Karnataka NewsLatestPolitics

*ಹೈಕಮಾಂಡ್ ಸೂಚಿಸಿದೆ, ದಯವಿಟ್ಟು ರಾಜೀನಾಮೆ ನೀಡಿ ಎಂದು ಸಿಎಂ ಫೋನ್ ಮಾಡಿ ಹೇಳಿದ್ದಾರೆ: ತುಂಬಾ ನೋವಾಗುತ್ತಿದೆ ಎಂದ ಬಸವರಾಜ್ ಹೊರಟ್ಟಿ*

ಪ್ರಗತಿವಾಹಿನಿ ಸುದ್ದಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಸವರಾಜ ಹೊರಟ್ಟಿ ಮೇಲೆ ಒತ್ತಡ ಹೇರ‍ಲಾಗುತ್ತಿದೆ. ಸಿಎಂ ಡಿಕೆ ಶಿವಕುಮಾರ್ ಅವರೇ ಹೊರಟ್ಟಿ ಅವರಿಗೆ​ ಸೂಚನೆ ನೀಡಿದ್ದಾರೆ ಈ ಬಗ್ಗೆ ಸ್ವತಃ ಹೊರಟ್ಟಿ ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 2ರ ಸುಮಾರಿಗೆ ಕರೆ ಮಾಡಿದ್ದ ಸಿಎಂ ಡಿ.ಕೆ.ಶಿವಕುಮಾರ್ ‘ಪಕ್ಷದ ಹೈಕಮಾಂಡ್ ಸೂಚಿಸಿದೆ, ದಯವಿಟ್ಟು ರಾಜೀನಾಮೆ ನೀಡಿ’ ಎಂದಿದ್ದಾರೆ. ಇದರಿಂದ ನೋವಾಗಿದೆ ಎಂದು ತಿಳಿಸಿದ್ದಾರೆ.

ಇದು ಕಲುಷಿತ ರಾಜಕಾರಣ. ಮನಸ್ಸಿಗೆ ತುಂಬಾ ನೋವಾಗಿದೆ. ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಪಕ್ಷದ ಲೆಟರ್ ಹೆಡ್​ನಲ್ಲಿ ಎಂದೂ ಈ ರೀತಿ ಆಯ್ಕೆ ಆಗಿರಲಿಲ್ಲ. ಸಭಾಪತಿ, ಸಭಾಧ್ಯಕ್ಷರ ಸ್ಥಾನ ಸಾಂವಿಧಾನಿಕ ಹುದ್ದೆ. ನನಗೆ ನೋಟಿಸ್ ಕೊಡಲಿ ಉತ್ತರ ಕೊಡುತ್ತೇನೆ. ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆನೂ ಇಲ್ಲ. ಯಾವ ಕಾರಣಕ್ಕೆ ರಾಜೀನಾಮೆ ಕೇಳಿದರು ಎನ್ನುವುದು ಮುಖ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಡಿ.ಕೆ.ಶಿವಕುಮಾರ್​ ಕರೆ ವಿಚಾರವಾಗಿ ಮಾತನಾಡಿದ ಅವರು, ಅರ್ಧ ಗಂಟೆ ಹಿಂದೆ ಸಿಎಂ ಕರೆ ಮಾಡಿದ್ದರು. ಪಕ್ಷದಿಂದ ಆಯ್ಕೆ ಪ್ರಕ್ರಿಯೆ ಆಗಿದೆ. ತಾವು ರಾಜೀನಾಮೆ ನೀಡಿ ಅಂದರು. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ನಾನು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಜೊತೆಗೆ ತೀರ್ಮಾನ ಮಾಡುತ್ತೇನೆ ಎಂದರು.

ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಇರಲಿಲ್ಲ. ಸಭಾಪತಿ ಪೀಠಕ್ಕೆ ಅವಮಾನ ಮಾಡಿದಂತೆ. ನನ್ನ ಅವಧಿ ಇನ್ನೂ ಇದೆ. ಹೀಗಾಗಿ ಸದ್ಯಕ್ಕೆ ರಾಜೀನಾಮೆ ಕೊಡಲ್ಲ. ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button