Karnataka NewsLatestPolitics

*ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಪತ್ತೆಯಾದ ಮೊಬೈಲ್ ನಲ್ಲಿ ಹಲವು ಅಂಶಗಳು ಪತ್ತೆ: ತಂದೆ-ತಾಯಿ ನಂಬರ್ ನ್ನು ಶಿವ-ಪಾರ್ವತಿ ಎಂದು ಸೇವ್*

ಪ್ರಗತಿವಾಹಿನಿ ಸುದ್ದಿ: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರೆಕ್ ನಲ್ಲಿ ಮೊಬೈಲ್ ಹಾಗೂ ಪೆನ್ ಡ್ರೈವ್ ಪತ್ತೆಯಾಗಿತ್ತು. ಸಿಸಿಬಿ ಪೊಲೀಸರು ನಡೆಸಿದ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ಮೊಬೈಲ್, ಪೆನ್ ಡ್ರೈವ್, ನೋಟ್ ಬುಕ್ ಗಳು ಪತ್ತೆಯಾಗಿವೆ. ಪ್ರಜ್ವಲ್ ಬಳಿ ಇದ್ದ ಮೊಬೈಲ್‌ನಲ್ಲಿ ಹಲವು ಅಂಶಗಳು ಪತ್ತೆಯಾಗಿವೆ.

ಪತ್ತೆಯಾದ ಮೊಬೈಲ್‌ನಲ್ಲಿ ತಂದೆ-ತಾಯಿ ಹೆಸರು ಯಾರಿಗೂ ಗೊತ್ತಾಗದಿರಲಿ ಎಂಬ ಕಾರಣಕ್ಕೆ ಶಿವ-ಪಾರ್ವತಿ ಹೆಸರಲ್ಲಿ ಸೇವ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತಂದೆ ರೇವಣ್ಣ ನಂಬರ್‌ನ್ನು ಶಿವ ಹಾಗೂ ತಾಯಿ ಭವಾನಿ ರೇವಣ್ಣ ಅವರ ಹೆಸರನ್ನು ಪಾರ್ವತಿ ಎಂದು ಸೇವ್ ಮಾಡಿರುವುದು ಕಂಡುಬಂದಿದೆ. ಅಲ್ಲದೇ ನೋಟ್‌ಬುಕ್‌ನಲ್ಲಿ 40 ಮೊಬೈಲ್ ನಂಬರ್‌ಗಳು ಹಾಗೂ ಹಲವು ಅಪ್ತರು, ಅಪರಿಚಿತರ ಪೋನ್ ನಂಬರ್‌ಗಳು ಕೂಡ ಬರೆದಿರುವುದು ಪತ್ತೆಯಾಗಿವೆ.

ಸಿಸಿಬಿ ದಾಳಿ ವೇಳೆ ಹಾಸಿಗೆ ಕೆಳಗೆ ಮೊಬೈಲ್ ಫೋನ್ ಪತ್ತೆಯಾದಾಗ ಪ್ರಜ್ವಲ್ ಮೊದಲಿಗೆ ತಮ್ಮದೇ ಮೊಬೈಲ್ ಎಂದು ಹೇಳಿಕೊಂಡಿದ್ದರು. ಬಳಿಕ ಪಾಸ್‌ವರ್ಡ್ ಓಪನ್ ಮಾಡುವಂತೆ ಸೂಚಿಸಿದಾಗ ಮೊಬೈಲ್ ನಂದಲ್ಲ. ಆಗಾಗ ಮನೆಯವರ ಬಳಿ ಮಾತಾಡಲು ಪೋನ್ ಬಳಕೆ ಮಾಡುತ್ತಿದ್ದೆ ಎಂದಿದ್ದರು.

ಈವರೆಗೂ ಮೊಬೈಲ್ ತಂದು ಕೊಟ್ಟಿದ್ದು ಯಾರು ಅನ್ನೋದನ್ನು ಪ್ರಜ್ವಲ್ ರೇವಣ್ಣ ಬಾಯ್ಬಿಟ್ಟಿಲ್ಲ. ಸದ್ಯ ಮೊಬೈಲ್, ಪೆನ್‌ಡ್ರೈವ್ ಅನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಈ ನಡುವೆ ಪ್ರಜ್ವಲ್ ಬಳಿ ಪತ್ತೆಯಾದ ಮೊಬೈಲ್ ಸಿಮ್ ಆಂಧ್ರ ಸಿಮ್ ಆಗಿದ್ದು ಏರ್ ಟೆಲ್ ಸಿಮ್ ಎಂಬುದು ತಿಳಿದುಬಂದಿದೆ.

ಜೈಲಿನೊಳಗೆ ನಿಷೇಧಿತ ವಸ್ತುಗಳು ಸರಬರಾಜಾಗಲು ಸಹಕರಿಸಿದ ಜೈಲಿನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ. ಜೈಲು ಸಿಬ್ಬಂದಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಯಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳ ಕುರಿತು ತನಿಖೆ ತೀವ್ರಗೊಂಡಿದೆ. ಇನ್ನೊಂಡೆಡೆ ಪ್ರಜ್ವಲ್ ಬಳಿ ಮೊಬೈಲ್, ಪೆನ್ ಡ್ರೈವ್ ಪತ್ತೆಯಾಗುತ್ತಿದ್ದಂತೆ ಆತನನ್ನು ವಿವಿಐಪಿ ಸೆಲ್ ನಿಂದ ಜನರಲ್ ಸೆಲ್ ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button