
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು-ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನಗಳು ಮತ್ತು ರಾಜ್ಯದ ಪ್ರಸ್ತುತ ಜಲ ಸಂಗ್ರಹದ ವಾಸ್ತವಿಕತೆಯ ನಡುವೆ ಸರ್ಕಾರ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ.
ರಾಜ್ಯದ ಪ್ರಮುಖ ನಾಲ್ಕು ಕಾವೇರಿ ಜಲಾನಯನ ಅಣೆಕಟ್ಟುಗಳಾದ ಕೆ ಆರ್‌ಎಸ್, ಕಬಿನಿ, ಹಾರಂಗಿ, ಮತ್ತು ಹೇಮಾವತಿ ಜಲಾಶಯಗಳಲ್ಲಿ ಸದ್ಯ ಒಟ್ಟು 66 ಟಿಎಂಸಿ ಅಡಿ ನೀರು ಶೇಖರಣೆಯಾಗಿದೆ. ಒಳಹರಿವಿನಲ್ಲಿ ಸದ್ಯ ಅಲ್ಪ ಪ್ರಮಾಣದ ಚೇತರಿಕೆ ಕಂಡುಬಂದಿದ್ದರೂ, ಲಭ್ಯವಿರುವ ನೀರಿನ ನಿರ್ವಹಣೆ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾದ ಅನಿವಾರ್ಯತೆ ಇದೆ. ಒಟ್ಟು ಲಭ್ಯವಿರುವ 66 ಟಿಎಂಸಿ ನೀರಿನಲ್ಲಿ ಬೌಗೋಳಿಕವಾಗಿ ಹತ್ತು ಜಿಲ್ಲೆಗಳ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀ ಒದಗಿಸಲು ಕನಿಷ್ಠ 40 ಟಿಎಂಸಿ ನೀರು ಮೀಸಲಿಡಬೇಕಿದೆ. ಅಣೆಕಟ್ಟುಗಳ ಸುರಕ್ಷತೆ ಮತ್ತು ಕೆಳಮಟ್ಟದ ಹೂಳು ಪ್ರದೇಶದ ಕಾರಣಕ್ಕಾಗಿ ಕನಿಷ್ಠ 10 ಟಿಎಂಸಿ ನೀರು ಡೆಡ್ ಸ್ಟೋರೇಜ್‌ಗೆ ಹೋಗುತ್ತದೆ.
ಇವೆಲ್ಲವನ್ನೂ ಕಳೆದು ನಾಲ್ಕು ಡ್ಯಾಮ್‌ಗಳಿಂದ ಒಟ್ಟು 16 ರಿಂದ 18 ಟಿಎಂಸಿ ನೀರು ಮಾತ್ರ ಪ್ರಸ್ತುತ ಹೆಚ್ಚುವರಿಯಾಗಿ ಲಭ್ಯವಿರುತ್ತದೆ. ಈ ನೀರನ್ನೇ ಮುಂದಿನ ದಿನಗಳಲ್ಲಿ ಉಳಿಸಿಕೊಂಡು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳುವುದರ ಬಗ್ಗೆ ಭಾರಿ ಮತ್ತು ಮಧ್ಯಮ ಇಲಾಖೆಯ ಜನಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಅವರು ಗಂಭೀರ ಚಿಂತನೆ ನಡೆಸಿದ್ದಾರೆ
ಕಾವೇರಿ ಪ್ರಾಧಿಕಾರ ಮತ್ತು ನ್ಯಾಯಾಲಯಗಳ ನಿಲುವು
ಹಿಂದಿನ ಅನುಭವಗಳು
ಕಳೆದ 20 ರಿಂದ 23 ವರ್ಷಗಳ ಅವಧಿಯಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾನೂನು ಹೋರಾಟಗಳು ಮತ್ತು ಪ್ರಾಧಿಕಾರದ ತೀರ್ಪುಗಳ ವಿಶ್ಲೇಷಣೆ ಗಮನಾರ್ಹವಾಗಿದೆ.
ಪ್ರಾಧಿಕಾರದ ತಾಂತ್ರಿಕತೆ: CWMA (ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ) ನೀಡುವ ತೀರ್ಪುಗಳನ್ನು ಅಥವಾ ಆದೇಶಗಳನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ಹಿಂದಿನ ಸಂದರ್ಭಗಳಲ್ಲಿ ತಿರಸ್ಕರಿಸಿರುವ ನಿದರ್ಶನಗಳಿವೆ.
ಪ್ರಾಧಿಕಾರದಲ್ಲಿರುವ ತಜ್ಞರು ಎಲ್ಲ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಅಂಶಗಳನ್ನು (Scientific & Technical Data) ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದರಿಂದ, ನ್ಯಾಯಾಲಯಗಳು ಸಾಮಾನ್ಯವಾಗಿ ಅವರ ತೀರ್ಪಿಗೆ ಹೆಚ್ಚಿನ ಮಾನ್ಯತೆ ನೀಡಿವೆ.
ಈ ಎಲ್ಲಾ ವಾಸ್ತವಿಕ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಂದೆ ಪ್ರಮುಖವಾಗಿ ಎರಡು ಮಾರ್ಗಗಳಿವೆ.
ಪ್ರಾಧಿಕಾರದ ಆದೇಶದಂತೆ ನಡೆದುಕೊಳ್ಳುವುದು: ಪ್ರಾಧಿಕಾರ ಸೂಚಿಸಿದಂತೆ (ಉದಾಹರಣೆಗೆ 4 ಟಿಎಂಸಿ ನೀರು) ತಮಿಳುನಾಡಿಗೆ ಬಿಟ್ಟು, ಉಳಿದ 12 ರಿಂದ 14 ಟಿಎಂಸಿ ಹೆಚ್ಚುವರಿ ನೀರನ್ನು ಮಾತ್ರ ರಾಜ್ಯದ ಮುಂದಿನ ಬಳಕೆಗಾಗಿ ಸಮರ್ಪಕವಾಗಿ ಬಳಸಿಕೊಳ್ಳುವುದು.
ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸುವುದು. ಆದರೆ ಹಿಂದಿನ ಮೇಲ್ಮನವಿಗಳ ತಿರಸ್ಕಾರದ ಇತಿಹಾಸವನ್ನು ಗಮನಿಸಿದರೆ, ಇದು ಕಾನೂನು ತೊಡಕುಗಳನ್ನು ಹೆಚ್ಚಿಸಿಕೊಳ್ಳುವ ಮತ್ತು ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಯೂ ಇದೆ.
ಕುಡಿಯುವ ನೀರಿನ ಭದ್ರತೆ ಮತ್ತು ನೆರೆ ರಾಜ್ಯದೊಂದಿಗಿನ ಕಾನೂನು ಬದ್ಧ ಬಾಧ್ಯತೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಯಾವ ರೀತಿಯ ರಾಜತಾಂತ್ರಿಕ ಹಾಗೂ ಕಾನೂನಾತ್ಮಕ ತೀರ್ಮಾನ ಕೈಗೊಳ್ಳಲಿದೆ ಎಂಬುದು ಸದ್ಯದ ಕುತೂಹಲದ ವಿಷಯವಾಗಿದೆ.




