
ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು: ಹಿರಿಯರ ಅಸಮಾಧಾನ, ಖಾತೆ ಹಂಚಿಕೆ ಗೊಂದಲ; ಕೆಲವರಿಗೆ ಕೊಕ್, ಹೊಸ ಮುಖಗಳಿಗೆ ಅವಕಾಶದ ಚರ್ಚೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಬದಲಾವಣೆ ನಡೆಯುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಂಪುಟ ಪುನಾರಚನೆ ಕುರಿತಂತೆ ಪಕ್ಷದೊಳಗೆ ಹಲವು ದಿನಗಳಿಂದ ನಡೆಯುತ್ತಿರುವ ಗುಸುಗುಸು ಇದೀಗ ಮತ್ತಷ್ಟು ತೀವ್ರಗೊಂಡಿದ್ದು, ಕೆಲ ಸಚಿವರಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಕೆಲ ಸಚಿವರ ಕಾರ್ಯವೈಖರಿ, ಪಕ್ಷ ಸಂಘಟನೆಗೆ ನೀಡುತ್ತಿರುವ ಕೊಡುಗೆ, ಪ್ರಾದೇಶಿಕ ಹಾಗೂ ಸಾಮಾಜಿಕ ಸಮೀಕರಣ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಂಪುಟಕ್ಕೆ ‘ಮಿನಿ ಸರ್ಜರಿ’ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹಿರಿಯರ ಅಸಮಾಧಾನಕ್ಕೆ ಹೈಕಮಾಂಡ್ ಉತ್ತರವೇನು?
ಸಚಿವ ಸಂಪುಟದಲ್ಲಿ ಪಕ್ಷಾಂತರದ ಮೂಲಕ ಕಾಂಗ್ರೆಸ್ಗೆ ಬಂದವರಿಗೆ ಸಚಿವ ಸ್ಥಾನ ನೀಡಿರುವ ವಿಚಾರವೂ ಪಕ್ಷದೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಲವು ವರ್ಷಗಳಿಂದ ಪಕ್ಷದಲ್ಲಿ ದುಡಿದಿರುವ ಹಿರಿಯ ಶಾಸಕರನ್ನು ಕಡೆಗಣಿಸಿ ವಲಸಿಗರಿಗೆ ಆದ್ಯತೆ ನೀಡಿರುವುದೇಕೆ ಎಂಬ ಪ್ರಶ್ನೆ ಕೆಲ ಹಿರಿಯರಿಂದ ಕೇಳಿಬಂದಿದೆ.
ಇದರ ಜತೆಗೆ, ಪಕ್ಷಕ್ಕಾಗಿ ದೀರ್ಘಕಾಲ ದುಡಿದ ಕೆಲ ಶಾಸಕರು ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವುದು ಹೈಕಮಾಂಡ್ಗೆ ಮತ್ತೊಂದು ಸವಾಲಾಗಿದೆ. ಹೊಸ ಸಂಪುಟ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನ ವಂಚಿತರಾದ ಹಲವು ಶಾಸಕರು ತಮ್ಮ ಅಸಮಾಧಾನವನ್ನು ವಿವಿಧ ರೀತಿಯಲ್ಲಿ ಹೊರಹಾಕಿದ್ದಾರೆ.
ಖಾತೆ ಹಂಚಿಕೆಯೂ ಇಕ್ಕಟ್ಟು
ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬಳಿಕವೂ ಎಲ್ಲವೂ ಸುಸೂತ್ರವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ತಮಗೆ ನೀಡಿರುವ ಖಾತೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ಅಸಮಾಧಾನ ಕೆಲ ಸಚಿವರಲ್ಲಿ ಇದ್ದರೆ, ತಮ್ಮ ಸಾಮರ್ಥ್ಯಕ್ಕೆ ತಕ್ಕ ಖಾತೆ ಸಿಗಲಿಲ್ಲ ಎಂಬ ಭಾವನೆಯೂ ಇದೆ.
ಖಾತೆ ಬದಲಾವಣೆಯ ಬೇಡಿಕೆಗಳು, ಸಚಿವರ ನಡುವಿನ ಅಸಮಾಧಾನ ಹಾಗೂ ಅಧಿಕಾರ ಹಂಚಿಕೆಯ ಕುರಿತ ಗೊಂದಲವನ್ನು ಪರಿಹರಿಸುವುದು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಮತ್ತೊಂದು ಸವಾಲಾಗಿದೆ.
ಕೃಷ್ಣಪ್ಪ, ಎಚ್ಕೆ, ಟಿಬಿ ವಲಯದಲ್ಲಿ ತಕರಾರು?
ಸಂಪುಟದೊಳಗಿನ ಅಸಮಾಧಾನದ ನಡುವೆ ಕೆಲವು ಸಚಿವರು ತಮ್ಮದೇ ಆದ ಕಾರಣಗಳಿಂದ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆಯೂ ನಡೆದಿದೆ. ವಿಶೇಷವಾಗಿ ಸಿದ್ದರಾಮಯ್ಯ, ಎಚ್ಕೆ ಪಾಟೀಲ, ಟಿ.ಬಿ. ಜಯಚಂದ್ರ ಹಾಗೂ ಕೃಷ್ಣಪ್ಪ ಅವರ ವಿಚಾರಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.
ಸಚಿವ ಸ್ಥಾನ ಸಿಕ್ಕರೂ ನಿರೀಕ್ಷಿತ ರಾಜಕೀಯ ಪ್ರಾಮುಖ್ಯತೆ ಅಥವಾ ಖಾತೆ ಸಿಗದಿರುವುದು, ಪಕ್ಷದೊಳಗಿನ ತಮ್ಮ ಸ್ಥಾನಮಾನ ಹಾಗೂ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಕೆಲವರು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಮುನಿಯಪ್ಪ ಅವರನ್ನು ಕೈಬಿಟ್ಟು ಅವರ ಪುತ್ರಿ ರೂಪಕಲಾ ಅವರಿಗೆ ಸ್ಥಾನ ನೀಡುವ ಮೂಲಕ ಮಹಿಳಾ ಕೋಟಾ ಮತ್ತು ಕೋಲಾರ ಕೋಟಾ ಎರಡನ್ನೂ ಪೂರೈಸುವ ಚಿಂತನೆಯೂ ನಡೆದಿದೆ. ಮುಸ್ಲಿಂ ಸಚಿವರೊಬ್ಬರನ್ನು ಕೈಬಿಡುವ, ಒಕ್ಕಲಿಗ ಸಚಿವರೊಬ್ಬರ ರಾಜಿನಾಮೆ ಪಡೆಯುವ ಚರ್ಚೆಯೂ ಇದೆ.
ಪ್ರಾಮಾಣಿಕತೆಗೆ ಬೆಲೆ ಇಲ್ಲವೇ?
ಸಂಪುಟ ಪುನಾರಚನೆಯ ಚರ್ಚೆಯ ಮತ್ತೊಂದು ಪ್ರಮುಖ ಆಯಾಮವೆಂದರೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಶಾಸಕರಿಗೆ ಸೂಕ್ತ ಮನ್ನಣೆ ಸಿಗುತ್ತಿದೆಯೇ ಎಂಬ ಪ್ರಶ್ನೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ದುಡಿದವರು, ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದವರು ಹಾಗೂ ಯಾವುದೇ ವಿವಾದಕ್ಕೆ ಸಿಲುಕದೆ ಆಡಳಿತ ನಡೆಸುತ್ತಿರುವ ಶಾಸಕರನ್ನು ಪರಿಗಣಿಸಬೇಕು ಎಂಬ ಒತ್ತಡ ಕಾಂಗ್ರೆಸ್ ವಲಯದಲ್ಲಿ ಇದೆ. ‘ಪಕ್ಷಕ್ಕಾಗಿ ದುಡಿದವರಿಗೆ ಅವಕಾಶವೇ ಇಲ್ಲವೇ? ಪಕ್ಷ ನಿಷ್ಠೆಗಿಂತ ಬೇರೆ ಮಾನದಂಡಗಳು ಮುಖ್ಯವಾಗುತ್ತಿವೆಯೇ?’ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.
ಸರ್ಜರಿ ಹಿಂದೆ ರಾಜಕೀಯ ಲೆಕ್ಕಾಚಾರ
ಸಂಪುಟ ಬದಲಾವಣೆ ಕೇವಲ ಆಡಳಿತಾತ್ಮಕ ನಿರ್ಧಾರವಾಗಿರುವುದಿಲ್ಲ. ಮುಂದಿನ ಚುನಾವಣೆಗಳು, ಪ್ರಾದೇಶಿಕ ಸಮತೋಲನ, ಜಾತಿ-ಸಾಮಾಜಿಕ ಸಮೀಕರಣ, ಪಕ್ಷ ಸಂಘಟನೆ ಹಾಗೂ ಸರ್ಕಾರದ ವರ್ಚಸ್ಸು ಸೇರಿದಂತೆ ಹಲವು ರಾಜಕೀಯ ಲೆಕ್ಕಾಚಾರಗಳು ಇದರ ಹಿಂದೆ ಇರಲಿವೆ.
ಸಚಿವ ಸ್ಥಾನದಿಂದ ಕೆಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವುದರಿಂದ ಪಕ್ಷದೊಳಗಿನ ಅಸಮಾಧಾನವನ್ನು ತಗ್ಗಿಸಬಹುದೇ ಎಂಬ ಲೆಕ್ಕಾಚಾರವೂ ನಡೆದಿದೆ. ಅದೇ ವೇಳೆ ಈಗಾಗಲೇ ಸಚಿವರಾಗಿರುವವರನ್ನು ಬದಲಾಯಿಸುವುದು ಹೊಸ ಸಮಸ್ಯೆಗಳಿಗೆ ಕಾರಣವಾಗಬಹುದೆಂಬ ಆತಂಕವೂ ವರಿಷ್ಠರಲ್ಲಿದೆ.
ಸುರ್ಜೇವಾಲ ಮಧ್ಯಸ್ಥಿಕೆ?
ರಾಜ್ಯ ಕಾಂಗ್ರೆಸ್ನೊಳಗಿನ ಸಚಿವ ಸಂಪುಟ ಸಂಬಂಧಿತ ಅಸಮಾಧಾನಗಳನ್ನು ಬಗೆಹರಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್
ಸುರ್ಜೇವಾಲ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸಚಿವರ ಅಸಮಾಧಾನ, ಖಾತೆ ಹಂಚಿಕೆಯ ಗೊಂದಲ ಹಾಗೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಶಾಸಕರ ಒತ್ತಡವನ್ನು ಸಮತೋಲನಗೊಳಿಸುವುದು ಹೈಕಮಾಂಡ್ಗೆ ದೊಡ್ಡ ಸವಾಲಾಗಿದೆ.
ಒಟ್ಟಿನಲ್ಲಿ ಡಿಕೆಶಿ ಸಂಪುಟದ ಮಿನಿ ಸರ್ಜರಿ ನಡೆಯುತ್ತದೆಯೇ, ನಡೆದರೆ ಯಾರಿಗೆ ಕೊಕ್, ಯಾರಿಗೆ ಅವಕಾಶ, ಯಾರ ಖಾತೆ ಬದಲಾಗಲಿದೆ ಎಂಬುದೇ ಈಗ ಕಾಂಗ್ರೆಸ್ ಪಾಳಯದಲ್ಲಿ ಕುತೂಹಲ ಮೂಡಿಸಿರುವ ಪ್ರಶ್ನೆ. ಅಂತಿಮ ನಿರ್ಧಾರ ಹೈಕಮಾಂಡ್ನ ಒಪ್ಪಿಗೆಯ ಬಳಿಕವೇ ಹೊರಬೀಳುವ ಸಾಧ್ಯತೆ ಇದೆ.


