Karnataka NewsLatestPolitics

*ಬೈರಮಂಗಲ, ಕಂಚುಗಾರನಹಳ್ಳಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ: ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬಿಡದಿ ರೈತರ ಮನವಿ*

ಪ್ರಗತಿವಾಹಿನಿ ಸುದ್ದಿ: “ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು. ಬಿಡದಿ ಟೌನ್ ಶಿಪ್ ಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೇವೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು” ಎಂದು ಬಿಡದಿಯ ಸುತ್ತಮುತ್ತಲ ರೈತರ ನಿಯೋಗ ಇಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ರೆಡ್ ಜೋನ್ ನಿಂದ ತಮಗಾಗಿರುವ ಕಷ್ಟ ವಿವರಿಸಿದರು. ತಕ್ಷಣವೇ ಅದನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು.

Home add -Advt

ಯಾರದೋ ರಾಜಕೀಯ ಆಟಕ್ಕೆ ನಾವು ಬಲಿ ಆಗುತ್ತಿದ್ದೇವೆ. ನಾವು ಜಮೀನು ಕೊಡಲು ಸಿದ್ಧ. ತಕ್ಷಣವೇ ಪರಿಹಾರ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಲಿಲ್ಲ. ನೀವಾದರೂ ನಮ್ಮ ಕಷ್ಟ ಬಗೆಹರಿಸಿ ಎಂದು ಮನವಿ ಮಾಡಿದರು.

ಬೈರಮಂಗಲ ಗ್ರಾಮದ ಸುನೀಲ್ ಎಂಬುವವರು ಮಾತನಾಡಿ, “ಕಳೆದ 20 ವರ್ಷಗಳಿಂದ ನಾವು ರೆಡ್ ಜೋನ್ ನಿಂದ ಸಂಕಷ್ಟ ಅನುಭವಿಸಿದ್ದೇವೆ. ಅಲ್ಲಿ ವೃಷಭಾವತಿ ಕೊಳಚೆ ನೀರಿನಿಂದ ವ್ಯವಸಾಯ ಕಷ್ಟವಾಗಿದೆ. ಅಲ್ಲಿ ಕೆಲವು ಭಾಗದಲ್ಲಿ ತೆಂಗಿನ ತೋಟ ಮೇಲುನೋಟಕ್ಕೆ ಹಸಿರಾಗಿ ಕಾಣಬಹುದು ಆದರೆ, ಇಳುವರಿ ಬರುತ್ತಿಲ್ಲ. ಕುಡಿಯುವ ಹಾಲು ಕೂಡ ಕಲುಷಿತಗೊಂಡಿದೆ. ರೆಡ್ ಜೋನ್ ಮಾಡಿರುವುದರಿಂದ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಆಸ್ಪತ್ರೆ, ಕಲ್ಯಾಣಮಂಟಪ ನಿರ್ಮಾಣ ಸಾಧ್ಯವಿಲ್ಲ. ನಮ್ಮ ಪಕ್ಕದ ಊರುಗಳಲ್ಲಿ ಬ್ಯಾಂಕ್ ನಲ್ಲಿ ಜಮೀನಿಗೆ 1 ಕೋಟಿವರೆಗೆ ಸಾಲವ ಕೊಟ್ಟರೆ ನಮಗೆ 1ಲಕ್ಷರೂಪಾಯಿ ಕೂಡ ಸಾಲ ಸಿಗುತ್ತಿಲ್ಲ. ನಮಗೆ ಮದುವೆ ಹಾಗೂ ಕಷ್ಟಕಾಲದಲ್ಲಿ ನಮ್ಮ ಜಮೀನು ಮಾರಲು ಆಗುತ್ತಿಲ್ಲ. ಇವೆಲ್ಲವೂ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರ ಕೊಡುಗೆ. ಹೀಗಾಗಿ ನಮಗೆ ಈ ಸಮಸ್ಯೆಗಳಿಂದ ಮುಕ್ತಿ ದೊರಕಿಸಬೇಕು” ಎಂದು ಮನವಿ ಮಾಡಿದರು.

“ನಮ್ಮಲ್ಲಿ ಕೊಳಚೆ ನೀರಿನ ವಾಸನೆ, ಸೊಳ್ಳೆಗಳ ಕಾಟದಿಂದ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ. ನಮಗೆ ಹಣ ಬೇಡ, ನಾವು ಈ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಪಡೆದು, ಯೋಜನೆಯ ಪಾಲುದಾರರಾಗುತ್ತೇವೆ” ಎಂದು ತಿಳಿಸಿದರು.

“ನಾವು ಜೆಡಿಎಸ್ ಕಾರ್ಯಕರ್ತರೆ, ಅಭಿವೃದ್ಧಿ ಮೊದಲು, ಪಕ್ಷ ಆಮೇಲೆ. ನಮಗೆ ಟೌನ್ ಶಿಪ್ ಯೋಜನೆ ಬೇಕು. ಅಲ್ಲಿ ಹೋರಾಟ ಮಾಡುತ್ತಿರುವವರು ಬೇರೆ ಕ್ಷೇತ್ರಗಳಿಂದ ಕರೆ ತಂದಿರುವ ಪಕ್ಷದ ಕಾರ್ಯಕರ್ತರು. ನಮ್ಮಲ್ಲಿ ಬಹುತೇಕ ಜನರು ಟೌನ್ ಶಿಪ್ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ” ಎಂದು ವಿವರಿಸಿದರು.

ಯಾಲಕ್ಕಿ ಗೌಡ ಎಂಬ ಹಿರಿಯ ನಾಗರಿಕರು ಮಾತನಾಡಿ, “ನನಗೆ 80 ವರ್ಷ, ಕಳೆದ 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದೆ. ಕಳೆದ 20 ವರ್ಷಗಳಿಂದ ನಮ್ಮ ಭಾಗವನ್ನು ರೆಡ್ ಜೋನ್ ನಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದೆವು. ಆದರೆ ಕುಮಾರಸ್ವಾಮಿ ಅವರು ಮನಸ್ಸು ಮಾಡಲಿಲ್ಲ. ಅವರ ಉದ್ದೇಶ ನಮಗೆ ತಿಳಿಯುತ್ತಿಲ್ಲ. ನಮ್ಮಲ್ಲಿ ಕೇವಲ 1 ಲಕ್ಷಕ್ಕೆ ಜಮೀನು ಕಳೆದುಕೊಂಡವರನ್ನು ನೋಡಿದ್ದೇನೆ. ಎಲ್ಲರ ಬದುಕು ಅದ್ವಾನ ಆಗೋಗಿದೆ. ಈಗ ಈ ಪುಣ್ಯಾತ್ಮ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಎಲ್ಲವನ್ನೂ ಸರಿ ಮಾಡಲು ಮುಂದಾಗಿದೆ. ಈಗ ಇವರು ಇಲ್ಲದ ಕಾರಣ ಹುಡುಕಿ, ಕೆದಕಿ ತಕರಾರು ಮಾಡುತ್ತಿದ್ದಾರೆ. ಅವರು ಗೌಡರೇ, ಇವರೂ ಗೌಡರೇ, ನಾವು ಗೌಡರೇ ಆದರೆ ಕುಮಾರಣ್ಣನಿಗೆ ಎಲ್ಲರೂ ಚೆನ್ನಾಗಿರಬೇಕು ಎಂಬ ಆಸೆ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಈ ವಿಚಾರದಲ್ಲಿ ಚರ್ಚೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ವಿಧಾನಸೌಧಕ್ಕೆ ಕರೆದರು. ಅಲ್ಲಿ ಚರ್ಚೆಗೆ ಹೋಗದೇ ಕುಮಾರಸ್ವಾಮಿ ಅವರು ಸಿಎಂ ಶಿವಕುಮಾರ್ ಅವರನ್ನು ಬೈರಮಂಗಲಕ್ಕೆ ಕರೆದರು. ಅಲ್ಲಿ ಪರ ಇರೋರು ವಿರೋಧ ಇರೋರು, ಹೊಡೆದಾಡಿಕೊಂಡರೆ ಗೋಲಿಬಾರ್ ಮಾಡುವ ಪಿತೂರಿ ಇದರ ಹಿಂದೆ ಇತ್ತು. ಇದನ್ನು ಅರಿತು ನಾವು ಸಿಎಂ ಅವರಿಗೆ ದಯಮಾಡಿ ನೀವು ಚರ್ಚೆಗೆ ಬರಬೇಡಿ ಎಂದು ಮನವಿ ಮಾಡಿಕೊಂಡೆವು” ಎಂದು ತಿಳಿಸಿದರು.

ಯುವ ರೈತ ಹರೀಶ್ ರೆಡ್ಡಿ ಅವರು” ರೈತರ ಹಿತ ಕಾಪಾಡುವ ದೊಡ್ಡ ಮನಸ್ಸು ಕುಮಾರಸ್ವಾಮಿ ಅವರಿಗಿದ್ದಿದ್ದರೆ ರೆಡ್ ಜೋನ್ ಮಾಡುತ್ತಿರಲಿಲ್ಲ. ರೆಡ್ ಜೋನ್ ಅನ್ನು ತೆಗೆದು ಬಿಡಿ ಎಂದು ನಾವೆಲ್ಲಾ ಅವರ ಮನೆಗೆ ಹೋಗಿ ಎಲ್ಲ ರೀತಿಯಲ್ಲೂ ಮನವಿಮಾಡಿದರೂ ನಮ್ಮ ಮಾತಿಗೆ ಕಿಮ್ಮತ್ತು ನೀಡಲಿಲ್ಲ. ಬಿಡಿದಿ ಟೌನ್ ಶಿಪ್ ನನ್ನ ಕನಸಿನ ಕೂಸು ಅಂತ ಅವರೇ ಹೇಳಿಕೊಂಡಿದ್ದಾರೆ. ಈಗ ನಮ್ಮ ಪಾಲಿಗೆ ಪಾಪದ ಕೂಸಾಗಿದೆ. ಬೆಂಗಳೂರು ಸುತ್ತಮುತ್ತಲಿನ ಇತರೆ ಎಲ್ಲಾ ಪ್ರದೇಶಗಳನ್ನು ಗಮನಿಸಿ. ಎಲ್ಲವೂ ಶರವೇಗದಲ್ಲಿ ಅಭಿವೃದ್ಧಿಗೊಂಡಿವೆ, ಗೊಳ್ಳುತ್ತಿವೆ. ಆದರೆ, ಬಿಡಿದ ಮಾತ್ರ ಹಿಂದೆ ಬಿದ್ದಿದೆ. ಇವತ್ತು ಆ ಕುಮಾರಸ್ವಾಮಿ ಅವರ ಪಾಪದ ಕೂಸಿಗೆ ಲಾಲಿ ಹಾಡಬೇಕಾದ ಅನಿವಾರ್ಯ ನಮಗೆಲ್ಲ ಬಂದಿರುವುದು ದುರಾದೃಷ್ಟ ಮತ್ತು ದುರಂತ ” ಎಂದು ತಮ್ಮ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಅಧಿಸೂಚನೆ ಪ್ರಕಟ

“ಬಿಡದಿಯ ನೂರಾರು ರೈತರು ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಅಂತಿಮ ಅಧಿಸೂಚನೆ ನೀಡಿ, ನಮಗೆ ಸಮಸ್ಯೆಗಳಿದ್ದು, ಜಮೀನು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು. ನಾವು ಸ್ವಲ್ಪ ಹಣ ಪರಿಹಾರ ಹಾಗೂ ಸ್ವಲ್ಪ ಭೂ ಪರಿಹಾರವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ. ನಾನು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಬಾಕಿ ಇರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ. ಯಾರು ಸ್ವಇಚ್ಛೆಯಿಂದ ಜಮೀನು ನೀಡುತ್ತಾರೋ ಅವರಿಂದ ಪಡೆಯುತ್ತೇವೆ ಯಾರಿಗೂ ಬಲವಂತ ಮಾಡುವುದಿಲ್ಲ” ಎಂದು ಹೇಳಿದರು.

ಪಾದಯಾತ್ರೆ ರೈತರ ವಿರೋಧದ ಬಗ್ಗೆ ಕೇಳಿದಾಗ, “ನಾನು ನೋಡಿದೆ. ಅಲ್ಲಿ ಕೆಲವು ರೈತರು ಮಾತ್ರ ಇದ್ದರು. ಉಳಿದವರು ಮಂಡ್ಯ, ಮೈಸೂರು, ತುಮಕೂರು ಭಾಗದ ಕ್ಷೇತ್ರಗಳಿಂದ ಜನರನ್ನು ಕರೆ ತಂದಿದ್ದರು. ರಾಜಕೀಯಕ್ಕಾಗಿ ಹೋರಾಟ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ? ಅವರು ಇವತ್ತು ಪಾದಯಾತ್ರೆ ಮಾಡಿದ್ದರೂ ನಾವು ಬೇಡ ಎನ್ನುತ್ತಿರಲಿಲ್ಲ. ದಿನಾ ಪಾದಯಾತ್ರೆ ಮಾಡಲಿ. ಅವರು ಎಷ್ಟಾದರೂ ನಡೆಯಲಿ ಅವರನ್ನು ತಡೆಯಬೇಡಿ ಎಂದು ಪೊಲೀಸರಿಗೆ ಹೇಳಿದ್ದೇನೆ” ಎಂದು ಹೇಳಿದರು.

ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹೇಳಿರುವುದು ಸತ್ಯ. ಈಗಲೂ ರೈತರು ನಾವು ಭೂಮಿ ಕೊಡುತ್ತೇವೆ ನಮಗೆ ಪರಿಹಾರ ಬೇಕು ಎಂದು ಕೇಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಒಂದು ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡಾಗ ರೈತರು 80-90 ಲಕ್ಷ ಪರಿಹಾರ ತೆಗೆದುಕೊಂಡರು. ಆಗ ಕುಮಾರಸ್ವಾಮಿ ಅವರು ಯಾಕೆ ಹೋರಾಟ ಮಾಡಲಿಲ್ಲ? ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಿ” ಎಂದು ಪ್ರಶ್ನಿಸಿದರು.

Related Articles

Back to top button