Kannada NewsKarnataka NewsPolitics

*ಪಿಎಸ್ಐಗೆ ಕಪಾಳಮೋಕ್ಷ ಪ್ರಕರಣ: ಪುತ್ರಿ ಪರ ಕ್ಷಮೆ ಕೇಳಿದ ಶಾಸಕ*

ಪ್ರಗತಿವಾಹಿನಿ ಸುದ್ದಿ: ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ  ಮೇಲೆ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಕಪಾಳಮೋಕ್ಷ ಮಾಡಿದಕ್ಕೆ ಸ್ವತಃ ಶಾಸಕರೆ ಕ್ಷಮೆ ಕೇಳಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ತಮ್ಮ ಪುತ್ರಿ ಐಶ್ವರ್ಯ “ಭೀಮನ ಅಮಾವಾಸ್ಯೆಯ ದಿನದಂದು ನನ್ನ ಮಗಳು ಇಬ್ಬರು ಸಣ್ಣ ಮಕ್ಕಳೊಂದಿಗೆ ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದಳು. ಆ ವೇಳೆ ವಿಐಪಿ ಸಾಲಿನಲ್ಲಿ ನಿಂತಿದ್ದಾಗ ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಸ್ಪೆಕ್ಟರ್ ಆಕೆಯನ್ನು ಬಿಡದೆ ಬೇರೆಯವರನ್ನು ಒಳಗೆ ಬಿಟ್ಟಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಸಹಜವಾಗಿ ಇರುತ್ತದೆ. ಮಾತಿಗೆ ಮಾತು ಬೆಳೆದು ಈ ಅಹಿತಕರ ಘಟನೆ ನಡೆದಿದೆ. ಸ್ಥಳದಲ್ಲಿ ವಾಸ್ತವವಾಗಿ ಏನು ನಡೆದಿದೆ ಎಂಬುದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ.

Home add -Advt

ಅವರು, “ಘಟನೆಯಲ್ಲಿ ನನ್ನ ಮಗಳ ಕಡೆಯ ದೂರು ಏನಿತ್ತು ಎಂಬುದನ್ನೂ ಪೊಲೀಸರು ಆಲಿಸಬೇಕಿತ್ತು. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ವೇಳೆ ನನ್ನ ಮಗಳದ್ದೇ ತಪ್ಪಿದ್ದರೆ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳಲು ಸಿದ್ಧ. ಆ ಕ್ಷಣದಲ್ಲಿ ಆಕೆ ತಾಳ್ಮೆ ಕಳೆದುಕೊಂಡಿರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ ಇರುವ ನಾವು ಈ ರೀತಿ ವರ್ತಿಸಬಾರದು. ಹೀಗಾಗಿ ಮಗಳ ನಡವಳಿಕೆಗಾಗಿ ನಾನೇ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ” ಎಂದು ತಿಳಿಸಿದ್ದಾರೆ.

ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆ ಆರತಿ ಉಕ್ಕಡ ದೇಗುಲದಲ್ಲಿ ಭಕ್ತರ ದಟ್ಟಣೆ ಹೆಚ್ಚಿದ್ದ ವೇಳೆ ಐಶ್ವರ್ಯ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದರು. ಜನದಟ್ಟಣೆ ಕಾರಣ ಸ್ವಲ್ಪ ಹೊತ್ತು ಕಾಯುವಂತೆ ಪಿಎಸ್‌ಐ ಸವಿತಾ ಸೂಚಿಸಿದಾಗ, ಮಪ್ತಿಯಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟ‌ರ್ ಒಳಗೆ ಹೋಗಿದ್ದನ್ನು ಪ್ರಶ್ನಿಸಿ ವಾಗ್ವಾದ ನಡೆಸಿದ್ದರು. ಮಾತಿಗೆ ಮಾತು ಬೆಳೆದು ಐಶ್ವರ್ಯ ಅವರು ಪಿಎಸ್‌ಐ ಸವಿತಾ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

Related Articles

Back to top button