ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ವಾತಂತ್ರ್ಯ ಚಳುವಳಿ ಒಂದು ನಾಟಕ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದೆ. ಅಲ್ಲದೆ ಇಂದಿನ ಸಂಸದೀಯ ಸಭೆಗೆ ಆಗಮಿಸದಂತೆ ನಿಷೇಧ ಹೇರಿದೆ.
ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಹೈಕಮಾಂಡ್, ಬೇಷರತ್ ಕ್ಷಮೆ ಕೇಳಲು ಸೂಚಿಸಿತ್ತು. ಅನಂತ ಕುಮಾರ್ ಕ್ಷಮೆಯಾಚಿಸದ ಹಿನ್ನೆಲೆ ಶೋಕಾಸ್ ನೋಟಿಸ್ ನೀಡಿದ್ದು, ಇದೀಗ ಸಂಸದೀಯ ಸಭೆಗೆ ನಿಷೇಧ ಹೇರಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಗಾಂಧೀಜಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ತಿರಸ್ಕರಿಸಿದ್ದೇವೆ. ಕ್ಷಮೆ ಕೇಳಲು ಸೂಚಿಸಿದ್ದೇವೆ. ಅನಂತಕುಮಾರ್ ಗಾಂಧಿ ಎಂಬ ಶಬ್ಧವನ್ನು ಎಲ್ಲಿಯೂ ಬಳಸಿಲ್ಲ. ಪರೋಕ್ಷವಾಗಿ ಹೇಳಿರಬಹುದು. ಆದರೂ ಸ್ಪಷ್ಟನೆ ನೀಡುವಂತೆ ವಿವರಣೆ ಕೇಳಿ ನೋಟೀಸ್ ನೀಡಲಾಗಿದೆ. ಇಂದು ಅವರು ಕ್ಷೆಮೆಯಾಚಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಈ ನಡುವೆ ಈಗಾಗಲೇ ನಳೀನ್ ಕುಮಾರ್ ಕಟೀಲು, ಅನಂತ್ ಕುಮಾರ್ ಹೆಗಡೆ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದ್ದು, ಚರ್ಚೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ