*ಖರ್ಗೆ ಅವರಿಗೆ ಅಪಮಾನ ಖಂಡಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಿದ ಸ್ಥಳಕ್ಕೆ ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಣ ನಡೆಸಲಾಗಿದ್ದು, ಇದು ನಮ್ಮ ನಾಯಕರಿಗೆ ಅಪಮಾನ ಮಾಡಲಾಗಿದೆ ಇದು ಖಂಡಿನೀಯ ಎಂದು ಶುಕ್ರವಾರ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಭವನದಿಂದ ಆರ್‌ಟಿಒ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ ಮಾತನಾಡಿ, ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಖಂಡನೀಯ ಕೃತ್ಯ ಎಂದು ಆರೋಪಿಸಿದರು. ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಿ ಉನ್ನತ ಸ್ಥಾನಕ್ಕೇರಿರುವ ಖರ್ಗೆ ಅವರಿಗೆ ಮಾಡಿರುವ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ. ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ರಾಜಾ ಸಲೀಂ ಕಾಶಮನವರ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ದಲಿತರು ಸೇರಿದಂತೆ ಎಲ್ಲ ಸಮುದಾಯಗಳ ಪ್ರಮುಖ ನಾಯಕರಾಗಿದ್ದಾರೆ. ಅವರು ಭಾಗವಹಿಸಿದ್ದ ಕಾರ್ಯಕ್ರಮದ ಬಳಿಕ ಗಂಗಾಜಲ ಪ್ರೋಕ್ಷಿಸಿ ಹವನ ನಡೆಸಿರುವುದು ಅಸ್ಪೃಶ್ಯತೆ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಬಿಜೆಪಿಯವರು ತಮ್ಮ ದಲಿತ ವಿರೋಧಿ ಧೋರಣೆಯನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ವಕೀಲರಾದ ಆರ್.ಪಿ. ಪಾಟೀಲ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಸಂದೇಶ ಸಾರಿದ್ದರು. ಅದೇ ಸಮಾನತೆಯ ತತ್ವದ ಆಧಾರದ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರೂಪಿಸಿದ್ದಾರೆ. ಆದರೆ ಇಂತಹ ಘಟನೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಸ್ಪೃಶ್ಯತೆಯ ಮನಸ್ಥಿತಿಯನ್ನು ಕೈಬಿಡದಿದ್ದರೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಕಾರ್ಯಕರ್ತರು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ., ಪ್ರಚಾರ ಸಮಿತಿ ಅಧ್ಯಕ್ಷ ರಾಜಾ ಸಲೀಂ ಕಾಶಿಮನವರ್, ಬಸವರಾಜ ಶೇಗಾವಿ, ಪರಶುರಾಮ ವಗ್ಗಣ್ಣವರ, ಮಲ್ಲೇಶ್ ಚೌಗಲಾ, ರಾಜದೀಪ್ ಕೌಜಲಗಿ, ಸಿದ್ರಾಯ ಮೆಟ್ರಿ, ಆರ್.ಪಿ. ಪಾಟೀಲ್, ಸಲೀಂ ಖತೀಬ್, ಬಾಳೇಶ್ ದಾಸನಟ್ಟಿ, ದಿಲಾವರ್ ಪೆಂದಾರಿ, ಇಮ್ರಾನ್ ತಪಕೇರೆ, ಸಾಗರ್ ದಿವಟಗಿ, ರಿಕ್ಕಿ ನವಗ್ರಹ, ರಾಜು ಸಿಂಗೆ, ರಾಜು ಸಾಖೆ, ಅರ್ಚನಾ ಮೆಸ್ತ್ರಿ ಹಾಗೂ ಕುಶಪ್ಪ ನಾಯಕ್ ,ರಸೂಲ್ ಮುಲ್ಲಾ, ವಿಕ್ಕಿ ಸಿಂಗ್, ಅಯಾಜ್ ಜಕಾತಿ, ಗಜು ದರ್ನಾಯಕ್, ಮಹಾದೇವ್ ಕೋಲಿ, ಮಹಾಂತೇಶ್ ರೌತ್, ಬಾಬುಲಾಲ್ ಬಗ್ವಾನ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.



