Belagavi NewsBelgaum NewsKannada NewsKarnataka NewsPolitics

*ಕಿತ್ತೂರು ಉತ್ಸವ: ಉದ್ಘಾಟಕರು ಬೇಕಾಗಿದ್ದಾರೆ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐತಿಹಾಸಿಕ ಕಿತ್ತೂರು ಉತ್ಸವ-2026 ಅನ್ನು ಈ ಬಾರಿ ಮತ್ತಷ್ಟು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಆರಂಭಗೊಂಡಿದ್ದು, ಉತ್ಸವದ ಯಶಸ್ಸಿಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕಿತ್ತೂರಿನ ವೀರ ರಾಣಿ ಕಿತ್ತೂರು ಚನ್ನಮ್ಮ ಸಭಾಭವನದಲ್ಲಿ ಸೋಮವಾರ ನಡೆದ ಕಿತ್ತೂರು ಉತ್ಸವ-2026ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷದ ಉತ್ಸವದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಈ ಬಾರಿ ವ್ಯವಸ್ಥಿತವಾಗಿ ಉತ್ಸವ ಆಯೋಜಿಸಲಾಗುವುದು. ವಿವಿಧ ಉಪ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಸಾಧಕರಿಂದ ಉತ್ಸವಕ್ಕೆ ಚಾಲನೆ

ಈ ಬಾರಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಗಣ್ಯರಿಂದ ಕಿತ್ತೂರು ಉತ್ಸವ ಉದ್ಘಾಟಿಸಲು ನಿರ್ಧರಿಸಲಾಗಿದೆ. ಸೂಕ್ತ ಸಾಧಕರನ್ನು ಗುರುತಿಸಿ ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ವಿಶೇಷವಾಗಿ ಜಾನುವಾರು ಜಾತ್ರೆ ಆಯೋಜಿಸಲು ನಿರ್ಧರಿಸಲಾಗಿದ್ದು, ಸಂಬಂಧಿಸಿದ ಇಲಾಖೆಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, ವೀರಜ್ಯೋತಿ ಹಾಗೂ ಮೆರವಣಿಗೆಯನ್ನು ನಿಗದಿತ ಸಮಯಕ್ಕೆ ಆರಂಭಿಸಲು ಕ್ರಮ ವಹಿಸುವಂತೆ ಹೇಳಿದರು.

ಕಾಕತಿಗೂ ಆದ್ಯತೆ

ಕಿತ್ತೂರಿನಷ್ಟೇ ಕಾಕತಿಗೂ ಆದ್ಯತೆ ನೀಡಲಾಗುವುದು. ಕಾಕತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಣಿ ಚನ್ನಮ್ಮನಿಗೆ ಗೌರವ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕಿತ್ತೂರಿನ ಇತಿಹಾಸದ ಕುರಿತು ಹೆಚ್ಚಿನ ಅಧ್ಯಯನಕ್ಕೆ ಕ್ರಮ ಕೈಗೊಳ್ಳಲಾಗುವುದು. ₹30 ಕೋಟಿ ಅನುದಾನದಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಮಕ್ಕಳಿಗಾಗಿ ವಿಜ್ಞಾನ ಮೇಳ ಆಯೋಜಿಸಲು ಪ್ರಯತ್ನಿಸಲಾಗುವುದು. ಕಿತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚನ್ನಮ್ಮನ ಬೆಳ್ಳಿ ಮೂರ್ತಿ ಮೆರವಣಿಗೆಗೆ ಸಲಹೆ

ರಾಜಗುರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಪಂಚಾಕ್ಷರಿ ಮಡಿವಾಳ ಸ್ವಾಮೀಜಿ ಹಾಗೂ ದೇಗುಳಹಳ್ಳಿ ಮಡಿವಾಳ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ಅವರು ಉತ್ಸವದಲ್ಲಿ ರೈತರಿಗಾಗಿ ಪ್ರತ್ಯೇಕ ವೇದಿಕೆ ಕಲ್ಪಿಸುವಂತೆ ಸಲಹೆ ನೀಡಿದರು.

ಇದರೊಂದಿಗೆ ದಸರಾ ಅಂಬಾರಿ ಮಾದರಿಯಲ್ಲಿ ರಾಣಿ ಚನ್ನಮ್ಮನ ಬೆಳ್ಳಿ ಮೂರ್ತಿಯ ಮೆರವಣಿಗೆ ನಡೆಸುವಂತೆ ಸಲಹೆ ನೀಡಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸಭೆಯಲ್ಲಿ ಸಾರ್ವಜನಿಕರು ನೀಡಿದ ಸಲಹೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಕಳೆದ ವರ್ಷದ ಲೋಪಗಳನ್ನು ಸರಿಪಡಿಸಿ ಈ ಬಾರಿಯೂ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುವುದು ಎಂದರು.

ಜಾನುವಾರು ಜಾತ್ರೆ ಹಾಗೂ ಫಲಪುಷ್ಪ ಅಲಂಕಾರಕ್ಕೆ ಈ ಬಾರಿ ಹೆಚ್ಚಿನ ಒತ್ತು ನೀಡಲಾಗುವುದು. ವಿಚಾರ ಸಂಕಿರಣಗಳಲ್ಲಿ ಕಿತ್ತೂರು ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

18 ಉಪ ಸಮಿತಿಗಳ ರಚನೆ

ಉತ್ಸವದ ಯಶಸ್ವಿ ಆಯೋಜನೆಗಾಗಿ ಒಟ್ಟು 18 ಉಪ ಸಮಿತಿಗಳನ್ನು ರಚಿಸಲಾಗಿದೆ. ವಿಜಯ ಜ್ಯೋತಿ, ಶಿಷ್ಟಾಚಾರ, ಸ್ವಾಗತ, ವಸತಿ, ಊಟೋಪಚಾರ, ವೇದಿಕೆ, ಮೆರವಣಿಗೆ, ಸಾಂಸ್ಕೃತಿಕ, ಕ್ರೀಡೆ, ವಸ್ತು ಪ್ರದರ್ಶನ, ಸಾರಿಗೆ, ಕಾಕತಿ ಉತ್ಸವ, ವಿಚಾರ ಸಂಕಿರಣ, ಪ್ರಚಾರ, ದೀಪಾಲಂಕಾರ, ಕಾನೂನು ಸುವ್ಯವಸ್ಥೆ, ಮಹಿಳಾ ಉತ್ಸವ ಹಾಗೂ ಜಾನುವಾರು ಜಾತ್ರೆ ಸಮಿತಿಗಳನ್ನು ರಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರವೀಣ ಜೈನ್ ತಿಳಿಸಿದರು.

ಸಾರ್ವಜನಿಕರಿಂದ ಹಲವು ಸಲಹೆಗಳು

ಉತ್ಸವದ ಸಿದ್ಧತೆಯಲ್ಲಿ ಸ್ಥಳೀಯರಿಗೆ ಆದ್ಯತೆ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ, ಹೆಚ್ಚಿನ ಬಸ್ ವ್ಯವಸ್ಥೆ, ರಸ್ತೆ ಅಗಲೀಕರಣ, ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಅನುದಾನದ ಸಮರ್ಪಕ ಬಳಕೆಗೆ ಸಾರ್ವಜನಿಕರು ಒತ್ತಾಯಿಸಿದರು.

ವಿಚಾರ ಸಂಕಿರಣದ ಉಪನ್ಯಾಸಕರಿಗೆ ಗೌರವಧನ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಿಸಿ ಪ್ರಚಾರ ಮಾಡಬೇಕು. ಕೇಂದ್ರ ಸರ್ಕಾರದಿಂದಲೂ ಉತ್ಸವಕ್ಕೆ ಅನುದಾನ ಪಡೆಯಲು ಕ್ರಮ ಕೈಗೊಳ್ಳಬೇಕು ಎಂಬ ಸಲಹೆಗಳು ಸಭೆಯಲ್ಲಿ ಕೇಳಿಬಂದವು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಹಾನಗಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button