Belagavi NewsBelgaum NewsKannada NewsKarnataka News

*ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ಹೋರಾಟಗಾರರಿಗೆ ಸೂಕ್ತ ಸ್ಥಾನ ಮಾನ: ಡಾ.ಸಿ. ಸೋಮಶೇಖರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸುತ್ತಿದ್ದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಲ್ಲಿ ಕನ್ನಡ ಪರ ಹೋರಾಟಗಾರರಿಗೆ ಸೂಕ್ತ ಸ್ಥಾನ ಮಾನಗಳನ್ನು ನೀಡಲು ಬದ್ಧರಾಗಿರುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ ಅವರು ಇಂದುಕನ್ನಡ ಸಂಘಟನೆಗಳಿಗೆ ಭರವಸೆ ನೀಡಿದರು.

ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಮುಂಜಾನೆ ಆಯೋಜಿಸಲಾಗಿದ್ದ 25 ಕ್ಕೂ ಅಧಿಕ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಇಂದು ತಲುಪಿದ ದುಸ್ಥಿತಿಯನ್ನು ನೋಡಿ ತಮಗೆ ತುಂಬ ನೋವಾಗಿದೆ.ಪರಿಷತ್ತಿನ ಘನತೆಯನ್ನು ಮರಳಿ ತಂದು ಕೊಡಲು ತಾವು ನವೆಂಬರ್ ನಲ್ಲಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷನಾಗಿ ಹಾಗೂ ಸರಕಾರದ ವಿವಿಧ ಹುದ್ದೆಗಳಲ್ಲಿ ,ಜಿಲ್ಲಾಧಿಕಾರಿಗಳ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಕನ್ನಡದ ಅನುಷ್ಠಾನಕ್ಕೆ ಮಾಡಿದ ಕೆಲಸಗಳನ್ನು ವಿವರಿಸಿದ ಸೋಮಶೇಖರ ಅವರು,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದರೆ ಒಬ್ಬ ಕನ್ನಡ ಪರ ಕಾರ್ಯಕರ್ತನಂತೆ ಕೆಲಸ ಮಾಡುವದಾಗಿ ಹೇಳಿದರು.

ಬೆಳಗಾವಿಯ ನೆಹರೂ ನಗರದಲ್ಲಿ ಸರಕಾರದ 7 ಕೋಟಿ ರುಪಾಯಿ ಅನುದಾನದಲ್ಲಿ ನಿರ್ಮಿಸಲಾದ ಕನ್ನಡ ಭವನದ ಉಸ್ತುವಾರಿಯನ್ನು ಖಾಸಗಿ ಸಂಘಕ್ಕೆ ನೀಡಲು ತಾವು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವು ಆದೇಶವಲ್ಲ. ಕನ್ನಡ ಭವನವು ಸರಕಾರದ ಆಸ್ತಿಯಾಗಿದ್ದು ತಮ್ಮ ಸಾಹಿಯುಳ್ಳ ಪತ್ರವು ಆದೇಶವೆಂಬಂತೆ ಬಿಂಬಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿ ಸರಕಾರಕ್ಕೆ ಪತ್ರ ಬರೆಯುವುದಾಗಿ ಸೋಮಶೇಖರ ಕನ್ನಡ ಮುಖಂಡರ ಪ್ರಶ್ನೆಗೆ ಉತ್ತರವಾಗಿ ಸ್ಪಷ್ಟಪಡಿಸಿದರು.

Home add -Advt

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸುವ ಸಂಬಂಧ ಕನ್ನಡ ಸಂಘಟನೆಗಳು ಕಳೆದ ನಾಲ್ಕು ತಿಂಗಳಿಂದ ನಡೆಸಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ಈ ಸಂಬಂಧ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾ. ಮೂ.ನಾಗಮೋಹನದಾಸ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರಕ್ಕೆ ತಮ್ಮ ಬೆಂಬಲವೂ ಇದೆ ಎಂದರು.

ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವಾರೆಡ್ಡಿ ಹುಚ್ಚರೆಡ್ಡಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಲೂಕರ, ಸಿದ್ದಲಿಂಗಪ್ಪ, ರೇಖಾ ಯಕ್ಕುಂಡಿ, ಎಸ್.ಎಸ್. ಮೂಕನವರ, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜಿದ ಹಿರೆಕೋಡಿ ಮುಂತಾದವರು ಮಾತನಾಡಿ,

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿಗಳು ಕೇವಲ ಸರಕಾರದ ಪ್ರಶಸ್ತಿ ಮತ್ತು ಹುದ್ದೆಗಳಿಗೆ ಮುಗಿಬೀಳುತ್ತಾರೆ. ಆದರೆ ಕನ್ನಡ ಹೋರಾಟಗಳನ್ನು 

ಬೆಂಬಲಿಸಿ ಒಂದು ಹೇಳಿಕೆಯನ್ನು ಸಹ ಕೊಡುವುದಿಲ್ಲ ಎಂದು ಆರೋಪಿಸಿದರು.

ಆರಂಭದಲ್ಲಿ ಸಾಹಿತಿ ಅಶೋಕ ಮಲಗಲಿ ಸ್ವಾಗತಿಸಿದರು. ಅಶೋಕ ಚಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ ಗಡಿ ಭಾಗಕ್ಕೂ ಸೋಮಶೇಖರ ಅವರಿಗೂ ಇರುವ ಸುದೀರ್ಘ ಸಂಬಂಧವನ್ನು ವಿವರಿಸಿ ನಾಗನೂರು ರುದ್ರಾಕ್ಷಿ ಮಠದಲ್ಲಿ ಸಭೆ ನಡೆಸುವ ಮೂಲಕ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬೆಂಬಲ ನೀಡುವ ಕುರಿತು ನಿರ್ಧರಿಸಲಾಗುವುದೆಂದು ತಿಳಿಸಿದರು. ಕೊನೆಗೆ ಅಶೋಕ  ಮಲಗಲಿ ವಂದಿಸಿದರು.

Related Articles

Back to top button