದ ಎ. ಬಿ. ಶೆಟ್ಟಿ, ಸಂತೋಷ ಬರಗಿ, ಬಿ, ಎಲ್, ಸರ್ವಿ, ಚನ್ನಪ್ಪ ತೇಲಿ, ಆರತಿ ಹೆಗ್ಗಣ್ಣ, ಸುನೀಲ ಚವ್ಹಾಣ, ಸದಾಶಿವ ಹಲಗಿಮನಿ, ಪ್ರಕಾಶ ಮಾದರ, ಹಾಗೂ ಬೆರಳು ಮುದ್ರೆ ಘಟಕದ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿ ಮತ್ತು ಸೋಕೋ ವಿಭಾಗ ಸಿಬ್ಬಂದಿಯವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದು, ಸದರಿಯವರ ತಂಡವನ್ನು ಮಾನ್ಯ ಪೊಲೀಸ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ರವರು ಶ್ಲಾಘಿಸಿರುತ್ತಾರೆ.



