
ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರು ಹಾಗೂ ರೈತರು ನಡೆಸುತ್ತಿರುವ ಪ್ರತಿಭಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತೀವ್ರಗೊಂಡಿದೆ. ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ, ಸಕ್ಕರೆ ಎಂಎಸ್ ಪಿ 60 ರೂಗೆ ಹೆಚ್ಚಳಕ್ಕೆ ಮನವಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ರೈತರು ಸಾಗರೋಪಾದಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಆರಂಭದಲ್ಲಿ ಚೆನ್ನಮ್ಮ ವೃತ್ತದಲ್ಲಿ ಆರಂಭವಾದ ಪ್ರತಿಭಟನೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತು. . ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಜೊತೆಗೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಿಸಬೇಕು ಹಾಗೂ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇದೇ ವೇಳೆ ಇಂಚಿಗೇರಿ ಮಠದ ಶಶಿಕಾಂತ ಗುರೂಜಿ ಸೇರಿದಂತೆ ರೈತ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಕ್ಕರೆಯ MSP ದರವನ್ನು 31 ರೂ.ಗೆ ನಿಗದಿ ಮಾಡಲಾಗಿದ್ದು, ಇದನ್ನು 60 ರೂ.ಗೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಬ್ಬಿನ ಬೆಲೆ ನಿಗದಿಯಲ್ಲಿ ರೈತರಿಗೆ ನ್ಯಾಯ ಸಿಗಬೇಕು ಮತ್ತು ಹೊಸ ಎಫ್‌ಆರ್‌ಪಿ ನಿಗದಿ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಚೆನ್ನಮ್ಮ ವೃತ್ತದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದತ್ತ ಪ್ರತಿಭಟನಾಕಾರರು ಹೆಜ್ಜೆ ಹಾಕಿದರು. ಪ್ರಹ್ಲಾದ್ ಜೋಶಿ ನಿವಾಸದ ಬಳಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಜೋಶಿ ನಿವಾಸದತ್ತ ಮುನ್ನಿಗ್ಗಿದರು. ಈ ವೇಳೆ ಹೋರಾಟಗಾರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಪೊಲೀಸರು ಹರಸಾಹಸ ಪಟ್ಟು ರೈತರನ್ನು ನಿಯಂತ್ರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




