*ಕೊಲೆ ಪ್ರಕರಣದ ತನಿಖೆ ವೇಳೆ ಕೋಳಿ ಬಲಿಗೆ ಯತ್ನ: ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಹತ್ಯೆ ಮಾಡಿ, ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತನಿಖೆಗಾಗಿ ಶವ ಹೊರತೆಗೆಯುವ ಕಾರ್ಯಾಚರಣೆ ವೇಳೆ, ಸ್ಥಳದಲ್ಲಿದ್ದವರು ಕಾನೂನುಬದ್ಧ ಕ್ರಮಗಳನ್ನು ಬದಿಗೊತ್ತಿ ಕೋಳಿ ಬಲಿ ನೀಡಲು ಮುಂದಾದ ನಡವಳಿ ವಿವಾದಾಕ್ಕೆ ಕಾರಣವಾಗಿದೆ.
ಈ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಘು ಗಾವಡೆ (40) ಎಂಬವರನ್ನು ಕೊಲೆ ಮಾಡಿ, ಅವರದೇ ಜಮೀನಿನಲ್ಲಿ ಶವವನ್ನು ಹೂತು ಹಾಕಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿದ್ದ ಪೊಲೀಸರು, ಘಟನಾ ಸ್ಥಳದಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಹಾಗೂ ವೈಜ್ಞಾನಿಕ ಸಾಕ್ಷ್ಯ ಸಂಗ್ರಹಕ್ಕೆ ಸಿದ್ಧತೆ ನಡೆಸಿದ್ದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಮತ್ತು ಪೋಲಿಸ್ ಸಿಬ್ಬಂದಿ ಕಾರ್ಯಾಚರಣೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ತನಿಖಾ ಪ್ರಕ್ರಿಯೆಯ ಭಾಗವಾಗಿ ಶವ ಹೊರತೆಗೆಯುವುದಕ್ಕೆ ಕೆಲವೇ ಕ್ಷಣಗಳ ಮುನ್ನ ಸ್ಥಳದಲ್ಲಿದ್ದವರು ಶಾಸ್ತ್ರ-ಸಂಪ್ರದಾಯ ಎಂಬ ನೆಪದಲ್ಲಿ ಕೋಳಿ ಬಲಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಪ್ರಕ್ರಿಯೆಯನ್ನು ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಗಮನಿಸಿದ್ದು, ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ. ಮಾಧ್ಯಮದವರು ವರದಿ ಮಾಡುತ್ತಿರುವುದನ್ನು ಕಂಡು ತಕ್ಷಣ ಎಚ್ಚೆತ್ತುಕೊಂಡ ಸಂಬಂಧಪಟ್ಟವರು, ಬಲಿಕೊಡಲು ತಂದಿದ್ದ ಕೋಳಿಯನ್ನು ಸ್ಥಳದಿಂದ ವಾಪಸ್ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ತನಿಖಾ ಪ್ರಕ್ರಿಯೆಗಳಲ್ಲಿ ಸಂಪೂರ್ಣವಾಗಿ ವೈಜ್ಞಾನಿಕ ಹಾಗೂ ಕಾನೂನುಬದ್ಧ ಮಾರ್ಗಸೂಚಿಗಳನ್ನು ಅನುಸರಿಸಬೇಕಾದದ್ದು ಆಡಳಿತ ಯಂತ್ರದ ಕರ್ತವ್ಯ ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲೇ ಮೂಢನಂಬಿಕೆಯ ಆಚರಣೆಗೆ ಮುಂದಾಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಆಧುನಿಕ ತಂತ್ರಜ್ಞಾನ ಮತ್ತು ಕಾನೂನು ಜಾರಿಯಲ್ಲಿರುವ ಈ ಯುಗದಲ್ಲೂ ಅಧಿಕಾರಿಗಳ ಕಾರ್ಯಾಚರಣೆಯ ಸುತ್ತ ಇಂತಹ ಆಚರಣೆಗಳಿಗೆ ಜಾಗ ಸಿಗುತ್ತಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.




