Belagavi NewsBelgaum NewsHealthKannada NewsKarnataka NewsLatest

*ಮೆದುಳು ದಿನಾಚರಣೆ ಕಾರ್ಯಕ್ರಮ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಮೆದುಳು ಆರೋಗ್ಯ ಅಭಿಯಾನ (Karnataka Brain Health Initiative – KABHI) ವತಿಯಿಂದ-2026ರ ವಿಶ್ವ ಮೆದುಳು ದಿನವನ್ನು ಜುಲೈ 22 ರಂದು ಬೆಳಗಾವಿಯ ಇಸ್ಲಾಮಿಯಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಹಾಗೂ ಪಿಯು ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಜಿಲ್ಲಾ ಕುಷ್ಠರೋಗ ಅಧಿಕಾರಿ ಹಾಗೂ KABHI ಜಿಲ್ಲಾ ನೋಡಲ್ ಅಧಿಕಾರಿ ಡಾ. ಗೀತಾ ಕಾಂಬಳೆ ಅವರ ಮಾರ್ಗದರ್ಶನದಲ್ಲಿ ಜರುಗಿತು. ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಮೆದುಳಿನ ಆರೋಗ್ಯದ ಕುರಿತು ಜಾಗೃತಿ ಪಡೆದರು.

ಈ ವರ್ಷದ ವಿಶ್ವ ಮೆದುಳು ದಿನದ ಘೋಷವಾಕ್ಯ “ಎಲ್ಲರಿಗೂ ಮೆದುಳಿನ ಆರೋಗ್ಯದ ಸೌಲಭ್ಯ (Brain Health: Access for All) ಆಗಿದೆ. ಕರ್ನಾಟಕ ಮೆದುಳು ಆರೋಗ್ಯ ಅಭಿಯಾನ (KABHI) ಅನ್ನು 2023 ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆರಂಭಿಸಲಾಯಿತು.

ಪಾರ್ಶ್ವವಾಯು (Stroke), ಅಪಸ್ಮಾರ (Epilepsy), ತಲೆನೋವು (Headache), ಮರೆವು ಕಾಯಿಲೆ (Dementia) ಸೇರಿದಂತೆ ವಿವಿಧ ನರರೋಗಗಳ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 32 ಮೆದುಳು ಆರೋಗ್ಯ ಚಿಕಿತ್ಸಾಲಯಗಳನ್ನು (Brain Health Clinic) ಸ್ಥಾಪಿಸಲಾಗಿದೆ. ಬೆಳಗಾವಿಯಲ್ಲಿ ಚಿಮ್ಸ್ ಜಿಲ್ಲಾ ಆಸ್ಪತ್ರೆಯ ಓಪಿಡಿ ಸಂಖ್ಯೆ 18ರಲ್ಲಿ ಮೆದುಳು ಆರೋಗ್ಯ ಚಿಕಿತ್ಸಾಲಯ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ನರರೋಗಗಳಿಗೆ ತಜ್ಞರ ಚಿಕಿತ್ಸೆ, ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಮನೋವೈಜ್ಞಾನಿಕ ಸಮಾಲೋಚನೆ, ನಸಿರ್ಂಗ್ ಸೇವೆ ಹಾಗೂ ಪುನರ್ವಸತಿ ಸೇವೆಗಳನ್ನು ಸಮಗ್ರವಾಗಿ ಒದಗಿಸಲಾಗುತ್ತಿದೆ.

Home add -Advt

ಕಾರ್ಯಕ್ರಮವನ್ನು ಜಿಲ್ಲಾ ಸಂಯೋಜಕರಾದ ಸುಹಾನಾ ಕೋಳಕರ್ ಕರ್ನಾಟಕ ಮೆದುಳು ಆರೋಗ್ಯ ಅಭಿಯಾನದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಪರಿಚಯ ನೀಡಿದರು. ಕ್ಲಿನಿಕಲ್ ಸೈಕಾಲಜಿಸ್ಟ್ ಶೃತಿ ಬೋರ್ಗಲ್ ಅವರು ಮೆದುಳಿನ ಆರೋಗ್ಯದ ಮಹತ್ವ ಹಾಗೂ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುವ ವಿವಿಧ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಫಿಸಿಯೋಥೆರಪಿಸ್ಟ್ ಡಾ. ರಿತಿಕಾ ಅವರು ಪಾರ್ಶ್ವವಾಯು, ಅಪಸ್ಮಾರ, ಮರೆವು ಕಾಯಿಲೆ, ತಲೆನೋವು ಸೇರಿದಂತೆ ಪ್ರಮುಖ ನರರೋಗಗಳ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಅಗತ್ಯವನ್ನು ವಿವರಿಸಿದರು. 

ಮೇಘಶ್ರೀ ಚೌಗಲಾ ಅವರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ, ಒತ್ತಡ ನಿರ್ವಹಣೆ ಹಾಗೂ ದುಶ್ಚಟಗಳಿಂದ ದೂರವಿರುವಂತಹ ಉತ್ತಮ ಜೀವನ ಶೈಲಿ ಅಭ್ಯಾಸಗಳು ಮೆದುಳಿನ ಆರೋಗ್ಯವನ್ನು ಕಾಪಾಡಲು ಹೇಗೆ ಸಹಕಾರಿ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ (DMHP) ತಂಡವೂ ಭಾಗವಹಿಸಿತು. ವಿದ್ಯಾರ್ಥಿಗಳಲ್ಲಿ ಮೆದುಳಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಹಾಗೂ ನರರೋಗಗಳ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆಯುವಂತೆ ಕರೆ ನೀಡಲಾಯಿತು.

ವಿಶ್ವ ಮೆದುಳು ದಿನದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮೆದುಳಿನ ಆರೋಗ್ಯದ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಗಿದ್ದು, ಎಲ್ಲರಿಗೂ ಮೆದುಳಿನ ಆರೋಗ್ಯದ ಸೌಲಭ್ಯ ಎಂಬ ಈ ವರ್ಷದ ಘೋಷ ವಾಕ್ಯವನ್ನು ಸಾರ್ಥಕಗೊಳಿಸಿತು.

ಕಾರ್ಯಕ್ರಮದಲ್ಲಿ ಇಸ್ಲಾಮಿಯಾ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಫಹೃದಾ ಕಾಮಟೆ, ಇಸ್ಲಾಮಿಯಾ ಗರ್ಲ್ಸ್ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಬಿ. ಸಿ. ಸಾವನೂರು, ಹಾಗೂ ಇಸ್ಲಾಮಿಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಇರ್ಷಾದ್ ಪಾಲೇಗಾರ್ ಉಪಸ್ಥಿತರಿದ್ದರು.

Related Articles

Back to top button