
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ವರಮಹಾಲಕ್ಷ್ಮಿ ಹಬ್ಬಕ್ಕೆ ಖುಷಿ ಸುದ್ದಿ ನೀಡಿದ್ದು, ಬಾಕಿ ಇರುವ ವೇತನದ ಪೈಕಿ 170 ಕೋಟಿ ರೂಪಾಯಿಗಳನ್ನು ಶುಕ್ರವಾರವೇ ಬಿಡುಗಡೆ ಮಾಡಿರುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ 15ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಸಾರಿಗೆ ಸಚಿವರು ಚರ್ಚಿಸಿದರು.
ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೈರತಿ ಸುರೇಶ್ರವರು, ರಾಜ್ಯ ಸರ್ಕಾರ 2025 ರಲ್ಲಿ ವೇತನ ಪರಿಷ್ಕರಣೆ ಮಾಡಿದ್ದರಿಂದ 1221 ಕೋಟಿ ರೂಪಾಯಿಗಳನ್ನು ನೌಕರರಿಗೆ ಪಾವತಿಸ ಬೇಕಿದ್ದು, ಅದರಲ್ಲಿ 450 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಇನ್ನೂ 821 ಕೋಟಿ ರೂಪಾಯಿಗಳು ಬಾಕಿ ಇದ್ದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ತಕ್ಷಣವೇ 170 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ತಕ್ಷಣವೇ ಈ ಹಣವನ್ನು ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡಿದರು.
ಎಲ್ಲ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದೆ. ಈ ಹಿಂದೆ ಮಾಡಿದ್ದ ವೇತನ ಪರಿಷ್ಕರಣೆಯನ್ನು ಇನ್ನೂ 12 ತಿಂಗಳು ವಿಸ್ತರಿಸ ಬೇಕು, ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಮತ್ತು ಹಲವು ವರ್ಷಗಳಿಂದ ಬಾಕಿ ಇರುವ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸುವುದು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಳ ಬಗ್ಗೆ ತಾವು ಮತ್ತು ಸರ್ಕಾರ ಸಕಾರತ್ಮಕವಾಗಿದೆ. ಆದರೆ ಹಣಕಾಸಿನ ವಿಚಾರವಾಗಿರುವುದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸಚಿವ ಸಂಪುಟದ ಮುಂದಿಟ್ಟು, ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅಧಿವೇಶನ ನಂತರ ಸಭೆ
ವಿಧಾನ ಮಂಡಲ ಅಧಿವೇಶನದ ನಂತರ ಮುಖ್ಯಮಂತ್ರಿಗಳೊಂದಿಗೆ ಸಭೆ ನಿಗಧಿ ಮಾಡಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಎಲ್ಲ ನೌಕರರಿಗೆ ಆರೋಗ್ಯ ವಿಮೆ
ಕೆ.ಎಸ್.ಆರ್.ಟಿ.ಸಿ ತನ್ನ ಸಿಬ್ಬಂದಿ ಮತ್ತು ನೌಕರರಿಗೆ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದೆ. ಇದೆ ಮಾದರಿಯಲ್ಲಿ ಬಿ.ಎಂ.ಟಿ.ಸಿ, ಕೆ.ಕೆ.ಆರ್.ಟಿ.ಸಿ, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ನಿಗಮಗಳ ನೌಕರರಿಗೂ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಪ್ರಕಟಿಸಿದರು.
ನಿವೃತ್ತರಿಗೆ ಉಚಿತ ಪ್ರಯಾಣ
ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವಾರ್ಷಿಕ 500 ರೂಪಾಯಿ ಪಡೆದು ಬಸ್ ಪಾಸ್ ವಿತರಿಸಲಾಗುತ್ತಿತ್ತು. ಇನ್ನೂ ಮುಂದೆ ಉಚಿತವಾಗಿ ಬಸ್ ಪಾಸ್ ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.



