
ಪ್ರಗತಿವಾಹಿನಿ ಸುದ್ದಿ: ತಮ್ಮ ಸ್ಥಾನ ಬದಲಾವಣೆಯ ಕುರಿತಾದ ಚರ್ಚೆಗಳನ್ನು ತಳ್ಳಿಹಾಕಿದ ಬಸವರಾಜ್ ಹೊರಟ್ಟಿ ಅವರು, ಸದ್ಯಕ್ಕೆ ಸಭಾಪತಿ ಹುದ್ದೆ ಖಾಲಿ ಇಲ್ಲ ಮತ್ತು ತಾವು ಕಾನೂನುಬದ್ಧವಾಗಿ ಅಧಿಕಾರದಲ್ಲೇ ಮುಂದುವರಿದಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗೆ ಕಾಂಗ್ರೆಸ್‌ನಿಂದ ಸಲೀಂ ಅಹಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಮಾಧ್ಯಮಗಳ ಜೊತೆ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಆಡಳಿತಾರೂಢ ಕಾಂಗ್ರೆಸ್‌ಗೆ ಖಡಕ್ ತಿರುಗೇಟು ನೀಡಿದ್ದಾರೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಹೆಚ್ಚಿರಬಹುದು, ಆದರೆ ಕೇವಲ ಬಹುಮತವಿದೆ ಎಂದ ತಕ್ಷಣ ಸಭಾಪತಿಯನ್ನು ಹುದ್ದೆಯಿಂದ ತೆಗೆಯಲು ಬರುವುದಿಲ್ಲ ಎಂದಿದ್ದಾರೆ. ಆಡಳಿತ ಪಕ್ಷಕ್ಕೆ ಬಹುಮತವಿದ್ದಾಗಲೂ ವಿರೋಧ ಪಕ್ಷದ ನಾಯಕರು ಸಭಾಪತಿಯಾಗಿ ದೀರ್ಘಕಾಲ ಮುಂದುವರಿದ ಉದಾಹರಣೆಗಳು ಇತಿಹಾಸದಲ್ಲಿವೆ ಎಂದು ಅವರು ನೆನಪಿಸಿದ್ದಾರೆ.
ಸಭಾಪತಿಯನ್ನು ಹುದ್ದೆಯಿಂದ ಕೆಳಗಿಳಿಸಲು ಇರುವ ಸಂವಿಧಾನಬದ್ಧ ಪ್ರಕ್ರಿಯೆಗಳನ್ನು ಬಸವರಾಜ್ ಹೊರಟ್ಟಿ ಅವರು ಈ ಕೆಳಗಿನಂತೆ ವಿವರಿಸಿದ್ದಾರೆ
ವಿಧಾನ ಪರಿಷತ್ ಸದಸ್ಯರು ಜಂಟಿಯಾಗಿ ಸಹಿ ಮಾಡಿ ಲಿಖಿತ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ನಿರ್ಣಯವನ್ನು ಸದನದಲ್ಲಿ ಮಂಡಿಸುವ ಕನಿಷ್ಠ 14 ದಿನಗಳ ಮುಂಚಿತವಾಗಿ ಸಭಾಪತಿಯವರಿಗೆ ಅಧಿಕೃತವಾಗಿ ನೋಟಿಸ್ ನೀಡಬೇಕು.
ಇಲಾಖೆಯಿಂದಾಗಲಿ ಅಥವಾ ಸರ್ಕಾರದ ಕಡೆಯಿಂದಾಗಲಿ ಇಂತಹ ಯಾವುದೇ ನೋಟಿಸ್ ಇದುವರೆಗೆ ನನಗೆ ತಲುಪಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಏನು ಹೆಜ್ಜೆ ಇಡುತ್ತದೆ ಎಂಬುದನ್ನು ನಾನು ಕಾದು ನೋಡುತ್ತೇನೆ” ಎಂದು ಹೊರಟ್ಟಿ ಹೇಳಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ಪ್ರಕಾರ, ಸಭಾಪತಿಯನ್ನು ಅಧಿಕಾರದಿಂದ ಮುಕ್ತಗೊಳಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಿರ್ಣಯ ಮಂಡಿಸಲು ಬಯಸುವ ಸದಸ್ಯರು 14 ದಿನಗಳ ಮುಂಚಿತವಾಗಿ ಪರಿಷತ್ತಿನ ಕಾರ್ಯದರ್ಶಿಯವರಿಗೆ ಲಿಖಿತ ನೋಟಿಸ್ ನೀಡಬೇಕು. ಆ ಗಡುವು ಮುಗಿದ ಬಳಿಕ ಸದನ ಸಮಾವೇಶಗೊಂಡಾಗ ಮಾತ್ರ ನಿರ್ಣಯ ಮಂಡನೆಗೆ ಅನುಮತಿ ಕೋರಬಹುದು. ಸದನದ ಬಹುತೇಕ ಸದಸ್ಯರು ಒಪ್ಪಿಗೆ ನೀಡಿದರೆ ಮಾತ್ರ ಚರ್ಚೆ ಮತ್ತು ಮತದಾನ ಪ್ರಕ್ರಿಯೆ ಜರುಗುತ್ತದೆ.
ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಚಿವರ ಆಯ್ಕೆಯ ಕಸರತ್ತು ಜೋರಾಗಿದ್ದರೂ, ಬಸವರಾಜ್ ಹೊರಟ್ಟಿ ಅವರು ತೆಗೆದುಕೊಂಡಿರುವ ಈ ಕಠಿಣ ಕಾನೂನಾತ್ಮಕ ನಿಲುವಿನಿಂದಾಗಿ ಮೇಲ್ಮನೆಯ ಸಭಾಪತಿ ಬದಲಾವಣೆ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ ಎಂಬುದು ರಾಜಕೀಯ ವಲಯದಲ್ಲಿ ಸ್ಪಷ್ಟವಾಗಿದೆ.




