
ಬೆಳ್ತಂಗಡಿ ಪ್ರಕರಣ ಮರು ತನಿಖೆಗೆ SIT ರಚನೆ
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರದಿಂದ ಆದೇಶ; 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ
ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2012ರಲ್ಲಿ ದಾಖಲಾಗಿದ್ದ ಪ್ರಕರಣದ ಮರು ತನಿಖೆಗಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ Special Leave Petition (Crl.) No. 5763 of 2026ರಲ್ಲಿ ಸೆ.21, 2026ರಂದು ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಈ SIT ರಚಿಸಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಮೊ.ಸಂ. 250/2012, ಭಾರತೀಯ ದಂಡ ಸಂಹಿತೆ (IPC)ಯ ಕಲಂ 376 ಮತ್ತು 302ರ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ ಹಾಗೂ ಬಳಿಕ ಸಿಬಿಐನಲ್ಲಿ ಮರು ದಾಖಲಾದ FIR No. RC 2(S)/2014/CBI/SCB/CHENNAI ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಯಲಿದೆ.
ಸುಪ್ರೀಂಕೋರ್ಟ್‌ನ ಪ್ರಮುಖ ನಿರ್ದೇಶನಗಳು
ಚಂದಪ್ಪ ಗೌಡ ಅವರು ಸಲ್ಲಿಸಿದ್ದ WP No.3301/2024 ರಿಟ್ ಅರ್ಜಿಯನ್ನು ವಜಾಗೊಳಿಸಿದ್ದ 2024ರ ಆಗಸ್ಟ್ 30ರ ಆದೇಶವನ್ನು ರದ್ದುಗೊಳಿಸಲಾಗಿದೆ.
2012ರ ಅಕ್ಟೋಬರ್ 9ರಂದು ದೂರು ಆಧರಿಸಿ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಮೊ.ಸಂ.250/2012 ಪ್ರಕರಣದಲ್ಲಿ ಮೊದಲಿನಿಂದ (denovo) ತನಿಖೆ ನಡೆಸುವಂತೆ ನಿರ್ದೇಶಿಸಲಾಗಿದೆ.
ಆಧುನಿಕ ತನಿಖಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ದಕ್ಷ ಅಧಿಕಾರಿಗಳನ್ನು ಒಳಗೊಂಡ, ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ SIT ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.
ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ, CID ಅಥವಾ CBI ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸಿದ್ದ ಯಾವುದೇ ಅಧಿಕಾರಿಯನ್ನು ಹೊಸ SITನಲ್ಲಿ ಸೇರ್ಪಡೆಗೊಳಿಸಬಾರದು ಎಂದು ನಿರ್ದೇಶಿಸಲಾಗಿದೆ.
ಆರೋಪಿ ಸಂತೋಷ್ ರಾವ್ ಈಗಾಗಲೇ ವಿಚಾರಣೆಗೊಳಗಾಗಿ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಸಂವಿಧಾನದ Article 20(2) ಹಾಗೂ CrPC 300ರ ಅನ್ವಯ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಲ್ಲಿಕ್ ಜೈನ್, ದೀರಜ್ ಜೈನ್, ಉದಯ್ ಜೈನ್ ಸೇರಿದಂತೆ ಯಾವುದೇ ವ್ಯಕ್ತಿಯ ಕುರಿತು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿಲ್ಲ. SIT ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸಕ್ಷಮ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
SIT ತಂಡ
SITಗೆ ಎನ್. ಶಶಿಕುಮಾರ್, IPS, ಪೊಲೀಸ್ ಮಹಾನಿರೀಕ್ಷಕರು (ಪ್ರಸ್ತುತ ಸ್ಥಳ ನಿರೀಕ್ಷಣೆಯಲ್ಲಿರುವವರು) ಮುಖ್ಯಸ್ಥರಾಗಿರುತ್ತಾರೆ.
ಸದಸ್ಯರು:
ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ, IPS – ಪೊಲೀಸ್ ಆಯುಕ್ತರು, ಮಂಗಳೂರು ನಗರ
ನಿಶಾ ಜೇಮ್ಸ್, IPS – ಪೊಲೀಸ್ ಅಧೀಕ್ಷಕರು, ರಾಜ್ಯ ಗುಪ್ತ ವಾರ್ತೆ, ಬೆಂಗಳೂರು
ಲೋಕೇಶ್ ಜಗಲಾಸರ್, IPS – ಪೊಲೀಸ್ ಅಧೀಕ್ಷಕರು, CID, ಬೆಂಗಳೂರು
ವೆಂಕಟೇಶ್ ಪ್ರಸನ್ನ – ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)-2023ರ ಕಲಂ 2(1)(ಯು) ಅಡಿಯಲ್ಲಿ SITಗೆ ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಲಾಗಿದೆ. ತನಿಖಾಧಿಕಾರಿಗಳಿಗೆ ಕಲಂ 193ರ ಅಡಿಯಲ್ಲಿ ಪೊಲೀಸ್ ವರದಿ ಸಲ್ಲಿಸುವ ಅಧಿಕಾರವನ್ನೂ ನೀಡಲಾಗಿದೆ.
SIT ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರು, ಬೆಂಗಳೂರು ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ನಿಗದಿತ ಮೂರು ತಿಂಗಳ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ಅಂಬಿಕಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.




