*ಕಸ ಎಸೆಯುವ ವಿಷಯವಾಗಿ ಜಗಳ: ಖಾನಾಪುರ ಮೂಲದ ದಂಪತಿ ಮೇಲೆ ಹಲ್ಲೆ; ಪತ್ನಿ ಸಾವು, ಪತಿಯ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಸಾಂಗ್ಲಿ ನಗರದ ಹೊರವಲಯದ ಬಡಾವಣೆಯಲ್ಲಿ ಹೊಸದಾಗಿ ಮನೆ ಕಟ್ಟಿಕೊಂಡು ವಾಸವಿದ್ದ ಖಾನಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದ ದಂಪತಿಗಳ ಮೇಲೆ ಪಕ್ಕದ ಮನೆಯ ವ್ಯಕ್ತಿ ಕಸ ಎಸೆಯುವ ವಿಷಯವಾಗಿ ಜಗಳ ತೆಗೆದು ಸುತ್ತಿಗೆ ಹಾಗೂ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟು, ಪತಿ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಹೆಬ್ಬಾಳ ಗ್ರಾಮದ ನಿವಾಸಿ ಮನಿಷಾ ಮೋಹನ ಕೇಸರೇಕರ (37) ಮೃತಪಟ್ಟಿದ್ದು, ಅವರ ಪತಿ ಮೋಹನ ನಾಗಪ್ಪ ಕೇಸರೇಕರ ಗಂಭೀರವಾಗಿ ಗಾಯಗೊಂಡು ಮೀರಜ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಗೆ ಪೆಟ್ಟಾಗಿ ಹೆಚ್ಚಿನ ರಕ್ತಸ್ರಾವವಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮೋಹನ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇವರ ಮೇಲೆ ಹಲ್ಲೆ ನಡೆಸಿದ ಪಕ್ಕದ ಮನೆಯ ಫರೀದ್ ಅಬ್ದುಲ್ ಶೇಖ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ: ಹೆಬ್ಬಾಳ ಮೂಲದ ಮೋಹನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದು, ಕಳೆದ ಹಲವು ವರ್ಷಗಳಿಂದ ಸಾಂಗ್ಲಿ ನಗರದ ಹೊರವಲಯದಲ್ಲಿ ಕೆಲಸ ನಿರ್ವಹಿಸಿಕೊಂಡು ಕುಪವಾಡ ಪ್ರದೇಶದಲ್ಲಿ ಕುಟುಂಬಸಮೇತ ವಾಸವಾಗಿದ್ದರು. ಈ ದಂಪತಿಗಳು ಸಾಂಗ್ಲಿ ಹೊರವಲಯದ ಶಾಂತಿ ಕಾಲನಿಯಲ್ಲಿ ಈಚೆಗೆ ನೂತನ ಮನೆ ನಿರ್ಮಿಸಿಕೊಂಡಿದ್ದು, ಅಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಶನಿವಾರ ಮನಿಷಾ ಮತ್ತು ಪಕ್ಕದ ಮನೆಯ ಫರೀದ ಅವರ ನಡುವೆ ಕಸ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಈ ವೇಳೆ ಮೋಹನ ಮಧ್ಯಪ್ರವೇಶಿಸಿದ್ದು, ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ಫರೀದ್ ಮೋಹನ ಅವರ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದು, ಮನಿಷಾ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ಮಾಹಿತಿ ಪಡೆಯುತ್ತಲೇ ಸ್ಥಳಕ್ಕಾಗಮಿಸಿದ ಸಾಂಗ್ಲಿ ಎಸ್.ಪಿ ತುಷಾರ ದೋಷಿ ಘಟನೆಯ ತನಿಖೆಯನ್ನು ಚುರುಕುಗೊಳಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟ ಮನಿಷಾ ಅವರ ಶವವನ್ನು ಭಾನುವಾರ ಹೆಬ್ಬಾಳ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಖಾನಾಪುರ ತಾಲ್ಲೂಕಿನ ಸಾವಿರಾರು ಕುಶಲಕರ್ಮಿ ಕುಟುಂಬಗಳು ಉದ್ಯೋಗ ಅರಸಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವಿವಿಧೆಡೆ ವಲಸೆ ಹೋಗಿದ್ದು, ಸಾಂಗ್ಲಿಯಲ್ಲಿ ನಡೆದಿರುವ ಈ ಘಟನೆಯಿಂದ ವಲಸೆ ಹೋದವರಲ್ಲಿ ಆಘಾತ ಮೂಡಿದೆ. ತಾಲ್ಲೂಕಿನ ಮುಖಂಡರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಅಮಾಯಕರ ಮೇಲೆ ಹಲ್ಲೆ ನಡೆಸಿ ಒಂದು ಕುಟುಂಬದ ಅವನತಿಗೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಹೆಬ್ಬಾಳಕ್ಕೆ ಭಾನುವಾರ ಭೇಟಿ ನೀಡಿದ ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ ಘಟನೆಯಿಂದ ಆಘಾತಕ್ಕೆ ಒಳಗಾಗಿರುವ ಕೇಸರೆಕರ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.




