*ಉಪಲೋಕಾಯುಕ್ತರ ದಿಢೀರ್ ದಾಳಿ: ಆಸ್ಪತ್ರೆ, ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ತರಾಟೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಚಿಕ್ಕೋಡಿಯಲ್ಲಿ ವಿವಿಧ ಸರ್ಕಾರಿ ಕಚೇರಿಗಳು, ತಾಲೂಕು ಆಸ್ಪತ್ರೆ ಹಾಗೂ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ವ್ಯಾಪಕ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಕಡೆಗಳಲ್ಲಿ ಕಂಡುಬಂದ ಲೋಪಗಳು, ವಿಳಂಬ ಹಾಗೂ ಅವ್ಯವಸ್ಥೆಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಸರಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಉಪಲೋಕಾಯುಕ್ತರು ಔಷಧ ಮಳಿಗೆ, ರಕ್ತ ಭಂಡಾರ, ಔಷಧ ಉಗ್ರಾಣ ಸೇರಿದಂತೆ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಪುರುಷರು, ಮಹಿಳೆಯರು ಹಾಗೂ ವಿಕಲಚೇತನರಿಗೆ ಪ್ರತ್ಯೇಕವಾಗಿ ಔಷಧ ವಿತರಿಸುವ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ವೈದ್ಯರು ಶಿಫಾರಸು ಮಾಡಿದ ಎಲ್ಲ ಔಷಧಗಳನ್ನು ನೀಡದಿರುವುದು ಹಾಗೂ ಅವಧಿ ಮೀರಿದ ಔಷಧ ವಿತರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ರೋಗಿಗಳೊಂದಿಗೆ ನೇರವಾಗಿ ಮಾತನಾಡಿ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ನಿರ್ವಹಣೆ ಸಮರ್ಪಕವಾಗಿಲ್ಲದಿರುವುದನ್ನು ಗಮನಿಸಿದ ಅವರು, ಸರ್ಕಾರದಿಂದ ಅನುದಾನ ದೊರೆಯುತ್ತಿದ್ದರೂ ಆಸ್ಪತ್ರೆಯನ್ನು ಸೂಕ್ತವಾಗಿ ನಿರ್ವಹಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಚಿಕ್ಕೋಡಿ ಪುರಸಭೆಗೆ ಭೇಟಿ ನೀಡಿದ ಅವರು ಜನನ-ಮರಣ ದಾಖಲೆ, ಇ-ಸತ್ತು, ಇ-ಖಾತಾ, ಬಿ-ಖಾತಾ ಸೇರಿದಂತೆ ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲಿಸಿದರು.
ಸಿಬ್ಬಂದಿಯ ಹಾಜರಾತಿ ವಹಿ, ಕಟ್ಟಡ ನಿರ್ಮಾಣ ಪರವಾನಗಿ, ತ್ಯಾಜ್ಯ ವಿಲೇವಾರಿ ವಾಹನಗಳು, ಬೀದಿ ದೀಪಗಳ ನಿರ್ವಹಣೆ ಹಾಗೂ ವೆಚ್ಚ, ಹೊಸ ಬಡಾವಣೆಗಳಿಗೆ ನೀಡಿರುವ ಅನುಮತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡರು. ಪುರಸಭೆ ಸಿಬ್ಬಂದಿಯ ಕಳೆದ ಎರಡು ವರ್ಷಗಳ ವೇತನ ವಿವರ ಸಲ್ಲಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣದಲ್ಲಿ ಅತಿಕ್ರಮಣ ಅಥವಾ ನಿಯಮಬಾಹಿರ ಕಟ್ಟಡ ನಿರ್ಮಾಣದ ಕುರಿತು ಸಾರ್ವಜನಿಕರಿಗೆ ದೂರುಗಳಿದ್ದರೆ ನೇರವಾಗಿ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಚಿಕ್ಕೋಡಿ ಬಸ್ ನಿಲ್ದಾಣಕ್ಕೂ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತರು ಆಹಾರ ಮಳಿಗೆಗಳು ಹಾಗೂ ಉಪಾಹಾರ ಗೃಹಗಳನ್ನು ಪರಿಶೀಲಿಸಿದರು. ಆಹಾರ ಪದಾರ್ಥಗಳ ಗುಣಮಟ್ಟ, ದಾಸ್ತಾನು ಮತ್ತು ಸ್ವಚ್ಛತೆಯನ್ನು ಪರಿಶೀಲಿಸಿ, ಸಿಬ್ಬಂದಿಗೆ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ವೇತನ ನೀಡುವಂತೆ ಸೂಚಿಸಿದರು.
ಬಸ್ ನಿಲ್ದಾಣದಲ್ಲಿನ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಹಿನ್ನೆಲೆಯಲ್ಲಿ ಅವುಗಳನ್ನು ಕೂಡಲೇ ದುರಸ್ತಿಪಡಿಸುವಂತೆ ಸೂಚಿಸಿದರು. ಶೌಚಾಲಯಗಳ ಸ್ವಚ್ಛತೆ ಕಾಪಾಡಬೇಕು, ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು. ಶೌಚಾಲಯ ಬಳಕೆಗೆ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಗುತ್ತಿಗೆ ರದ್ದುಪಡಿಸುವಂತೆ ಎಚ್ಚರಿಕೆ ನೀಡಿದರು.
ವಾಹನ ನಿಲುಗಡೆ ಶುಲ್ಕದ ಬಿಲ್‌ಗಳಲ್ಲಿ ವಾಹನ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನಮೂದಿಸದೆ ಇರುವುದರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ, ತಕ್ಷಣ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.
ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು ಸಿಬ್ಬಂದಿಯ ಹಾಜರಾತಿ ವಹಿಯನ್ನು ಪರಿಶೀಲಿಸಿದರು.
ಅನಧಿಕೃತವಾಗಿ ಗೈರು ಹಾಜರಾಗುವ ಸಿಬ್ಬಂದಿಯ ವೇತನ ತಡೆಹಿಡಿಯುವಂತೆ ಸೂಚಿಸಿದ ಅವರು, ಬೆಳಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲಿ ಹಾಜರಾತಿ ದಾಖಲಿಸುವಂತೆ ತಿಳಿಸಿದರು. ತಹಶೀಲ್ದಾರ ನ್ಯಾಯಾಲಯದಲ್ಲಿನ ಬಾಕಿ ಪ್ರಕರಣಗಳ ಮಾಹಿತಿ ಪಡೆದು ಕಡತಗಳನ್ನು ಪರಿಶೀಲಿಸಿದರು.
ಮಾಸಾಶನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದ್ದ ವೃದ್ಧೆಯೊಬ್ಬರಿಗೆ ಸ್ಥಳದಲ್ಲಿಯೇ ತಾಂತ್ರಿಕ ಸಮಸ್ಯೆ ಪರಿಹರಿಸಿ ಮಾಸಾಶನ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಹಾಗೂ ಆನ್‌ಲೈನ್ ದಾಖಲಾತಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಸಿಬ್ಬಂದಿಯ ಮೊಬೈಲ್‌ಗಳನ್ನು ಪರಿಶೀಲಿಸಿ, ಕಳೆದ ಎರಡು ವರ್ಷಗಳ ವೇತನ ವಿವರ ಒದಗಿಸುವಂತೆ ಸೂಚಿಸಿದರು.
ಉಪನೋಂದಣಾಧಿಕಾರಿ ಕಚೇರಿಗೂ ಭೇಟಿ ನೀಡಿದ ಅವರು ದಾಖಲೆಗಳನ್ನು ಪರಿಶೀಲಿಸಿ, ಸಿಬ್ಬಂದಿಯ ಮೊಬೈಲ್‌ಗಳಲ್ಲಿ ನಡೆದಿರುವ ಹಣಕಾಸು ವಹಿವಾಟಿನ ಕುರಿತು ವಿವರಣೆ ಹಾಗೂ ಸಂಬಂಧಿತ ಮಾಹಿತಿ ಒದಗಿಸುವಂತೆ ಸೂಚಿಸಿದರು. ತಾಲೂಕು ಖಜಾನೆಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಅವರು, ಸಿಬ್ಬಂದಿ ಚಲನವಲನ ವಹಿಯನ್ನು ನಿಯಮಿತವಾಗಿ ನಿರ್ವಹಿಸುವಂತೆ ತಿಳಿಸಿದರು.
ಇದಲ್ಲದೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ದಾಖಲೆಗಳು ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಒಟ್ಟಾರೆ, ಚಿಕ್ಕೋಡಿಯಲ್ಲಿ ಉಪಲೋಕಾಯುಕ್ತರ ದಿಢೀರ್ ಪರಿಶೀಲನೆಯ ವೇಳೆ ಸರ್ಕಾರಿ ಕಚೇರಿಗಳ ಕಾರ್ಯವೈಖರಿ, ಸಿಬ್ಬಂದಿಯ ಹಾಜರಾತಿ, ಸಾರ್ವಜನಿಕ ಸೇವೆಗಳಲ್ಲಿನ ವಿಳಂಬ, ಸ್ವಚ್ಛತೆ, ದಾಖಲೆ ನಿರ್ವಹಣೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ಹಲವು ಲೋಪಗಳು ಬೆಳಕಿಗೆ ಬಂದಿದ್ದು, ಅವುಗಳನ್ನು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಾರ್ಯದರ್ಶಿ ಅರವಿಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಲೋಕಾಯುಕ್ತ ಎಸ್‌ಪಿ ಪ್ರಸನ್ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ., ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವು ಬಂಗಾರಪ್ಪನವರ, ತಹಶೀಲ್ದಾರ ಆರ್.ಆರ್. ಬುರ್ಲಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.




