
ಪೊಲೀಸರ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಾಡಿಗೆಗೆ ಗೆಳೆಯ ಬೇಕೆ? ಡೇಟಿಂಗ್ ಆಪ್ ಗಳ ಹೆಸರಲಿ ವಂಚನೆ, ಮೋಸದ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಹೈಅದ್ರಾಬಾದ್ ಸೈಬರ್ ಪೊಲಿಸರು ಮಹಿಳೆಯರಿಗೆ ಎಚ್ಚರಿಕೆ ನೀದಿದ್ದಾರೆ.
ಯುವತಿಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು “ಬಾಯ್‌ಫ್ರೆಂಡ್ ಫಾರ್ ರೆಂಟ್” (Boyfriends for Rent) ಹೆಸರಿನಲ್ಲಿ ಆಕರ್ಷಕ ಜಾಹೀರಾತುಗಳನ್ನು ನೀಡಿ ಹಣ ಹಾಗೂ ವೈಯಕ್ತಿಕ ಮಾಹಿತಿ ದೋಚುತ್ತಿರುವ ಹೊಸ ಸೈಬರ್ ವಂಚನೆ ಜಾಲದ ಕುರಿತು ಹೈದರಾಬಾದ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹೈದರಾಬಾದ್ ನಗರ ಪೊಲೀಸ್ ಆಯುಕ್ತವಿ.ಸಿ. ಸಜ್ಜನರ್ ಅವರು ಎಕ್ಸ್ (ಟ್ವಿಟರ್)ನಲ್ಲಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದು, ಆಕರ್ಷಕ ರಿಯಾಯಿತಿಗಳು ಹಾಗೂ ಸಂಗಾತಿ ಸೇವೆ ಒದಗಿಸುವುದಾಗಿ ನಂಬಿಸಿ ಸೈಬರ್ ವಂಚಕರು ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಟೆಲಿಗ್ರಾಂಗಳಲ್ಲಿ “Rent Boyfriend Your Personal Companion” ಎಂಬಂತಹ ಶೀರ್ಷಿಕೆಗಳೊಂದಿಗೆ ಜಾಹೀರಾತುಗಳನ್ನು ಪೋಸ್ಟ್ ಮಾಡಲಾಗುತ್ತದೆ. AI (ಕೃತಕ ಬುದ್ಧಿಮತ್ತೆ) ಮೂಲಕ ರಚಿಸಿದ ಅಥವಾ ಇತರರ ಪ್ರೊಫೈಲ್‌ಗಳಿಂದ ಕದ್ದ ಸುಂದರ ಯುವಕರ ಫೋಟೋಗಳನ್ನು ಬಳಸಲಾಗುತ್ತದೆ. ಕಾಫಿ ಡೇಟ್‌ಗಳು, ಸಿನೆಮಾಗೆ ಹೋಗುವುದು ಹಾಗೂ ಶಾಪಿಂಗ್‌ಗೆ ಸಾಥ್ ನೀಡುವುದು ಮುಂತಾದ ಸೇವೆಗಳನ್ನು ನೀಡುವುದಾಗಿ ಆಸೆ ತೋರಿಸಲಾಗುತ್ತದೆ.
ಬುಕ್ ಮಾಡಲು ಯುವತಿಯರು ಸಂಪರ್ಕಿಸಿದಾಗ, ಮಾತುಕತೆಯ ಮೂಲಕ ಅವರ ನಂಬಿಕೆ ಗಳಿಸಿ, ನೋಂದಣಿ ಶುಲ್ಕ, ಭದ್ರತಾ ಠೇವಣಿ ಅಥವಾ ಬುಕಿಂಗ್ ಶುಲ್ಕದ ಹೆಸರಿನಲ್ಲಿ QR ಕೋಡ್ ಹಾಗೂ UPI ಆಪ್‌ಗಳ ಮೂಲಕ ಮುಂಗಡ ಹಣ ವರ್ಗಾಯಿಸಿಕೊಳ್ಳಲಾಗುತ್ತದೆ. ಒಮ್ಮೆ ಹಣ ಖಾತೆಗೆ ಜಮೆಯಾದ ತಕ್ಷಣ ಸೈಬರ್ ಖದೀಮರು ಯುವತಿಯರ ನಂಬರ್‌ಗಳನ್ನು ಬ್ಲಾಕ್ ಮಾಡಿ ಸಂಪರ್ಕ ಕಡಿತಗೊಳಿಸುತ್ತಾರೆ. ಅಪರಿಚಿತ ಹಾಗೂ ಪರಿಶೀಲಿಸದ ಆನ್‌ಲೈನ್ ಖಾತೆಗಳೊಂದಿಗೆ ಫೋನ್ ಸಂಖ್ಯೆ, ಫೋಟೋ ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದರಿಂದ ಬ್ಲ್ಯಾಕ್‌ಮೇಲ್, ಕಿರುಕುಳ ಹಾಗೂ ನೇರವಾಗಿ ಭೇಟಿಯಾದಾಗ ದೈಹಿಕ ಅಪಾಯಕ್ಕೂ ಈಡಾಗುವ ಸಾಧ್ಯತೆಯಿರುತ್ತದೆ.
ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ವೀಕ್ಷಿಸುತ್ತಿದ್ದಾರೆ, ಯಾರೊಂದಿಗೆ ಮಾತನಾಡುತ್ತಿದ್ದಾರೆ ಹಾಗೂ ಯಾರನ್ನು ಭೇಟಿಯಾಗುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಬೇಕು. ಮಕ್ಕಳ ಸ್ಮಾರ್ಟ್‌ಫೋನ್ ಬಳಕೆಯನ್ನು ಗಮನಿಸುವುದರಿಂದ ಅವರನ್ನು ಇಂತಹ ವಂಚನೆಗಳಿಂದ ರಕ್ಷಿಸಬಹುದು. ಆನ್‌ಲೈನ್‌ನಲ್ಲಿ ಅಪರಿಚಿತ ಪ್ರೊಫೈಲ್‌ಗಳ ಜೊತೆ ಸಂವಹನ ನಡೆಸಬೇಡಿ ಹಾಗೂ ಇಂತಹ ಯಾವುದೇ ಸೇವೆಗಳಿಗೆ ಯಾವುದೇ ಕಾರಣಕ್ಕೂ ಮುಂಗಡ ಹಣ ಪಾವತಿಸಬೇಡಿ.
ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಅಥವಾ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು ಅಥವಾ ಅಧಿಕೃತ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಿದ್ದಾರೆ.

