*ಬೆಟ್ಟದ ತುದಿಯಲ್ಲಿ ನಿಂತಿದ್ದ ಮಗನ ರಕ್ಷಣೆಗೆ ಹೋದ ತಂದೆ ಆಯತಪ್ಪಿ ಬಿದ್ದು ಸಾವು; ಕಣ್ಮುಂದೆಯೇ ನಡೆದ ಘಟನೆ ಕಂಡು ಬೆಟ್ಟದಿಂದ ಜಿಗಿದು ತಾಯಿಯೂ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಬೆಟ್ಟದ ಅಂಚಿನಲ್ಲಿ ನಿಂತಿದ್ದ 18 ವರ್ಷದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಸಾವನ್ನಪ್ಪಿದ್ದು, ಇಬ್ಬರ ಸಾವನ್ನು ಕಣ್ಣಾರೆ ಕಂಡ ತಾಯಿಯೂ ಅವರನ್ನೇ ಹಿಂಬಾಲಿಸಿದ್ದು, ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ನಡೆದಿದೆ.
ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದ ಖೆವ್ಡಾ ಬೆಟ್ಟದಲ್ಲಿ ಈ ದುರಂತ ಸಂಭವಿಸಿದೆ. ಮಗ, ತಂದೆ-ತಾಯಿ ಮೂವರೂ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ. ಪೊಲೀಸರು, ಸಾರ್ವಜನಿಕರ ಸಮ್ಮುಖದಲ್ಲಿಯೇ ಘಟನೆ ನಡೆದಿದೆ. ಮಗನ ರಕ್ಷಣೆಗೆ ಹೋಗಿದ್ದ ತಂದೆಯೂ ಆತನ ಜೊತೆಗೆ ಕಣಿವೆಗೆ ಬಿದ್ದಿದ್ದರೆ, ಆ ಬಳಿಕ ತಾಯಿಯೂ ಅದೇ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವ್ಲಾಯಿ ಪ್ರದೇಶದ ನಿವಾಸಿ 18 ವರ್ಷದ ಯುವಕ ಬೆಟ್ಟದ ಅಂಚಿಗೆ ತೆರಳಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳತೊಡಗಿದ್ದ. ಆತನ ತಂದೆ-ತಾಯಿ ಹಾಗೂ ಗ್ರಾಮಸ್ಥರು ಸತತ ಮೂರು ಗಂಟೆಗಳ ಕಾಲ ಮನವೊಲಿಸಲು ಯತ್ನಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಡ ತಂದೆ-ತಾಯಿ ಬಗ್ಗೆ ಯೋಚಿಸು. ಉತ್ತಮ ಭವಿಷ್ಯದ ಬಗ್ಗೆ ವಿಚಾರ ಮಾಡುವಂತೆ ಮನವಿ ಮಾಡಿದ್ದರು. ಆದಾಗ್ಯೂ ಹಠ ಬಿಡದ ಯುವಕ ಬೆಟ್ಟದ ತುತ್ತ ತುಡಿಯಲ್ಲಿ ನಿಂತಿದ್ದ. ಆತನ ತಂದೆ ಮಗನನ್ನು ಹೇಗಾದರೂ ರಕ್ಷಿಸಬೇಕು ಎಂದು ಧೈರ್ಯಮಾಡಿ ಮುಂದಡಿ ಇಟ್ಟು ಮಗನ ಕೈ ಹಿಡಿದಿದ್ದಾರೆ ಅಷ್ಟರಲ್ಲಿ ಮಗ ಬೆಟ್ಟದಿಂದ ಜಿಗಿದೇ ಬಿಟ್ಟಿದ್ದಾನೆ. ಆಯತಪ್ಪಿದ ತಂದೆ ಮಗನ ಹಿಂದಿಯೇ ಬೆಟ್ಟದಿಂದ ಕೆಳಗೆ ಬಿದ್ದಿದ್ದಾರೆ. ಮಗ ಹಾಗೂ ಪತಿ ಇಬ್ಬರೂ ಬೆಟ್ಟದಿಂದ ಬಿದ್ದಿದ್ದನ್ನು ಕಂಡ ತಾಯಿ ತಕ್ಷಣ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕನೊಬ್ಬನ ದುಡುಕಿನ ನಿರ್ಧಾರಕ್ಕೆ ಒಂದೇ ಕುಟುಂಬದ ಮೂವರು ದುರಂತ ಅಂತ್ಯಕಂಡಿದ್ದಾರೆ. ಈ ಭೀಕರ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.


