*ಹೆಲಿಕಾಪ್ಟರ್ ಪತನ: ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಸೇರಿದಂತೆ 7 ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಏಳು ಜನ ಸಾವನ್ನಪ್ಪಿರುವ ಘಟನೆ ಮಧ್ಯ ಕೀನ್ಯಾದಲ್ಲಿ ನಡೆದಿದೆ.
ಈಕ್ವೆಡಾರ್ ದೇಶದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥ, ಅವರ ಪತ್ನಿ ಮತ್ತು ಐವರು ಅಮೆರಿಕದ ಪ್ರಜೆಗಳು ಸೇರಿದಂತೆ ಎಲ್ಲಾ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೀನ್ಯಾ ರಾಜಧಾನಿ ನೈರೋಬಿಯ ಉತ್ತರ ಭಾಗದಲ್ಲಿರುವ ಸಾಂಬುರು ಕೌಂಟಿಯ ಲೊಯಿಸಾಬಾ ವನ್ಯಜೀವಿ ಅಭಯಾರಣ್ಯದಿಂದ ಹೆಲಿಕಾಪ್ಟರ್ ಹೊರಟ ಕೆಲವೇ ಕ್ಷಣಗಳಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ.
ಸಮುದ್ರ ಮಟ್ಟದಿಂದ ಸುಮಾರು 2 ಸಾವಿರ ಮೀಟರ್ ಎತ್ತರವಿರುವ ಪ್ರಸಿದ್ಧ ಪಾದಯಾತ್ರೆ ತಾಣವಾದ ‘ಮೌಂಟ್ ಓಲೋಲೋಕ್ವೆ’ ಬುಡದಲ್ಲಿ ಹೆಲಿಕಾಪ್ಟರ್ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲಿ ದಟ್ಟ ಕಪ್ಪು ಹೊಗೆ ಮತ್ತು ಬೆಂಕಿ ಆವರಿಸಿತ್ತು.
ಮೃತಪಟ್ಟ ಐವರು ಅಮೆರಿಕನ್ ಪ್ರಜೆಗಳಲ್ಲಿ ಸ್ಪ್ಯಾನಿಷ್ ಪ್ರಸಾರ ಸಂಸ್ಥೆ ‘ಟೆಲಿಮುಂಡೋ’ ಮತ್ತು ‘ಎನ್ಬಿಸಿ ಯುನಿವರ್ಸಲ್’ನ ಹಿರಿಯ ವ್ಯವಸ್ಥಾಪಕ ಜೋಸ್ ಆಲ್ಬರ್ಟೊ ಸುವಾರೆಜ್ ಸೇರಿದ್ದಾರೆ. ಹೆಲಿಕಾಪ್ಟರ್ನಲ್ಲಿ ಓರ್ವ ಪೈಲಟ್ ಹಾಗೂ ಆರು ಮಂದಿ ಪ್ರವಾಸಿಗರಿದ್ದರು.
ಈಕ್ವೆಡಾರ್ ದೇಶದ ರಾಷ್ಟ್ರೀಯ ಗುಪ್ತಚರ ಕೇಂದ್ರದ ಮುಖ್ಯಸ್ಥರಾಗಿದ್ದ 42 ವರ್ಷದ ಮೈಕೆಲ್ ಸೆನ್ಸಿ-ಕಾಂಟುಗಿ ಮತ್ತು ಅವರ ಪತ್ನಿ ಸ್ಟೆಫನಿ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಮೈಕೆಲ್ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರ ಅತ್ಯಂತ ಆಪ್ತರಾಗಿದ್ದರು ಎಂದು ತಿಳಿದ ಬಂದಿದೆ


